ಅಯೋಧ್ಯೆಯಲ್ಲಿ 108 ಅಡಿ ಉದ್ದದ ಅಗರಬತ್ತಿಗೆ ಅಗ್ನಿಸ್ಪರ್ಶ – ಒಂದೂವರೆ ತಿಂಗಳು ನಿರಂತರ ಉರಿಯಲಿದೆ ಈ ಅಗರಬತ್ತಿ!

ಅಯೋಧ್ಯೆಯಲ್ಲಿ 108 ಅಡಿ ಉದ್ದದ ಅಗರಬತ್ತಿಗೆ ಅಗ್ನಿಸ್ಪರ್ಶ – ಒಂದೂವರೆ ತಿಂಗಳು ನಿರಂತರ ಉರಿಯಲಿದೆ ಈ ಅಗರಬತ್ತಿ!

ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ರಾಮಲಲ್ಲಾ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಂಗಳವಾರದಿಂದಲೇ ರಾಮಲಲ್ಲಾ ಪ್ರತಿಷ್ಠಾಪನೆಯ ಪೂಜಾ ವಿಧಿ ವಿಧಾನಗಳು ಆರಂಭವಾಗಿದೆ. ಇದೀಗ ಆಯೋಧ್ಯೆಗೆ ಭಕ್ತರೊಬ್ಬರು ಕಾಣಿಕೆಯಾಗಿ ನೀಡಿದ 108 ಅಡಿ ಉದ್ದದ ಊದುಬತ್ತಿಯನ್ನು ಉರಿಸಲಾಗಿದೆ.

ಇದನ್ನೂ ಓದಿ: ಇಲ್ಲಿ ಜನರ ಸಂಖ್ಯೆಗಿಂತ ಇಲಿಗಳ ಸಂಖ್ಯೆಯೇ ಹೆಚ್ಚು! – ಮೂಷಿಕನ ಕಾಟಕ್ಕೆ ಕಂಗಾಲಾದ ಬ್ರಿಟಿಷರು!

ಅಯೋಧ್ಯೆಯಲ್ಲಿ ಮಂಗಳವಾರ (ಜ.16) ರಾಮಲಲಾ (ಬಾಲರಾಮ) ಪ್ರಾಣ ಪ್ರತಿಷ್ಠೆಯ ಪೂರ್ವಭಾವಿಯಾಗಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮ ಶುರುವಾಯಿತು. ಇದೇ ವೇಳೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಹಾಂತ ನೃತ್ಯ ಗೋಪಾಲ ದಾಸ್ ಅವರು 108 ಅಡಿ  ಉದ್ದದ ಅಗರಬತ್ತಿಯನ್ನು ಹೊತ್ತಿಸಿದರು. ಗುಜರಾತ್‌ನ ವಡೋದರಾದ ರಾಮಭಕ್ತರೊಬ್ಬರು ರಾಮಮಂದಿರಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.

ಗುಜರಾತ್‌ನ ವಡೋದರಾದಿಂದ ಬಂದ 108 ಅಡಿ ಉದ್ದದ ಅಗರಬತ್ತಿ ಹಚ್ಚುವಾಗ ಜೈ ಶ್ರೀರಾಮ್ ಘೋಷಣೆ ಮುಗಿಲುಮುಟ್ಟಿತು. ಈ ಅಗರ ಬತ್ತಿಯ ಸುವಾಸನೆ 50 ಕಿ.ಮೀ. ವ್ಯಾಪ್ತಿಗೆ ಪಸರಿಸಲಿದೆ ಎಂದು ಸ್ಥಳೀಯರು ಹೇಳಿದ್ದಾಗಿ ವರದಿಯಾಗಿದೆ.

ವಡೋದರಾದಿಂದ ತರಲಾದ 108 ಅಡಿ ಉದ್ದದ ಅಗರಬತ್ತಿ ಮೂರೂವರೆ ಅಡಿ ಅಗಲ ಇದೆ. 3,610 ಕಿಲೋ ತೂಕವೂ ಇದ್ದು, ಅಯೋಧ್ಯೆಯ ಬೀದಿಯಲ್ಲಿ ಜನಾಕರ್ಷಣೆಯ ಕೇಂದ್ರ ಬಿಂದುವಾಗಿ ಗೋಚರಿಸಿದೆ. ಹಸುವಿನ ಸಗಣಿ, ತುಪ್ಪ, ಸುಗಂಧ ಸಾರ, ಹೂವಿನ ಸಾರ ಮತ್ತು ಗಿಡಮೂಲಿಕೆಗಳನ್ನು ಅಗರಬತ್ತಿಯನ್ನು ತಯಾರಿಸಲು ಬಳಸಲಾಗಿದೆ. ಇದನ್ನು ಒಮ್ಮೆ ಬೆಳಗಿಸಿದರೆ ಸುಮಾರು ಒಂದೂವರೆ ತಿಂಗಳು ಉರಿಯುತ್ತಿರುತ್ತದೆ.

Shwetha M