ಒಂದು ನಿಮಿಷದಲ್ಲೇ ಒಂದು ಸಾವಿರ ಚಪ್ಪಾಳೆ – ಯುವಕನಿಂದ ಸೃಷ್ಟಿಯಾಯ್ತು ಹೊಸ ದಾಖಲೆ

ಒಂದು ನಿಮಿಷದಲ್ಲೇ ಒಂದು ಸಾವಿರ ಚಪ್ಪಾಳೆ – ಯುವಕನಿಂದ ಸೃಷ್ಟಿಯಾಯ್ತು ಹೊಸ ದಾಖಲೆ

ಚಪ್ಪಾಳೆ ತಟ್ಟೋದು ಕೂಡಾ ಒಂದು ಕಲೆ. ಇದರಲ್ಲೂ ದಾಖಲೆ ಬರೆಯಬಹುದು ಅಂತಾ 20 ವರ್ಷದ ಯುವಕನೊಬ್ಬ ತೋರಿಸಿಕೊಟ್ಟಿದ್ದಾನೆ. ಅದು ಕೂಡಾ ಕೇವಲ ಒಂದೇ ಒಂದು ನಿಮಿಷದಲ್ಲಿ ಒಂದೂ ಸಾವಿರಕ್ಕೂ ಅಧಿಕ ಬಾರಿ ಚಪ್ಪಾಳೆ ತಟ್ಟಿ ವಿಶ್ವದಾಖಲೆ ಮಾಡಿದ್ದಾನೆ. ಈ ಅಚ್ಚರಿಯ ಗಿನ್ನಿಸ್ ವಿಶ್ವದಾಖಲೆ ಬರೆದ ಯುವಕನೇ ಅಮೆರಿಕದ ಡೆವನ್ಪೋರ್ಟ್ ಮೂಲದ ಡೆಲ್ಟನ್. ಈತನಿಗೆ ಬಾಲ್ಯದಿಂದಲೂ ಚಪ್ಪಾಳೆ ತಟ್ಟೋ ವಿಚಾರದಲ್ಲಿ ಆಸಕ್ತಿ ಬೆಳೆದಿತ್ತು. ಚಪ್ಪಾಳೆಯ ಧ್ವನಿಯ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದ ಡೆಲ್ಟನ್, ತನಗಿಷ್ಟವಾದ ಚಪ್ಪಾಳೆಯಲ್ಲೇ ಈಗ ಗಿನ್ನಿಸ್ ದಾಖಲೆ ಬರೆದಿದ್ದಾರೆ.

ಇತ್ತೀಚೆಗಷ್ಟೇ ಜಗತ್ತಿನ ಅತೀ ಹಿರಿಯ ವೈದ್ಯರೊಬ್ಬರು ಗಿನ್ನೀಸ್ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಅಮೆರಿಕದ ಡೆವನ್ಪೋರ್ಟ್ ಮೂಲದ ಡೆಲ್ಟನ್ ಒಂದು ನಿಮಿಷದಲ್ಲಿ ಅತೀವೇಗವಾಗಿ ಚಪ್ಪಾಳೆ ತಟ್ಟುವ ಕೌಶಲದಿಂದ ಜಗತ್ತಿನ ಗಮನ ಸೆಳೆದಿದ್ದಾರೆ. 20 ವರ್ಷದ ಇವರು ಒಂದು ನಿಮಿಷದಲ್ಲಿ 1,140 ಸಲ ಚಪ್ಪಾಳೆ ತಟ್ಟಿದ್ದಾರೆ. ಇನ್ನು ಸೆಕೆಂಡ್ ಲೆಕ್ಕ ತೋರಿಸುವುದಾದರೆ, ಡೆಲ್ಟನ್ ಒಂದೇ ಸೆಕಂಡ್‌ನಲ್ಲಿ 19 ಬಾರಿ ಚಪ್ಪಾಳೆ ತಟ್ಟುತ್ತಾರೆ. ಈ ಹಿಂದೆ ನಿರ್ಮಿಸಿದ್ದ ಇದೇ ಕೌಶಲದ ದಾಖಲೆಯನ್ನು 37 ಚಪ್ಪಾಳೆಗಳ ಅಂತರದಲ್ಲಿ ಈ ಯುವಕ ಮುರಿದಿದ್ದಾರೆ.

ಬಾಲ್ಯದಲ್ಲಿಯೇ ಚಪ್ಪಾಳೆ ತಟ್ಟುವುದು, ಚಪ್ಪಾಳೆಯ ದನಿಗೆ ಆಕರ್ಷಿತನಾಗಿದ್ದ ಡೆಲ್ಟನ್, ತನ್ನ ಬಾಲ್ಯದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಶಾಲಾದಿನಗಳಲ್ಲಿ ಬಾರಿಸುತ್ತಿದ್ದ ಚಪ್ಪಾಳೆ ನನ್ನನ್ನು ಅತಿಯಾಗಿ ಸೆಳೆಯಿತು. ಹೀಗೇ ನನ್ನಷ್ಟಕ್ಕೆ ನಾನು ಚಪ್ಪಾಳೆ ಬಾರಿಸುತ್ತ ಅಭ್ಯಾಸ ಮಾಡಿದೆ. ಕ್ರಮೇಣ ಅದೊಂದು ಕಲೆಯಂತೆ ಭಾಸವಾಯಿತು. ಹೀಗೆ ನಾನು ಈ ಕಲೆಗೆ ಆಕರ್ಷಿತನಾದೆ. ಕ್ರಮೇಣ ಪರಿಣತಿ ಸಾಧಿಸತೊಡಗಿದೆ’ ಎಂದಿದ್ದಾರೆ ಡೆಲ್ಟನ್. ಯಾವ ವಿಚಾರದಲ್ಲಿ ಡೆಲ್ಟನ್‌ಗೆ ಆಸಕ್ತಿಯಿತ್ತೋ ಅದರಲ್ಲೇ ಈಗ ಗಿನ್ನಿಸ್ ದಾಖಲೆಯನ್ನೂ ಮಾಡಿದ್ದಾರೆ. ಅದಕ್ಕೆ ಹೇಳೋದು ಪ್ರತಿಭೆ ಮತ್ತು ಕೌಶಲ್ಯ ಯಾರಿಗೆ ಯಾವ ರೀತಿ ಬೇಕಾದರೂ ಒಲಿಯಬಹುದು. ಆದರೆ ಅದರಲ್ಲಿ ನಾವು ಸಾಧಿಸುವ ಛಲ ಹೊಂದಿರಬೇಕು. ಅದರ ಜೊತೆ ಪರಿಶ್ರಮವೂ ಇರಬೇಕು ಅನ್ನೋದಕ್ಕೆ ಈ ಇಪ್ಪತ್ತರ ಹರೆಯದ ಯುವಕನೇ ಸಾಕ್ಷಿ.

 

suddiyaana