ಭಾರತಕ್ಕೆ ಬಂತು 12 ಚೀತಾ! – ಫೋಟೋ ಕ್ಲಿಕ್ಕಿಸ್ತಾರಾ ಅನಿಲ್ ಕುಂಬ್ಳೆ?
ಭಾರತದಲ್ಲಿ ಅವನತಿಯಾಗಿದ್ದ ಚೀತಾಗಳಿಗೆ ಈಗ ಮತ್ತೆ ದೇಶದಲ್ಲಿ ಆಶ್ರಯ ಸಿಕ್ಕಿದೆ. ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಭಾರತಕ್ಕೆ ಬಂದಿಳಿದಿವೆ. ಕಳೆದ ವರ್ಷ ನಮೀಬಿಯಾದಿಂದ 8 ಚೀತಾಗಳನ್ನ ಕರೆತರಲಾಗಿತ್ತು. ಈಗ ಎರಡನೇ ಹಂತದಲ್ಲಿ 12 ಚೀತಾಗಳು ದಕ್ಷಿಣ ಆಫ್ರಿಕಾದಿಂದ ಆಗಮಿಸಿವೆ. ಚೀತಾಗಳನ್ನ ಹೊತ್ತ ಭಾರತೀಯ ವಾಯುಪಡೆಯ ಸಿ-17 ವಿಮಾನ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಲ್ಯಾಂಡ್ ಆಯಿತು. ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೂನೊ ರಾಷ್ಟ್ರೀಯ ಅರಣ್ಯಕ್ಕೆ ಕರೆತಂದು ಬಿಡುಗಡೆ ಮಾಡಲಾಯ್ತು. ಈ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಹಾಜರಿದ್ರು. ಮುಂದಿನ ಕೆಲ ತಿಂಗಳುಗಳ ಕಾಲ ಈ ಚೀತಾಗಳು ಕ್ವಾರಂಟೈನ್ನಲ್ಲಿರಲಿವೆ.
ಇದನ್ನೂ ಓದಿ: ಬೆಂಕಿ ಕೆನ್ನಾಲಗೆಗೆ ಹೊತ್ತಿ ಉರಿಯುತ್ತಿತ್ತು ಕಾಡು – ಹಸಿರು ಉಳಿಸಲು ಹೋದವನ ದುರಂತ ಸಾವು..!
ಇನ್ನು 12 ಚೀತಾಗಳ ಪೈಕಿ ಐದು ಹೆಣ್ಣು ಚೀತಾಗಳಾಗಿವೆ. ಇನ್ನು ಕಳೆದ ವರ್ಷ ನಮೀಬಿಯಾದಿಂದ ಬಂದಿದ್ದ 8 ಚೀತಾಗಳು ಈಗಾಗಲೇ ಕೂನೋದ ಹುಲ್ಲುಗಾವಲು ಪ್ರದೇಶದಲ್ಲಿ ಓಡಾಡುತ್ತಿವೆ. ಪ್ರತಿ ನಾಲ್ಕು ದಿನಗಳಿಗೊಮ್ಮೆ ಬೇಟೆಯಾಡುತ್ತಿವೆ. ಈ ನಡುವೆ ಸಾಶ ಹೆಸರಿನ ಹೆಣ್ಣು ಚಿರತೆಯೊಂದು ಜನವರಿಯಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿತ್ತು. ನಿರಂತರ ಚಿಕಿತ್ಸೆ ಬಳಿಕ ಸಾಶಾ ಚೇತರಿಸಿಕೊಂಡಿದೆ. ಈ ನಡುವೆ ಇದೇ ತಿಂಗಳಾಂತ್ಯದಿಂದ ಕೂನೋ ಅರಣ್ಯದಲ್ಲಿ ಚೀತಾ ಸಫಾರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಮಾಜಿ ಕ್ರಿಕೆಟಿಗ ಮತ್ತು ವೈಲ್ಡ್ಲೈರ್ಫ್ ಫೋಟೋಗ್ರಾಫರ್ ಅನಿಲ್ ಕುಂಬ್ಳೆಗೆ ಇನ್ಮುಂದೆ ಚೀತಾ ಫೋಟೋ ತೆಗೆಯಬಹುದು ಅಂತಾ ಹೇಳಿದ್ರು. ಈ ಮೂಲಕ ಶೀಘ್ರವೇ ಚೀತಾ ಟೂರಿಸಂ ಆರಂಭಿಸುವ ಸುಳಿವು ಕೂಡ ಕೊಟ್ಟಿದ್ರು. ಈ ಹಿಂದೆ ಉತ್ತರದ ವಿವಿಧೆಡೆ ಸಾಕಷ್ಟು ಸಂಖ್ಯೆಯಲ್ಲಿ ಚೀತಾಗಳು ಇದ್ದವು. ಮುಗ್ಧ ಪ್ರಾಣಿಯಾದ ಚೀತಾಗಳನ್ನ ಸಾಕು ನಾಯಿಯಂತೆ ಬಳಸಲಾಗುತ್ತಿತ್ತು. ಚೀತಾಗಳನ್ನ ಬಳಸಿಯೇ ಜನರು ಜಿಂಕೆಗಳ ಬೇಟೆಯಾಡುತ್ತಿದ್ದರು. ಆದರೆ ರಾಜರು ಮತ್ತಿ ಬ್ರಿಟೀಷರ ಬೇಟೆಯಾಡುವ ಖಯಾಲಿಯಿಂದಾಗಿ ಚೀತಾಗಳು ಭಾರತದಲ್ಲಿ ಸಂಪೂರ್ಣವಾಗಿ ನಶಿಸಿಹೋಗಿತ್ತು.
ಆದರೆ 2009ರಲ್ಲಿ ಯುಪಿಎ ಸರ್ಕಾರ ಮತ್ತೆ ಭಾರತದಲ್ಲಿ ಚೀತಾ ವಂಶದ ಬೆಳವಣಿಗೆಗಾಗಿ ಅವುಗಳನ್ನ ಆಫ್ರಿಕಾದಿಂದ ಕರೆತರಲು ಪ್ಲ್ಯಾನ್ ಮಾಡಿತ್ತು. ಸುಪ್ರೀಂಕೋರ್ಟ್ ಕೂಡ ಸಮ್ಮತಿ ಸೂಚಿಸಿತ್ತು. ಆದರೆ ಯೋಜನೆ ಜಾರಿಯಾಗಿರಲಿಲ್ಲ. ಈಗ ಭಾರತ ಸರ್ಕಾರ ಚೀತಾ ಪ್ರಾಜೆಕ್ಟ್ನ್ನ ಅನುಷ್ಠಾನಕ್ಕೆ ತಂದಿದ್ದು, ಈಗ ಒಟ್ಟು 20 ಚೀತಾಗಳು ಭಾರತದಲ್ಲಿವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನಷ್ಟು ಚೀತಾಗಳು ಆಫ್ರಿಕಾದಿಂದ
ಭಾರತಕ್ಕೆ ಆಗಮಿಸಲಿವೆ. ಈ ಚೀತಾ ಪ್ರಾಜೆಕ್ಟ್ನಿಂದಾಗಿ ಪ್ರವಾಸೋದ್ಯಮ ಮಾತ್ರವಲ್ಲ, ಪ್ರಾಕೃತಿಕ ಸಮತೋಲನ. ಜೀವ ವೈವಿಧ್ಯಗಳ ಬೆಳವಣಿಗೆಗೂ ಸಾಕಷ್ಟು ಸಹಕಾರಿಯಾಗಲಿದೆ.