ಸಚಿವ ಸಂಪುಟ ವಿಸ್ತರಣೆಗೆ ದಿಲ್ಲಿಯಲ್ಲಿ ಹೈವೋಲ್ಟೇಜ್‌ ಮೀಟಿಂಗ್‌ – ಯಾರ್ಯಾರಿಗೆ ಸಿಗಲಿದೆ ಮಂತ್ರಿಗಿರಿ?

ಸಚಿವ ಸಂಪುಟ ವಿಸ್ತರಣೆಗೆ ದಿಲ್ಲಿಯಲ್ಲಿ ಹೈವೋಲ್ಟೇಜ್‌ ಮೀಟಿಂಗ್‌ – ಯಾರ್ಯಾರಿಗೆ ಸಿಗಲಿದೆ ಮಂತ್ರಿಗಿರಿ?

ನವದೆಹಲಿ: ರಾಜ್ಯ ಕಾಂಗ್ರೆಸ್‌ ನಲ್ಲಿ ಸಿಎಂ ಕುರ್ಚಿ ಜಟಾಪಟಿ ಬಳಿಕ ಸಂಪುಟ ರಚನೆಗೆ ಸರ್ಕಸ್‌ ನಡೆಯುತ್ತಿದೆ. ಒಂದೆಡೆ ಕೆಲ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್‌ ಜೊತೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಹೈಕಮಾಂಡ್‌ ಜೊತೆ ಮೇಲಿಂದ ಮೇಲೆ ಮೀಟಿಂಗ್‌ ನಡೆಸುತ್ತಿದ್ದಾರೆ. ಈಗಾಗಲೇ ಸಚಿವರ ಪಟ್ಟಿ ಬಹುತೇಕ ಫೈನಲ್‌ ಆಗಿದೆ ಎನ್ನಲಾಗುತ್ತದೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕಾಗಿ ಲಾಬಿ – ಶಾಸಕರಿಗೆ ಷರತ್ತು ವಿಧಿಸಿದ ಕಾಂಗ್ರೆಸ್!

ಈಗಾಗಲೇ ಸಿಎಂ, ಡಿಸಿಎಂ ಸೇರಿ ಒಟ್ಟು 10 ಮಂದಿ ಸ್ಥಾನ ಪಡೆದಿದ್ದಾರೆ. ಇನ್ನು ಉಳಿದಿರುವ 23 ಸ್ಥಾನಗಳನ್ನು ಹಂಚಿಕೆ ಮಾಡಬೇಕಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಂಭವನೀಯ ಸಚಿವರ ಪಟ್ಟಿ ಸಿದ್ಧಪಡಿಸಲಾಗಿದ್ದು, ನಂತರ ಈ ಪಟ್ಟಿ ಮಲ್ಲಿಕಾರ್ಜುನ ಖರ್ಗೆ ಅವರ ಕೈ ಸೇರಲಿದೆ ಎನ್ನಲಾಗುತ್ತಿದೆ.

ಸಂಭವನೀಯ ಸಚಿವರ ಪಟ್ಟಿ ಹೀಗಿದೆ..

ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್​, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಬಸವರಾಜ ರಾಯರೆಡ್ಡಿ, ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಎಸ್​ಎಸ್​ ಮಲ್ಲಿಕಾರ್ಜುನ, ಶಿವರಾಜ ತಂಗಡಗಿ, ಭೈರತಿ ಸುರೇಶ್, ಕೃಷ್ಣ ಭೈರೇಗೌಡ, ರಹೀಂ ಖಾನ್​, ಡಾ.ಅಜಯ್ ಸಿಂಗ್, ಸಿ.ಪುಟ್ಟರಂಗಶೆಟ್ಟಿ​, ಪಿ.ಎಂ.ನರೇಂದ್ರಸ್ವಾಮಿ, ಎಂ.ಸಿ.ಸುಧಾಕರ್​, ಡಿ.ಸುಧಾಕರ್, ಹೆಚ್.ಕೆ.ಪಾಟೀಲ್, ಎನ್.ಚಲುವರಾಯಸ್ವಾಮಿ, ಕೆ.ಎನ್.ರಾಜಣ್ಣ ಅಥವಾ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು, ಶುಕ್ರವಾರ ಅಥವಾ ಶನಿವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಸಿದ್ದಪಡಿಸಿರುವ ಸಚಿವರ ಪಟ್ಟಿ ಮಲ್ಲಿಕಾರ್ಜುನ ಖರ್ಗೆ ಕೈಸೇರಿದ ಬಳಿಕ ಮೂರ್ನಾಲ್ಕು ಹೆಸರುಗಳು ಬದಲಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಶರಣ ಪ್ರಕಾಶ್ ಪಾಟೀಲ್, ದಿನೇಶ್ ಗುಂಡೂರಾವ್, ಆರ್ ವಿ ದೇಶಪಾಂಡೆ, ಬಿಕೆ ಹರಿಪ್ರಸಾದ್ ಸಚಿವ ಸಂಪುಟಕ್ಕೆ ಸೇರ್ಪಡೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಧಾರ ಕೈಗೊಳ್ಳಲುವ ಸಾಧ್ಯತೆ ಇದೆ. ಗುರುವಾರ ಸಂಜೆ ಸಿದ್ದರಾಮಯ್ಯ ಡಿಕೆಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಚಿವರ ಪಟ್ಟಿ ಫೈನಲ್‌ ಮಾಡುವ ಸಾಧ್ಯತೆ ಇದೆ. ಒಂದೆರಡು ದಿನಗಳಲ್ಲಿ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆಗಳಿವೆ.

suddiyaana