187 ನಾಣ್ಯಗಳನ್ನು ನುಂಗಿದ ದ್ಯಾಮಣ್ಣ – ದಿನಕ್ಕೊಂದು ನಾಣ್ಯ ನುಂಗಿದವನು ಹೇಳಿದ್ದೇನು?
ಹೊಟ್ಟೆ ತುಂಬಾ ನಾಣ್ಯ ತಿಂದವನ ಕಥೆ ಕೇಳಿ ವೈದ್ಯರೇ ಸುಸ್ತು..!
ರಾಯಚೂರು: ಜನರ ಬಳಿ ಭಿಕ್ಷೆ ಬೇಡುವುದು. ನಾಣ್ಯ ಕೊಟ್ಟರೆ ಗುಳುಂ ಮಾಡುವುದು. ಹೀಗೆ ಮಾಡ್ತಾ ಮಾಡ್ತಾ 187 ನಾಣ್ಯಗಳನ್ನು ವ್ಯಕ್ತಿಯೊಬ್ಬರು ನುಂಗಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದ ನಿವಾಸಿಯಾದ 58 ವರ್ಷದ ದ್ಯಾಮಣ್ಣ ಕಟ್ಟಿಮನಿ ಬರೊಬ್ಬರಿ 187 ನಾಣ್ಯಗಳನ್ನು ನುಂಗಿ ಅಚ್ಚರಿ ಜೊತೆಗೆ ಗಾಬರಿ ಮೂಡಿಸಿದ್ದಾರೆ. ಸದ್ಯ ಇವರು ನುಂಗಿದ್ದ ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಇವರು ಇಷ್ಟು ನಾಣ್ಯಗಳನ್ನ ನುಂಗಿದ್ದು ಯಾಕೆ ಅನ್ನೋ ವಿಚಾರ ಕೇಳಿದ್ರೆ ಮಾತ್ರ ವಿಚಿತ್ರ ಅನ್ಸುತ್ತೆ.
ಇದನ್ನೂ ಓದಿ : ಹುಟ್ಟುವಾಗಲೇ ಹೆಣ್ಣು ಮಗುವಿಗೆ ಇದ್ದಿತ್ತು 2 ಇಂಚಿನ ಉದ್ದದ ಬಾಲ..! – ಅಚ್ಚರಿಯಾದರೂ ಇದು ಸತ್ಯ..!
ಕಳೆದ ಮಂಗಳವಾರ ದ್ಯಾಮಣ್ಣನಿಗೆ ವಿಪರೀತ ಹೊಟ್ಟೆನೋವು ಕಾಡುತ್ತಿತ್ತು. ಹೊಟ್ಟೆ ನೋವು ತಾಳಲಾರದೇ ಬಾಗಲಕೋಟೆ ನಗರದ ಕುಮಾರೇಶ್ವರ ಖಾಸಗಿ ಆಸ್ಪತ್ರೆಗೆ ಬಂದಿದ್ರು. ಈ ವೇಳೆ ವೈದ್ಯರು ಎಕ್ಸರೇ, ಸ್ಕ್ಯಾನಿಂಗ್ ಮಾಡಿದ್ದಾರೆ. ಆಗ ರಿಪೋರ್ಟ್ ನೋಡಿ ಶಾಕ್ ಆಗಿದ್ದಾರೆ. ದ್ಯಾಮಣ್ಣನ ಹೊಟ್ಟೆಯಲ್ಲಿ ರಾಶಿ ರಾಶಿ ನಾಣ್ಯಗಳು ಕಂಡುಬಂದಿತ್ತು. ತಡಮಾಡದೇ ತಜ್ಞವೈದ್ಯರಾದ ಈಶ್ವರ ಕಲಬುರ್ಗಿ, ಪ್ರಕಾಶ್ ಕಟ್ಟಿಮನಿ ಸೇರಿದಂತೆ ನಾಲ್ವರ ತಂಡ ಶಸ್ತ್ರಚಿಕಿತ್ಸೆ ಆರಂಭಿಸಿದೆ. ಸತತ 2 ಗಂಟೆಗಳ ಕಾಲ ಆಪರೇಷನ್ ಮಾಡಿ ನಾಣ್ಯಗಳೆಲ್ಲವನ್ನೂ ಹೊರತೆಗೆದಿದ್ದಾರೆ.
ದ್ಯಾಮಣ್ಣನ ಹೊಟ್ಟೆಯಲ್ಲಿ 5 ರೂಪಾಯಿಯ 56 ನಾಣ್ಯಗಳು, 2 ರೂಪಾಯಿಯ 51 ನಾಣ್ಯಗಳು ಹಾಗೇ 1 ರೂಪಾಯಿಯ 80 ಕಾಯಿನ್ಗಳು ಪತ್ತೆಯಾಗಿವೆ. ಈ ನಾಣ್ಯಗಳೆಲ್ಲಾ ಬರೋಬ್ಬರಿ 1 ಕೆಜಿ ತೂಗುತ್ತವೆ.
ದ್ಯಾಮಣ್ಣನವರು ಇಷ್ಟೊಂದು ನಾಣ್ಯ ನುಂಗಿದ್ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿತ್ತು. ಈ ಬಗ್ಗೆ ಅವರೇ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಜನರ ಬಳಿ ಭಿಕ್ಷೆ ಬೇಡಿ ನಾಣ್ಯ ಸಂಗ್ರಹ ಮಾಡಿಕೊಳ್ಳುತ್ತಿದ್ದೆ. ನಂತರ ಆ ನಾಣ್ಯಗಳನ್ನು ನುಂಗಿ ನೀರು ಕುಡಿಯುತ್ತಿದ್ದೆ. ದಿನಕ್ಕೆ ಎರಡು ಮೂರು ಅಂತ ನಾಣ್ಯ ನುಂಗುತ್ತಿದ್ದೆ ಎಂದು ವಿವರಿಸಿದ್ದಾರೆ. ಬೆಳಿಗ್ಗೆ ಮಲವಿಸರ್ಜನೆ ವೇಳೆ ನಾಣ್ಯ ಆಚೆ ಹೋಗುತ್ತದೆ ಅಂತ ನುಂಗುತ್ತಿದ್ದೆ. ಆದರೆ ಎಲ್ಲಾ ನಾಣ್ಯಗಳು ಹೊಟ್ಟೆಯಲ್ಲೇ ಇದ್ದವು. ನಾಣ್ಯ ನುಂಗೋದಕ್ಕೆ ಭಿಕ್ಷೆ ಬೇಡುತ್ತಿದ್ದೆ ಎಂದು ದ್ಯಾಮಣ್ಣ ತಿಳಿಸಿದ್ದಾರೆ. ಇವರು ಈ ರೀತಿ ಮಾಡಲು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರಬಹುದು ಅನ್ನೋ ಅನುಮಾನವೂ ಮೂಡಿದೆ.