ಪತ್ತೆಯಾಯ್ತು 2 ನೇ ವಿಶ್ವಯುದ್ಧ ಕಾಲದ ಬಾಂಬ್ – ಬರೋಬ್ಬರಿ 13 ಸಾವಿರ ಜನರ ಸ್ಥಳಾಂತರ

1939 ರಿಂದ 1945 ರವರೆಗೆ ನಡೆದ ಎರಡನೇ ಜಾಗತಿಕ ಯುದ್ದದ ಬಗ್ಗೆ ನಾವು ಕೇಳಿದ್ದೇವೆ. ಈ ಯುದ್ಧದಲ್ಲಿ 6 ಕೋಟಿಗೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಭೀಕರ ಯುದ್ಧದಲ್ಲಿ ಇಡೀ ಜಗತ್ತೇ ಎರಡು ಹೋಳಾದವು. ಇದೀಗ ಎರಡನೇ ಜಾಗತಿಕ ಯುದ್ಧದ ಕಾಲದ ಬೃಹತ್ ಗಾತ್ರದ ಬಾಂಬ್‌ವೊಂದು ಜರ್ಮನಿಯ ಡಸ್ಸೆಲ್ ಡೋರ್ಫ್ ನಲ್ಲಿ ಪತ್ತೆಯಾಗಿದೆ. ಭಾರಿ ಗಾತ್ರದ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಸುತ್ತಮುತ್ತ ಪ್ರದೇಶದಲ್ಲಿನ ಬರೋಬ್ಬರಿ 13 ಸಾವಿರ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರಕ್ಕಾಗಿ ಸಿದ್ದವಾಯ್ತು ವಿಶೇಷ ಬೀಗ – 400 ಕೆಜಿ ತೂಕ, 10 ಅಡಿ ಎತ್ತರದ ಬೀಗ ತಯಾರಿಸಿದ ದಂಪತಿ!
ಆಗಸ್ಟ್ 7 ರಂದು ಜರ್ಮನಿಯ ಡಸ್ಸೆಲ್ ಡೋರ್ಫ್‌ನ ಝೂ ಸಿಟಿ ಸಮೀಪ ಕಾರ್ಯನಿರ್ವಹಿಸುತ್ತಿದ್ದ ವೇಳೆ ಒಂದು ಟನ್ ತೂಕದ ಬಾಂಬ್ ಪತ್ತೆಯಾಗಿದೆ. ಪತ್ತೆಯಾದ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲು ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿದೆ ಎಂದು ಜರ್ಮನ್ ಸುದ್ದಿವಾಹಿನಿ ಡ್ಯೂಷ್ ವೆಲ್ಲೆ (ಡಿಬ್ಲ್ಯು) ವರದಿ ಮಾಡಿದೆ.
ಬಾಂಬ್ ಪತ್ತೆಯಾದ 500 ಮೀಟರ್ ಸುತ್ತಮುತ್ತಲಿನ ನಿವಾಸಿಗಳು ಕೂಡಲೇ ಆ ಪ್ರದೇಶವನ್ನು ತೊರೆಯಬೇಕೆಂದು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಭಾರಿ ಗಾತ್ರದ ಬಾಂಬ್ ಪತ್ತೆಯಾಗಿದ್ದರಿಂದಾಗಿ ಭೀತಿಗೊಳಗಾಗಿರುವ ನಿವಾಸಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಗಳನ್ನು ತೊರೆದು ಸ್ಥಳಾಂತರಗೊಳ್ಳುತ್ತಿದ್ದಾರೆಂದು. ಮತ್ತೊಂದೆಡೆ ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ಪೂರ್ಣಗೊಂಡಿದೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ.
ಎರಡು ಜಾಗತಿಕ ಯುದ್ಧದ ಸಂದರ್ಭಗಳಲ್ಲಿ ಜರ್ಮನಿಯಲ್ಲಿ ಹೂಳಲಾದ ಸಾವಿರಾರು ಬಾಂಬ್ ಗಳು ಕಾಲ, ಕಾಲಕ್ಕೆ ಪತ್ತೆಯಾಗುವುದು ಮುಂದುವರಿಯುತ್ತಲೇ ಇದೆ. 2017ರಲ್ಲಿಯೂ ಫ್ರಾಂಕ್ ಫರ್ಟ್ ನಲ್ಲಿ 1.4 ಟನ್ ಗಳಷ್ಟು ತೂಕದ ಬಾಂಬ್ ಪತ್ತೆಯಾಗಿದ್ದು, ಈ ಸಂದರ್ಭದಲ್ಲಿ 65,000 ಜನರನ್ನು ಸ್ಥಳಾಂತರಿಸಲಾಗಿತ್ತು. 2021ರ ಡಿಸೆಂಬರ್ ನಲ್ಲಿ ಮ್ಯೂನಿಚ್ ಸ್ಟೇಷನ್ ಸಮೀಪ ಹಳೆಯ ಬಾಂಬ್ ಸ್ಫೋಟಗೊಂಡು ಹಲವಾರು ಮಂದಿ ಗಾಯಗೊಂಡಿದ್ದು, ರೈಲ್ವೆ ಹಳಿ ಛಿದ್ರವಾಗಿ ಹೋಗಿರುವ ಘಟನೆ ನಡೆದಿತ್ತು.