ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮತ್ತೆ ಮೂರು ಜಿಂಕೆಗಳು ಸಾವು – ಸಾವಿನ ಸಂಖ್ಯೆ 16ಕ್ಕೆ ಏರಿಕೆ!

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮತ್ತೆ ಮೂರು ಜಿಂಕೆಗಳು ಸಾವು – ಸಾವಿನ ಸಂಖ್ಯೆ 16ಕ್ಕೆ ಏರಿಕೆ!

ಬೆಂಗಳೂರು: ಕಳೆದೊಂದು ವಾರದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿಗಳ ಸಾವು ಮುಂದುವರೆದಿದೆ. ಮಾರಕ ವೈರಸ್​ಗೆ ತುತ್ತಾಗಿ ಏಳು ಚಿರತೆ ಮರಿಗಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಸಸ್ಯಹಾರಿ ಸಫಾರಿಯಲ್ಲಿದ್ದ ಜಿಂಕೆಗಳ ಸರಣಿ ಸಾವಾಗುತ್ತಿದೆ. ಉದ್ಯಾನವನದಲ್ಲಿ ಬುಧವಾರ ಮತ್ತೆ ಮೂರು ಜಿಂಕೆಗಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16ಕ್ಕೇರಿದೆ.

ಕಳೆದ ಒಂದು ವಾರದಿಂದ ಬನ್ನೇರುಘಟ್ಟದ ಸಸ್ಯಹಾರಿ ಸಫಾರಿಯ ಕ್ವಾರೆಂಟೈನ್ ಜಾಗದಲ್ಲಿ ಜಿಂಕೆಗಳನ್ನು ನೋಡಿಕೊಳ್ಳಲಾಗಿತ್ತು. ಬಳಿಕ ಅವುಗಳನ್ನು ಸಸ್ಯಹಾರಿ ಸಫಾರಿಗೆ ಬಿಟ್ಟಿದ್ದು, ಹಿಂಡುಗಳ ಕಾದಾಟ ಹಾಗೂ ಜಂತುಹುಳು ಸಮಸ್ಯೆಯಿಂದ 37 ಜಿಂಕೆಗಳ ಪೈಕಿ 15 ಜಿಂಕೆಗಳು ಸರಣಿ ಸಾವನ್ನಪ್ಪಿವೆ. ಮೃತಪಟ್ಟ ಜಿಂಕೆಗಳ ಹೊಟ್ಟೆಯ ಕೆಲಭಾಗದಲ್ಲಿ ಭಾರಿ ಗಾತ್ರದ ಊತ ಕಾಣಿಸಿಕೊಂಡಿದ್ದು, ಅವುಗಳ ಮರಣೋತ್ತರ ಪರೀಕ್ಷೆ ನಡೆಸಿ ವರದಿಯ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: 7 ಚಿರತೆ ಮರಿಗಳ ಸಾವಿನ ಬೆನ್ನಲ್ಲೇ 13 ಜಿಂಕೆಗಳು ಬಲಿ – ಸರಣಿ ಸಾವಿನ ಹಿನ್ನೆಲೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆತಂಕ

ಬನ್ನೇರುಘಟ್ಟ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಈ ಬಗ್ಗೆ ಮಾತನಾಡಿದ್ದು,ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆ ಉದ್ಯಾನದಿಂದ ತರುವಾಗಲೇ ರಕ್ತಹೀನತೆಯಿಂದ ಬಳಲುತ್ತಿದ್ದವು. ಇಲ್ಲಿ ನೀಡಲಾಗುತ್ತಿರುವ ಆಹಾರಕ್ಕೆ ಹೊಂದಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಚಿಕಿತ್ಸೆ ನೀಡಲು ಮುಂದಾದರೆ ಕೆಲವೊಮ್ಮೆ ಹೃದಯಾಘಾತಕ್ಕೆ ಒಳಗಾಗುತ್ತಿವೆ. ನಾಡಿನ ವಾತಾವರಣದಲ್ಲಿ ಬೆಳೆದಿರುವ ಜಿಂಕೆಗಳು, ಕಾಡಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲ ಸಮಯ ಬೇಕಾಗುತ್ತದೆ. ವೈದ್ಯರು ಮತ್ತು ತಜ್ಞರ ಸಲಹೆಯಂತೆ ಔಷದೋಪಚಾರ ಮುಂದುವರಿದಿದೆ ಎಂದರು.

ಇನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿರತೆ ಮತ್ತು ಜಿಂಕೆಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ, ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಗುರುವಾರ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.

Shwetha M