1 ಸಾವಿರ ರೂಪಾಯಿ ಮುಖಬೆಲೆಯ ನೋಟು ಮತ್ತೆ ಬರುತ್ತಾ? – ಆರ್‌ಬಿಐ ಗವರ್ನರ್ ಹೇಳಿದ್ದೇನು?
ನವದೆಹಲಿ: ದೇಶದಾದ್ಯಂತ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿರುವುದಾಗಿ ಪ್ರಕಟಣೆ ಹೊರಡಿಸಿತ್ತು. ಸೆಪ್ಟೆಂಬರ್ 30ರವರೆಗೆ 2,000 ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಅವಕಾಶವನ್ನೂ ನೀಡಿತ್ತು. ಈ ಬೆನ್ನಲ್ಲೇ ಆರ್‌ಬಿಐ 1000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಆರ್‌ಬಿಐ ಸ್ಪಷ್ಟನೆ ನೀಡಿದೆ.
2ಸಾವಿರ ರೂಪಾಯಿ ನೋಟುಗಳನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಮತ್ತೆ 1ಸಾವಿರ ರೂ.ಕರೆನ್ಸಿ ಮರಳಿ ತರುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟನೆ ನೀಡಿದ್ದಾರೆ. 1ಸಾವಿರ ಮತ್ತು 2ಸಾವಿರ ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳುವುದರ ಮೂಲಕ ಜನರ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಚಳಿಗಾಲಕ್ಕೂ ಮುನ್ನ ದೆಹಲಿಯ ಗಾಳಿ ಗುಣಮಟ್ಟ ಕುಸಿತ – ಮತ್ತೊಮ್ಮೆ ಅಪ್ಪಳಿಸಲಿದ್ಯಾ ವಿಷಪೂರಿತ ಗಾಳಿ?
2016 ರ ನವೆಂಬರ್ ನಲ್ಲಿ ಹಳೆಯ 500ರೂ. ಜತೆಗೆ 1ಸಾವಿರ ರೂ.ನೋಟುಗಳನ್ನು ಅಮಾನ್ಯಗೊಳಿಸಲಾಯಿತು.ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ್ದರು. ಆಗ ಜನರು ದಿಗ್ಭ್ರಾಂತಿಗೆ ಒಳಗಾಗಿದ್ದು, ನೋಟುಗಳ ಬದಲಾವಣೆಗೆ ಸರ್ಕಾರ ಕಾಲಾವಕಾಶವನ್ನೂ ನೀಡಿತ್ತು. ಬಳಿಕ 500 ರೂ. ಮತ್ತು 2ಸಾವಿರ ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಆರ್‌ಬಿಐ ಚಲಾವಣೆಗೆ ತಂದಿತ್ತು. ಇನ್ನೇನು ಎಲ್ಲ ಸರಿಹೋಯಿತು ಎನ್ನುತ್ತಿರುವಾಗ 2ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಅನಿರೀಕ್ಷಿತವಾಗಿ ಹಿಂತೆಗೆದುಕೊಳ್ಳಲಾಗಿದೆ. 2ಸಾವಿರ ರೂ.ಬದಲಾವಣೆಗೆ ಮೊದಲು ಸೆ.30ರವರೆಗೆ ಬಳಿಕ ಅ.7ರವರೆಗೆ ಕಾಲಾವಕಾಶ ನೀಡಿತ್ತು. ಅ.7ರ ನಂತರ ಯಾರ ಬಳಿಯಾದರೂ ಈ ನೋಟುಗಳಿದ್ದರೆ ಆರ್‌ಬಿಐ ಪ್ರಾದೇಶಿಕ ಕಾರ್ಯಾಲಯಗಳಲ್ಲಿ ಬದಲಿಸಿಕೊಳ್ಳಲು ಅನುಮತಿ ನೀಡಿತ್ತು.