ಪ್ರವಾಸಿಗರನ್ನು ರಂಜಿಸುತ್ತಿದ್ದ ರಾಮ ಇನ್ನಿಲ್ಲ! – ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಂಹ ಸಾವು
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪದೇ ಪದೆ ಪ್ರಾಣಿಗಳ ಸಾವಿನ ಸುದ್ದಿ ಕೇಳಿ ಬರುತ್ತಲೇ ಇದೆ. ಕಳೆದ ಕೆಲವು ದಿನಗಳ ಹಿಂದೆ ಉದ್ಯಾನವನದಲ್ಲಿ ಹಲವು ಪ್ರಾಣಿಗಳು ಸಾವನ್ನಪ್ಪಿದ್ದವು. ಈ ಘಟನೆ ಮಾಸುವ ಮುನ್ನವೇ 14 ವರ್ಷದ ರಾಮ ಎಂಬ ಹೆಸರಿನ ಸಿಂಹ ಸಾವನ್ನಪ್ಪಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ರಾಮ ಎಂಬ ಸಿಂಹ ವಯೋಸಹಜ ಕಾಯಿಲೆಯಿಂದ ಬಳಲುತ್ತಿತ್ತು. ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಹು ಅಂಗಾಂಗ ವೈಫಲ್ಯದಿಂದ ಸಿಂಹ ಸಾವನ್ನಪ್ಪಿದೆ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ: 68 ಸಾವಿರ ರೂ. ದಂಡ ಕಟ್ಟಿದ್ದೇನೆ.. ಕಳ್ಳ ಕಳ್ಳ ಎಂದು ಕರೆಯುವವರು ಲುಲು ಮಾಲ್ ನ 6 ತಿಂಗಳ ಬಿಲ್ ಪಾವತಿಸಲಿ – ಕುಮಾರಸ್ವಾಮಿ ಕಿಡಿ
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಬಿಬಿಎಂಪಿ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 14 ವರ್ಷದ ಸಿಂಹ ಸಾವನ್ನಪ್ಪಿದೆ. ಸಿಂಹಕ್ಕೆ ಬುಧವಾರ ಸಂಜೆ ವಾಂತಿ ಸಂಬಂಧಿತ ಲಕ್ಷಣಗಳನ್ನು ಕಾಣಿಸಿಕೊಂಡಿದೆ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.
ಪಶುವೈದ್ಯರ ತಂಡದಿಂದ ಉತ್ತಮ ಆರೈಕೆಯನ್ನು ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಿಂಹ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ವೇಳೆ ಬಹು ಅಂಗಾಂಗ ವೈಫಲ್ಯಗಳಾಗಿರುವುದು ತಿಳಿದುಬಂದಿದೆ ಮತ್ತು ಸಾವಿಗೆ ಇದೇ ಕಾರಣ ಎಂದು ಶಂಕಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸದ್ಯ, ಒಳಾಂಗಗಳ ಮಾದರಿಗಳನ್ನು ಪರೀಕ್ಷೆಗಾಗಿ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯಾಲಜಿಕಲ್ಸ್ ಲ್ಯಾಬ್‌ಗೆ ಕಳುಹಿಸಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗಣೇಶ ಮತ್ತು ಅನು ಜೋಡಿ ಒಟ್ಟು 12 ಮರಿಗಳನ್ನು ಹೊಂದಿತ್ತು. ಈ ಪೈಕಿ ರಾಮ ಕೂಡ ಒಬ್ಬನಾಗಿದ್ದ. ಈತ 2010 ರ ಫೆಬ್ರವರಿ 4 ರಂದು ರಾಮ ಜನಿಸಿದ್ದನು.