ಶಬರಿಮಲೆ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಳ – ನೂಕುನುಗ್ಗಲಿಗೆ ಬಾಲಕಿ ಸಾವು

ಶಬರಿಮಲೆ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಳ – ನೂಕುನುಗ್ಗಲಿಗೆ ಬಾಲಕಿ ಸಾವು

ಕೇರಳದ ಶಬರಿಮಲೆ ದೇಗುಲದ ಬಾಗಿಲು ಈಗಾಗಲೇ ಓಪನ್‌ ಆಗಿದೆ. ಸಾವಿರಾರು ಭಕ್ತರು ದೇಗುಲಕ್ಕೆ ಆಗಮಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ದೇವಳದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ನೂಕುನುಗ್ಗಲು ಸಂಭವಿಸಿ, ಬಾಲಕಿಯೋರ್ವಳು ಮೃತಪಟ್ಟಿದ್ದಾಳೆ.

ಭಾನುವಾರ ದೇಗುಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ದರ್ಶನಕ್ಕಾಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದ ತಮಿಳುನಾಡಿನ 11 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಮೂರು ವರ್ಷದಿಂದಲೂ ಹೃದಯ ಸಂಬಂಧಿ ರೋಗದ ವಿರುದ್ಧ ಹೋರಾಡುತ್ತಿದ್ದ ಬಾಲಕಿ ಯಾತ್ರಾರ್ಥಿಗಳ ಭಾರಿ ನೂಕುನುಗ್ಗಲಿನ ನಡುವೆ ಕುಸಿದುಬಿದ್ದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ಸೋಮವಾರ ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು, ಹಲವು ಕಡೆ ಬಿಗಿ ಭದ್ರತೆ

ಹೆಸರಾಂತ ಶಬರಿಮಲೆ ದೇವಸ್ಥಾನಕ್ಕೆ ಪ್ರಸ್ತುತ ಭಕ್ತಾದಿಗಳ ದಂಡು ಹರಿದು ಬರುತ್ತಿದೆ. ಕೆಲವು ಯಾತ್ರಾರ್ಥಿಗಳು 18 ಗಂಟೆಗಳವರೆಗೆ ದರ್ಶನಕ್ಕಾಗಿ ಕಾಯುತ್ತಿದ್ದರು, ಅನೇಕರು ಸರತಿ ವ್ಯವಸ್ಥೆಯನ್ನು ಉಲ್ಲಂಘಿಸಿದ್ದರಿಂದ ಅವ್ಯವಸ್ಥೆಗೆ ಕಾರಣವಾಯಿತು. ದೀರ್ಘ ಸರತಿ ಸಾಲಿನ ಕಾರಣದಿಂದಾಗಿ, ಯಾತ್ರಿಕರು ಬ್ಯಾರಿಕೇಡ್‌ ಗಳ ಮೇಲೆ ಹಾರಿ, ಪವಿತ್ರ ಮೆಟ್ಟಿಲುಗಳ ಬಳಿ ನೂಕುನುಗ್ಗಲು ಉಂಟುಮಾಡಿದರು. ಹೀಗಾಗಿ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

ಹೆಚ್ಚುತ್ತಿರುವ ಜನಸಂದಣಿಯ ಕಾರಣದಿಂದಾಗಿ, ಕೇರಳ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಮತ್ತು ತಿರುವಾಂಕೂರ್ ದೇವಸ್ವಂ ಮಂಡಳಿ ಅಧ್ಯಕ್ಷ ಪಿ ಎಸ್ ಪ್ರಶಾಂತ್ ತುರ್ತು ಸಭೆಯನ್ನು ಕರೆದಿದ್ದಾರೆ. ವರ್ಚುವಲ್ ಕ್ಯೂ ಬುಕಿಂಗ್ ಮಿತಿಯನ್ನು 10,000 ರಷ್ಟು ಕಡಿಮೆ ಮಾಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದಿನಕ್ಕೆ 90 ಸಾವಿರವಿದ್ದ ಗರಿಷ್ಠ ಮಿತಿಯನ್ನು ದಿನಕ್ಕೆ 80 ಸಾವಿರಕ್ಕೆ ಇಳಿಸಲಾಗಿದೆ.

ಅಲ್ಲದೆ ದರ್ಶನದ ಅವಧಿಯನ್ನು ಒಂದು ತಾಸು ಹೆಚ್ಚಿಸುವ ತೀರ್ಮಾನವನ್ನು ಟ್ರಾವಂಕೂರು ದೇವಸ್ವಂ ಬೋರ್ಡ್‌ ರವಿವಾರ ತೆಗೆದುಕೊಂಡಿದೆ. ಇದುವರೆಗೆ ಅಪರಾಹ್ನ 4ರಿಂದ ರಾತ್ರಿ 11 ಗಂಟೆಯ ವರೆಗೆ ದರ್ಶನಕ್ಕೆ ಅವಕಾಶ ಇತ್ತು, ಇದನ್ನು ಅಪರಾಹ್ನ 3ರಿಂದಲೇ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಪಟ್ಟನಂತಿಟ್ಟ ಜಿಲ್ಲಾಡಳಿತ ತಿಳಿಸಿದೆ.

ದರ್ಶನಕ್ಕಾಗಿ ಸರತಿಯಲ್ಲಿ ನಿಂತಿರುವ ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು ಮತ್ತು ಬಿಸ್ಕತ್ತುಗಳನ್ನು ವಿತರಿಸಲಾಗುತ್ತಿದೆ ಎಂದೂ ಅದು ಹೇಳಿದೆ.

Shwetha M