ಬೆಂಗಳೂರಿನಲ್ಲಿ ಇನ್ನೂ 18 ಹೊಸ ಮೆಟ್ರೋ ಸ್ಟೇಷನ್! – 2025ರ ಮಾರ್ಚ್ ವೇಳೆಗೆ ಮೆಟ್ರೋ ಗುಲಾಬಿ ಮಾರ್ಗದ ಕಾಮಗಾರಿ ಪೂರ್ಣ
ಬೆಂಗಳೂರು: ಬೆಂಗಳೂರು ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ 70%, 80% ಪೂರ್ಣವಾಗಿದೆ. 2025ರ ಮಾರ್ಚ್ ವೇಳೆಗೆ ಈ ಮೆಟ್ರೋ ಕಾಮಗಾರಿ ಪೂರ್ಣವಾಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ನಗರದ ಲಕ್ಕಸಂದ್ರ ಸುರಂಗ ಮಾರ್ಗ ಹಾಗೂ ಮಹಾತ್ಮ ಗಾಂಧಿ ರಸ್ತೆಯ ಸುರಂಗ ಮಾರ್ಗದ ಬಳಿ ಗುಲಾಬಿ ಮಾರ್ಗದ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ. ಕಾಮಕಾರಿ ಸ್ಥಳಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಕಾರಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಲಕ್ಕಸಂದ್ರ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ಪರಿಶೀಲನೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಮೆಟ್ರೋ ಸುರಂಗ ಕಾಮಗಾರಿ ಉತ್ತಮವಾಗಿ ಸಾಗುತ್ತಿದೆ. ಅಧಿಕಾರಿಗಳು ಎಷ್ಟೇ ಹೇಳಿದರೂ ಕಾಮಗಾರಿಯ ಪ್ರಗತಿಯನ್ನ ನಾನು ಕಣ್ಣಾರೆ ನೋಡ್ಬೇಕು ಅಂತಾ ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದರು.
ಇದನ್ನೂ ಓದಿ: ಜುಲೈ 19ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ – ಆಗಸ್ಟ್ ತಿಂಗಳಿನಲ್ಲಿ ಯಜಮಾನಿ ಖಾತೆಗೆ ಹಣ ಜಮೆ
ಅಧಿಕಾರಿಗಳ ಮಾಹಿತಿ ಪ್ರಕಾರ, 20.9 ಕಿಮೀ ಸುರಂಗ ಮಾರ್ಗ ಆಗಿದೆ. ಒಟ್ಟು 18 ನಿಲ್ದಾಣಗಳನ್ನ ಮಾಡಲಾಗುತ್ತಿದೆ. 4 ಪ್ಯಾಕೆಜ್ ನಲ್ಲಿ ಈ ಯೋಜನೆ ತೆಗೆದುಕೊಳ್ಳಲಾಗಿದೆ. ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ 70%, 80% ಪೂರ್ಣವಾಗಿದೆ. 2025ರ ಮಾರ್ಚ್ ವೇಳೆಗೆ ಈ ಮೆಟ್ರೋ ಕಾಮಗಾರಿ ಪೂರ್ಣವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು, ಗುತ್ತಿಗೆದಾರರು, ಸರ್ಕಾರ ಎಲ್ಲರ ಸಹಕಾರ ಬೇಕು ಎಂದು ಡಿಕೆಶಿ ಹೇಳಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕಾಗಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಬಹಳ ದೊಡ್ಡ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಸುರಂಗ ರಸ್ತೆ ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಹೇಗೆ ಮಾಡಲಾಗುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ಈ ವಿಚಾರವಾಗಿ ಸದ್ಯದಲ್ಲೇ ಮಾಹಿತಿ ನೀಡುತ್ತೇನೆ. ಈ ಕಾಮಗಾರಿಗಳು ತಾಂತ್ರಿಕವಾಗಿ ನಡೆಯುತ್ತವೆ. ಇವು ಬಹಳ ಸುರಕ್ಷಿತವಾಗಿ ಮಾಡಬೇಕಾದ ಕೆಲಸ. ಹೀಗಾಗಿ ಅದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಯಾರು ಟೀಕೆ ಮಾಡುತ್ತಾರೆ ಎಂಬುದು ಮುಖ್ಯ ಅಲ್ಲ ಎಂದಿದ್ದಾರೆ.