102 ಮಕ್ಕಳಾದ ಮೇಲೆ ಗರ್ಭನಿರೋಧಕ ಮಾತ್ರೆಯ ನೆನಪಾಯ್ತು – ಪಾಪ.. 12 ಪತ್ನಿಯರ ಪಾಡು..!
102 ಮಕ್ಕಳಾದ ಮೇಲೆ ಇಲ್ಲೊಬ್ಬ ಅಪ್ಪನೆಂಬ ಮಹಾಶಯನಿಗೆ ಮಕ್ಕಳು ಸಾಕು ಅನಿಸಿದೆಯಂತೆ. ಹೀಗಾಗಿ ತನ್ನ 12 ಪತ್ನಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಲು ಮುಂದಾಗಿದ್ದಾನೆ. ಉಗಾಂಡದ ಲುಸಾಕಾದ ನಿವಾಸಿ ಮೂಸಾ ಹಸಹ್ಯಾ ಕಸೆರಾ ಎಂಬ ವ್ಯಕ್ತಿಗೆ ಈಗ 68 ವರ್ಷ ವಯಸ್ಸು. 12 ಪತ್ನಿಯರು. 102 ಮಕ್ಕಳು. 578 ಮೊಮ್ಮಕ್ಕಳ ಅತಿ ದೊಡ್ಡ ಸಂಸಾರ ಈತನದ್ದು. ಮಕ್ಕಳ ಸಂಖ್ಯೆ ಶತಕ ದಾಟಿದ ಮೇಲೆ ಯಾಕೋ ಈತನಿಗೆ ಜ್ಞಾನೋದಯವಾದಂತೆ ಕಾಣುತ್ತಿದೆ. ಸಾಕಪ್ಪಾ.. ಇಷ್ಟು ಮಕ್ಕಳು ಅಂತಾ ಈಗ ಪತ್ನಿಯರಿಗೆ ಗರ್ಭನಿರೋಧಕ ಮಾತ್ರ ನೀಡಲು ಮನಸು ಮಾಡಿದ್ದಾನಂತೆ.
ಇದನ್ನೂ ಓದಿ: ಶವ ಇಟ್ಟ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಹಿಂದೇಟು – ಮಕ್ಕಳನ್ನು ಕಾಡುತ್ತಿದೆ ‘ಆತ್ಮಗಳ ಭಯ’?
102 ಮಕ್ಕಳ ವಿಚಾರದಲ್ಲಿ ಮೂಸಾನ ಅವಸ್ಥೆ ಕೇಳಿದರೆ ನಿಮಗೂ ಹೀಗೆಲ್ಲಾ ಆಗುತ್ತಲ್ಲಾ ಅಂತಾ ಅನಿಸದೆ ಇರದು ಬಿಡಿ. ಮೂಸಾನೇ ಮಕ್ಕಳ ಬಗ್ಗೆ ಹೇಳುವಂತೆ, ಸವಾಲು ಏನೆಂದರೆ ನಾನು ನನ್ನ ಮೊದಲ ಮತ್ತು ಕೊನೆಯ ಒಂದು ಹತ್ತು ಮಕ್ಕಳ ಹೆಸರನ್ನು ಮಾತ್ರ ನೆನಪಿಸಿಕೊಳ್ಳಬಲ್ಲೆ . ಆದರೆ ಕೆಲವು ಮಕ್ಕಳ ಹೆಸರೇ ನೆನಪಿಲ್ಲ ಅಂತಾನೆ. ಇನ್ನು 1972 ರಲ್ಲಿ ಮೂಸಾ ಮೊದಲ ಹೆಂಡತಿಯನ್ನು ಮದುವೆಯಾದಾಗ ಕೇವಲ 17 ವರ್ಷ ವಯಸ್ಸು. ಇದಾದ ಬಳಿಕ ಅವರ ಕುಟುಂಬ ಮತ್ತು ಸಂಬಂಧಿಕರು ಹೆಚ್ಚಿನ ಮಹಿಳೆಯರನ್ನು ಮದುವೆಯಾಗಲು ಮತ್ತು ಅವರ ಕುಟುಂಬವನ್ನು ವಿಸ್ತರಿಸಲು ಸಲಹೆ ನೀಡಿದ್ದರು. ಅದಕ್ಕಾಗಿ ಮೂಸಾ 12 ಮಹಿಳೆಯರನ್ನು ವಿವಾಹವಾಗುತ್ತಾನೆ. ಅವರಿಂದ 102 ಮಕ್ಕಳನ್ನು ಪಡೆಯುತ್ತಾನೆ. ಸೆಂಚುರಿ ಬಾರಿಸಿದ ಸಂಭ್ರಮ ಪಡುವ ಸ್ಥಿತಿಯಲ್ಲಂತೂ ಈತನಿಲ್ಲ. ಯಾಕೆಂದರೆ, ಕುಟುಂಬದ ಊಟ, ಶಿಕ್ಷಣ, ಬಟ್ಟೆ ಭರಿಸಲು ಈತನಿಂದ ಸಾಧ್ಯವಾಗುತ್ತಿಲ್ಲ. ಆರ್ಥಿಕವಾಗಿ ಕುಸಿದ್ದಿದ್ದೇನೆ ಎಂದು ಸ್ವತಃ ಈತನೇ ಹೇಳಿದ್ದಾನೆ. ಜೊತೆಗೆ ಇಬ್ಬರು ಹೆಂಡತಿಯರು ಈಗಾಗಲೇ ನನ್ನನ್ನು ತೊರೆದಿದ್ದಾರೆ ಎಂದು ಮೂಸಾ ಹೇಳಿಕೊಂಡಿದ್ದಾನೆ. ಕೊನೆಗೂ ಮಕ್ಕಳನ್ನು ಹುಟ್ಟಿಸುವುದು ದೊಡ್ಡಸ್ತಿಕೆಯಲ್ಲ. ಮಕ್ಕಳನ್ನು ಬೆಳೆಸಿ, ಅವರಿಗೆ ಒಂದೊಳ್ಳೆ ಸ್ಥಾನ ಮಾನ ನೀಡುವುದು ಕೂಡಾ ಅಪ್ಪನ ಜವಾಬ್ದಾರಿ ಅಂತಾ ಈತನಿಗೆ ಗೊತ್ತಾಗಲು 102 ಮಕ್ಕಳಾಗಬೇಕಾಯ್ತು. ಜೊತೆಗೆ ವಯಸ್ಸೂ ಕೂಡಾ 68 ಆಯ್ತು. ಹೀಗಾಗಿಯೇ ಏನೋ ಮೂಸಾ ತನ್ನ ಪತ್ನಿಯರಿಗೆ ಗರ್ಭನಿರೋಧಕ ಮಾತ್ರೆಗಳನ್ನು ನೀಡಲು ಮುಂದಾಗಿರೋದು.