ಗೇಮ್ ಆಡುತ್ತಿದ್ದಾಗ ತಾಯಿ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಮಗ ಸೂ*ಸೈಡ್ – ಪೋಷಕರೇ ಇರಲಿ

ತಾಯಿ ಫೋನ್ ಕಿತ್ತುಕೊಂಡಿದ್ದಕ್ಕೆ ಮನನೊಂದು ನೇಣಿಗೆ ಶರಣಾಗಿರುವ ದಾರುಣ ಘಟನೆ ಹುಬ್ಬಳ್ಳಿಯ ಉದಯನಗರದಲ್ಲಿ ನಡೆದಿದೆ. 14 ವರ್ಷದ ಸಮರ್ಥ್ ಮೃತಬಾಲಕ. ಉದಯನಗರದ ನಿವಾಸಿಯಾದ ಸಮರ್ಥ್ ಕಳೆದ ಕೆಲವು ದಿನಗಳಿಂದ ‘ಫ್ರೀಫೈರ್’ ನಂತಹ ಆನ್‌ಲೈನ್ ಗೇಮ್‌ಗಳಿಗೆ ವಿಪರೀತ ಅಡಿಕ್ಟ್ ಆಗಿದ್ದ. ಗುರುವಾರ ರಾತ್ರಿ ಸತತವಾಗಿ ಗೇಮ್ ಆಡುತ್ತಿದ್ದ ಮಗನಿಗೆ ತಾಯಿ ಬುದ್ಧಿವಾದ ಹೇಳಿದ್ದಾರೆ. ‘ಮೊಬೈಲ್ ಸಾಕು ಮಾಡು, ಓದಿಕೊಳ್ಳುವ ಕಡೆ ಗಮನ ಕೊಡು’ ಎಂದು ಹೇಳಿ ಆತನ ಕೈಲಿದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಸಮರ್ಥ್, ತಕ್ಷಣ ತನ್ನ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ.
ಸುಮಾರು 15-20 ನಿಮಿಷಗಳಾದರೂ ಬಾಲಕ ಹೊರಬಾರದಿದ್ದಾಗ ಆತಂಕಗೊಂಡ ತಂದೆ, ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಈ ವೇಳೆ ಮಗ ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಬಾಗಿಲು ಮುರಿದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಳ್ಳಾರಿ ಜೈಲಿನಲ್ಲಿ ಮರದಿಂದ ಬಿದ್ದು ಗಾಯಗೊಂಡಿದ್ದ ಕೈದಿ ಆಸ್ಪತ್ರೆಯಿಂದ ಎಸ್ಕೇಪ್
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಇದು ಅತ್ಯಂತ ದುರದೃಷ್ಟಕರ ಘಟನೆ. ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಪೋಷಕರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಮಕ್ಕಳು ಮೊಬೈಲ್ ಅಡಿಕ್ಷನ್‌ಗೆ ಒಳಗಾದಾಗ ಪೋಷಕರನ್ನೇ ಬ್ಲ್ಯಾಕ್‌ಮೇಲ್ ಮಾಡುವ ಹಂತಕ್ಕೆ ತಲುಪುತ್ತಾರೆ. ಒಂದು ವೇಳೆ ಮಕ್ಕಳು ಮೊಬೈಲ್‌ಗೆ ಹೆಚ್ಚು ಅಡಿಕ್ಟ್ ಆಗಿದ್ದರೆ, ಏಕಾಏಕಿ ಮೊಬೈಲ್‌ನಿಂದ ದೂರವಿಡಲು ಪ್ರಯತ್ನಿಸಬಾರದು. ಬದಲಾಗಿ, ಅವರ ಶಿಕ್ಷಕರು ಅಥವಾ ಮಕ್ಕಳ ತಜ್ಞರ ಜೊತೆ ಸಮಾಲೋಚಿಸಿ, ನಿಧಾನವಾಗಿ ಈ ವ್ಯಸನದಿಂದ ಹೊರಬರುವಂತೆ ಮಾಡಬೇಕು.ಎಂದು ಕಿವಿಮಾತು ಹೇಳಿದ್ದಾರೆ.
ಮೊಬೈಲ್ ಅಡಿಕ್ಷನ್ ಎಂದಿಗೂ ಒಳ್ಳೆಯದಲ್ಲ. ಮೊಬೈಲ್‌ನಲ್ಲಿ ಗೇಮ್ ಆಡಿ ಜೀವನದಲ್ಲಿ ಯಾರೂ ಯಶಸ್ವಿಯಾದ ಉದಾಹರಣೆಗಳಿಲ್ಲ. ಮೊಬೈಲ್ ಅನ್ನು ರಚನಾತ್ಮಕ ಉದ್ದೇಶಗಳಿಗಾಗಿ ಬಳಸಬಹುದು. ಗ್ರಾಮರ್, ಭಾಷೆ, ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು YouTube ನಲ್ಲಿ ಲಭ್ಯವಿರುವ ಕೋರ್ಸ್‌ಗಳ ಮೂಲಕ ಮುಂದಿನ ವರ್ಷದ ವಿಷಯಗಳನ್ನು ಸಿದ್ಧಪಡಿಸಲು ಮೊಬೈಲ್ ಉಪಯುಕ್ತವಾಗಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.

ನೋಡಿರಿ

