100 ಮಂದಿ ಬಿಜೆಪಿ ಅಭ್ಯರ್ಥಿಗಳು ಫೈನಲ್ – ಮಿಡ್‌ನೈಟ್ ಮೀಟಿಂಗ್ ವೇಳೆ ಮೋದಿ ನೀಡಿದ ಸೂಚನೆ ಏನು?

100 ಮಂದಿ ಬಿಜೆಪಿ ಅಭ್ಯರ್ಥಿಗಳು ಫೈನಲ್ – ಮಿಡ್‌ನೈಟ್ ಮೀಟಿಂಗ್ ವೇಳೆ ಮೋದಿ ನೀಡಿದ ಸೂಚನೆ ಏನು?

ಲೋಕಸಭೆ ಚುನಾವಣೆ ಹತ್ತಿರವಾಗಿದೆ. ರಾಹುಲ್​ ಗಾಂಧಿ ಜೋಡೋ ಯಾತ್ರೆ ಮಾಡ್ತಿದ್ದಾರೆ. ಮತ್ತೊಂದೆಡೆ ಮೋದಿ ದೇಶಾದ್ಯಂತ ಪ್ರಚಾರ ಬಿರುಸುಗೊಳಿಸಿದ್ದಾರೆ. ಇದರ ಮಧ್ಯೆ ಪ್ರಧಾನಿ ಮೋದಿ ಮಿಡ್​ನೈಟ್ ಮ್ಯಾರಥಾನ್ ಮೀಟಿಂಗ್ ಮಾಡಿದ್ದು, 100 ಮಂದಿ ಬಿಜೆಪಿ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದಾರೆ. ನೂರು ಮಂದಿಯ ಪೈಕಿ ಖುದ್ದು ಪ್ರಧಾನಿ ಮೋದಿಯ ಕ್ಷೇತ್ರ ಕೂಡ ಇದೆ ಅಂತಾ ಹೇಳಲಾಗ್ತಿದೆ. ಹಾಗಿದ್ರೆ ಮೋದಿ ಈ ಬಾರಿಯ ಎಲೆಕ್ಷನ್​​ನಲ್ಲಿ ಎಲ್ಲಿ ಅಖಾಡಕ್ಕಿಳೀತಿದ್ದಾರೆ. 100 ಮಂದಿ ಅಭ್ಯರ್ಥಿಗಳನ್ನ ಯಾವೆಲ್ಲಾ ಮಾನದಂಡದಲ್ಲಿ ಆಯ್ಕೆ ಮಾಡಲಾಗಿದೆ? ಮಿಡ್​ನೈಟ್ ಮೀಟಿಂಗ್ ವೇಳೆ ಮೋದಿ ನೀಡಿದ ಸೂಚನೆ ಏನು? ಇವೆಲ್ಲದರ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಮಾಸಿಕ ವೇತನ 1.6 ಲಕ್ಷ.. ಉಡುಗೆ ಬೆಲೆಯೇ 3 ಕೋಟಿ! – ದುಡ್ಡು ಎಲ್ಲಿಂದ ಬರುತ್ತೆ ಎಂದು ರಾಹುಲ್‌ ಗಾಂಧಿ ಪ್ರಶ್ನೆ

ಫೆಬ್ರವರಿ 29ರ ತಡರಾತ್ರಿ 11 ಗಂಟೆಗೆ ದೆಹಲಿಯಲ್ಲಿರೋ ಪ್ರಧಾನಿ ನಿವಾಸದಲ್ಲಿ ಆರಂಭವಾದ ಮೀಟಿಂಗ್ ಅಂತ್ಯವಾಗಿದ್ದು ಮಾರ್ಚ್ 1ನೇ ತಾರೀಖು ಮುಂಜಾನೆ ನಾಲ್ಕು ಗಂಟೆಗೆ. ಬರೋಬ್ಬರಿ ಐದು ಗಂಟೆಗಳ ಮೋದಿ ನೇತೃತ್ವದಲ್ಲಿ ಮ್ಯಾರಥಾನ್ ಮೀಟಿಂಗ್ ನಡೆದಿದೆ. ಇದೇ ವೇಳೆ ಲೋಕಸಭೆ ಚುನಾವಣೆಗೆ ಬಿಜೆಪಿಯ 100 ಮಂದಿ ಅಭ್ಯರ್ಥಿಗಳ ಲಿಸ್ಟ್​ನ್ನ ಫೈನಲ್ ಮಾಡಲಾಗಿದೆ. ಮಾಧ್ಯಮಗಳಲ್ಲಿ ವರದಿ ಆಗಿರೋ ಪ್ರಕಾರ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸ್ಪರ್ಧಿಸಲಿರೋ ಕ್ಷೇತ್ರಗಳ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ. ತನ್ನ ಎದುರಾಳಿ ಇಂಡಿಯಾ ಮೈತ್ರಿಕೂಟಕ್ಕಿಂತ ಮುನ್ನವೇ ಬಿಜೆಪಿ ತನ್ನ ಮೊದಲ ಹಂತದ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದು, ಈ ಮೂಲಕ ವಿಪಕ್ಷಗಳ ಮೇಲೆ ಇನ್ನಷ್ಟು ಒತ್ತಡ ಹೇರೋಕೆ ಮುಂದಾಗಿದೆ.

ಕಳೆದ ಐದು ವರ್ಷಗಳಲ್ಲಿ ಸಂಸದರ ಕಾರ್ಯವೈಖರಿ ಬಗ್ಗೆ ಆಯಾ ಕ್ಷೇತ್ರಗಳ ಜನರಿಂದ ಮತ್ತು ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸಿಯೇ ಬಿಜೆಪಿ ತನ್ನ ಅಭ್ಯರ್ಥಿಗಳನ್ನ ಆಯ್ಕೆ ಮಾಡ್ತಿದೆ. ಆಡಳಿತ ವಿರೋಧಿ ಅಲೆ ಇರುವವರಿಗೆ ಟಿಕೆಟ್ ನೀಡದೆ ಇರೋಕೆ ನಿರ್ಧರಿಸಿದೆ. ಫೆಬ್ರವರಿ 29ರಂದು ನಡೆದ ಲೇಟ್​​ನೈಟ್ ಮೀಟಿಂಗ್​ನಲ್ಲಿ ಪ್ರಮುಖವಾಗಿ ಹಿಂದಿ ಭಾಷಿಕ ರಾಜ್ಯಗಳು ಮತ್ತು ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಚರ್ಚೆಯಾಗಿದೆ. ಉತ್ತರಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶ, ಛತ್ತೀಸ್​ ಗಢ ಮತ್ತು ರಾಜಸ್ಥಾನ ಮತ್ತು ಗುಜರಾತ್​ನ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗಿದೆ. ಹಾಗೆಯೇ ಬಿಜೆಪಿ ಇನ್ನೂ ಬೇರೂರಿದ ದಕ್ಷಿಣದ ರಾಜ್ಯಗಳಾದ ಕೇರಳ ಮತ್ತು ತೆಲಂಗಾಣ ವಿಚಾರವಾಗಿ ಸಭೆಯಲ್ಲಿ ಗಂಭೀರ ಮಾತುಕತೆ ನಡೆದಿದೆ. ಕೆಲ ಅಭ್ಯರ್ಥಿಗಳನ್ನೂ ಅಂತಿಮಗೊಳಿಸಲಾಗಿದೆ. ಆದ್ರೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಎನ್​ಡಿಎ ಮೈತ್ರಿಕೂಟದಲ್ಲಿರೋ ಸ್ಥಳೀಯ ಪಕ್ಷಗಳ ಜೊತೆಗೆ ಚರ್ಚೆ ನಡೆಸಿ ಸೀಟು ಶೇರಿಂಗ್ ಫೈನಲ್ ಮಾಡಲಾಗುತ್ತೆ. ಈ ಪೈಕಿ ತಮಿಳುನಾಡಿ ಎಐಎಡಿಎಂಕೆ ಜೊತೆಗೆ ಮೈತ್ರಿ ಹಾಗೆಯೇ ಆಂಧ್ರಪ್ರದೇಶದಲ್ಲಿ ಜಗನ್​ಮೋಹನ್ ನೇತೃತ್ವದ ವೈಎಸ್ಆರ್​ ಕಾಂಗ್ರೆಸ್ ಜೊತೆಗೋ, ಇಲ್ಲಾಂ ಚಂದ್ರಬಾಬುನಾಯ್ಡು ನಾಯಕತ್ವದ ಟಿಡಿಪಿ ಜೊತೆಗೆ ಸೀಟು ಶೇರ್​ ಮಾಡಿಕೊಳ್ಳೋದೋ ಅನ್ನೋ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ಮೀಟಿಂಗ್​ ಮಾಡಿ ಬಿಜೆಪಿ ನಿರ್ಧಾರ ಕೈಗೊಳ್ಳಲಿದೆ.

ವಾರಾಣಸಿಯಿಂದಲೇ ಪ್ರಧಾನಿ ಮೋದಿ ಸ್ಪರ್ಧೆ?

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೂಡ ಪ್ರಧಾನಿ ಮೋದಿ ವಾರಾಣಸಿಯಿಂದ ಸ್ಪರ್ಧೆ ಮಾಡೋ ಸಾಧ್ಯತೆ ಇದೆ. 2014ರಲ್ಲಿ 3.7 ಲಕ್ಷ ಮತಗಳ ಅಂತರದಿಂದ ಮೋದಿ ವಾರಾಣಸಿಯಲ್ಲಿ ಗೆದ್ದು ಬೀಗಿದ್ರು. 2019ರಲ್ಲಿ ವಾರಾಣಸಿಯಲ್ಲಿ 4.8 ಲಕ್ಷ ಮತಗಳ ಅಂತದಿಂದ ಚುನಾವಣೆ ಗೆದ್ದಿದ್ರು. ಆದ್ರೆ ಈ ಬಾರಿ ಮೋದಿಯನ್ನ ತಡೆಯೋಕೆ ಇಂಡಿಯಾ ಮೈತ್ರಿಕೂಟ ಪ್ರಿಯಾಂಕಾ ಗಾಂಧಿಯನ್ನ ವಾರಾಣಸಿಯಿಂದ ಅಖಾಡಕ್ಕಿಳಿಸಲಿದೆ ಅನ್ನೋ ಟಾಕ್ ಕೂಡ ಇದೆ. ಆದ್ರೆ 1991ರಿಂದಲೂ ಬಿಜೆಪಿ ಕೋಟೆಯಾಗಿರೋ ವಾರಾಣಸಿಯನ್ನ ಉಳಿಸಿಕೊಳ್ಳೋಕೆ ಮೋದಿ ಮತ್ತೆ ಪುಣ್ಯಕ್ಷೇತ್ರದಿಂದಲೇ ಸ್ಪರ್ಧಿಸೋ ಪ್ಲ್ಯಾನ್​ನಲ್ಲಿದ್ದಾರೆ.

ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್​ ನ ಗಾಂಧಿನಗರದಿಂದ ಅಖಾಡಕ್ಕಿಳಿಯೋ ಸಾಧ್ಯತೆ ಇದೆ. ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಮತ್ತು ಬಿಜೆಪಿ ಭೀಷ್ಮ ಎಲ್​​.ಕೆ.ಅಡ್ವಾಣಿ ಕೂಡ ಗಾಂಧಿನಗರದಿಂದಲೇ ಲೋಕಸಭೆಗೆ ಆಯ್ಕೆಯಾಗಿದ್ರು. ಕ್ಷೇತ್ರ ಅಡ್ವಾಣಿಯಿಂದ ತೆರವಾದ ಬಳಿಕ 2019ರಲ್ಲಿ ಅಮಿತ್​ ಶಾ ಗಾಂಧಿ ನಗರದಿಂದಲೇ ಸ್ಪರ್ಧಿಸಿ 5.5 ಲಕ್ಷ ಮತಗಳ ಅಂತರದಿಂದ ಗೆದ್ದಿದ್ರು. ಈಗ ಮತ್ತೊಮ್ಮೆ ಅಮಿತ್​​ ಶಾ ಇಲ್ಲಿಂದಲೇ ಅಖಾಡಕ್ಕಿಳಿಯೋಕೆ ಮುಂದಾಗಿದ್ದಾರೆ.

ಇನ್ನುಳಿದ ಬಿಜೆಪಿ ಘಟಾನುಘಟಿ ನಾಯಕರ ವಿಚಾರಕ್ಕೆ ಬರೋದಾದ್ರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರಪ್ರದೇಶದ ಲಕ್ನೋದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಹಾಗೆಯೇ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಮಧ್ಯಪ್ರದೇಶದ ಗುನಾ ಶಿವ್​ಪುರಿಯಿಂದ ಸ್ಪರ್ಧೆ ಮಾಡಬಹುದು. ಯಾಕಂದ್ರೆ ಈ ಕ್ಷೇತ್ರದಲ್ಲಿ ಸಿಂಧಿಯಾ ಫ್ಯಾಮಿಲಿ ಒಟ್ಟು 14 ಬಾರಿ ಚುನಾವಣೆ ಗೆದ್ದಿದೆ. 1952ರಲ್ಲಿ ನಡೆದ ಮೊಟ್ಟ ಮೊದಲ ಚುನಾವಣೆಯಿಂದಲೂ ಸಿಂಧಿಯಾ ಕುಟುಂಬವೇ ಗುನಾ ಶಿವ್​ಪುರಿ ಕ್ಷೇತ್ರವನ್ನ ಪ್ರತಿನಿಧಿಸ್ತಾ ಇದೆ.

ಲೋಕಸಭೆಗೆ ಶಿವರಾಜ್​ ಸಿಂಗ್ ಚೌಹಾಣ್?

ಇನ್ನು ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್​ ಸಿಂಗ್ ಚೌಹಾಣ್ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಗೆದ್ರೂ ಚೌಹಾಣ್​ಗೆ ಮತ್ತೆ ಸಿಎಂ ಪಟ್ಟ ಕೊಟ್ಟಿಲ್ಲ. ಆದ್ರೆ ಬಿಜೆಪಿ ಗೆಲುವಿನಲ್ಲಿ ಶಿವರಾಜ್​ಸಿಂಗ್​ ಚೌಹಾಣ್​​ರದ್ದು ತುಂಬಾನೆ ಕೊಡುಗೆ ಇತ್ತು. ಮತ್ತೊಮ್ಮೆ ಮುಖ್ಯಮಂತ್ರಿ ಮಾಡದೆ ಇದ್ದಿದ್ದಕ್ಕೆ ಒಂದಷ್ಟು ಬಿಜೆಪಿ ಕಾರ್ಯಕರ್ತರು, ಚೌಹಾಣ್ ಬೆಂಬಲಿಗರು ಅಸಮಾಧಾನಗೊಂಡಿದ್ರು. ಆದ್ರೆ ಪ್ರಧಾನಿ ಮೋದಿ ಅಂದೇ ಚೌಹಾಣ್​ರನ್ನ ಪಕ್ಷ ಬಿಟ್ಟು ಕೊಡಲ್ಲ ಅನ್ನೋ ಮಾತನ್ನ ಕೂಡ ಹೇಳಿದ್ರು. ಅದ್ರಂತೆ ಈಗ ಭೋಪಾಲ್​ನಿಂದ ವಿವಾದಗಳಿಂದಲೇ ಸುದ್ದಿಯಾಗೋ ಸಂಸದೆ ಪ್ರಗ್ಯಾ ಠಾಕೂರ್ ಬದಲಿಗೆ ಶಿವರಾಜ್​ ಸಿಂಗ್ ಚೌಹಾಣ್​ಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಈ ಮೂಲಕ ಮುಂದಿನ ಸರ್ಕಾರದಲ್ಲಿ ಚೌಹಾಣ್​ರನ್ನ ಕೇಂದ್ರ ಸಚಿವರನ್ನಾಗಿ ಮಾಡೋ ಪ್ಲ್ಯಾನ್​ನಲ್ಲಿ ಬಿಜೆಪಿ ಇದೆ ಎನ್ನಲಾಗ್ತಿದೆ.

ಅಂತೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನ ಅನೌನ್ಸ್ ಮಾಡೋಕೂ ಶೆಡ್ಯೂಲ್ ಫಿಕ್ಸ್ ಮಾಡಿಕೊಂಡಿದೆ. ಮಾರ್ಚ್ 10ರ ಒಳಗಾಗಿ ತನ್ನ 50%ನಷ್ಟು ಅಭ್ಯರ್ಥಿಗಳ ಹೆಸರನ್ನ ಫೈನಲ್ ಮಾಡೋಕೆ ಬಿಜೆಪಿ ನಿರ್ಧರಿಸಿದೆ. 2019ರ ಲೋಕಸಭೆ ಚುನಾವಣೆ ವೇಳೆಯೂ ಅಷ್ಟೇ, ಮಾರ್ಚ್ 21ರ ಒಳಗಾಗಿ ಬಿಜೆಪಿ ತನ್ನ 164 ಅಭ್ಯರ್ಥಿಗಳ ಹೆಸರನ್ನ ಘೋಷಿಸಿತ್ತು. ಅಂದ್ರೆ ಚುನಾವಣೆ ದಿನಾಂಕ ಘೋಷಣೆಯಾಗೋ ಮುನ್ನವೇ ತನ್ನ 50 ಪರ್ಸೆಂಟ್ ಅಭ್ಯರ್ಥಿಗಳನ್ನ ಫೈನಲ್ ಮಾಡಿತ್ತು. ಈ ಬಾರಿಯೂ ಬಿಜೆಪಿ ಅದೇ ಹಾದಿಯಲ್ಲಿ ಸಾಗಿದೆ.

ಈ ಬಾರಿ ತನ್ನ ಕ್ಯಾಂಡಿಡೇಟ್​​ಗಳನ್ನ ಪಿಕ್ ಮಾಡೋಕೆ ಬಿಜೆಪಿ ಪ್ರತ್ಯೇಕ ಸ್ಟ್ರ್ಯಾಟಜಿ ಮಾಡಿಕೊಂಡಿದೆ. ವಿವಿಧ ಹಂತಗಳಲ್ಲಿ, ಸಮಗ್ರ ಪ್ರಕ್ರಿಯೆಗಳ ಮೂಲಕ, ಜನಸಾಮಾನ್ಯರ ಅಭಿಪ್ರಾಯಗಳನ್ನ ಸಂಗ್ರಹಿಸಿ, ಅದನ್ನ ಅವಲೋಕಿಸಿ, ಹೈ ಲೆವೆಲ್ ಸ್ಟ್ರ್ಯಾಟಜಿಕ್ ಡಿಸ್ಕಶನ್ ಮಾಡಿಯೇ ಬಿಜೆಪಿ ಅಭ್ಯರ್ಥಿಗಳನ್ನ ಆಯ್ಕೆ ಮಾಡ್ತಿದೆ. ಮೊದಲಿಗೆ ನಮೋ ಆ್ಯಪ್​​ ಮೂಲಕ ಗ್ರಾಸ್​ರೂಟ್ ಲೆವೆಲ್​ನಲ್ಲಿ ಅಂದ್ರೆ ತಳಮಟ್ಟದಲ್ಲಿ ತಮ್ಮ ಕ್ಷೇತ್ರದ ಈಗಿನ ಸಂಸದರ ಬಗ್ಗೆ ಜನರ ಅಭಿಪ್ರಾಯವನ್ನ ಕಲೆಕ್ಟ್ ಮಾಡಲಾಗಿದೆ. ಹಾಗೆಯೇ ಆ ಕ್ಷೇತ್ರದಲ್ಲಿ ಬಿಜೆಪಿಯಲ್ಲಿರೋ ಮೂವರು ಪ್ರಭಾವಿ ನಾಯಕರ ಬಗ್ಗೆಯೂ ಜನರಿಂದಲೇ ಇನ್​ಫಾರ್ಮೇಶನ್ ಕಲೆಕ್ಟ್ ಮಾಡಿದ್ದಾರೆ. ಅಂದ್ರೆ ಈಗಿರೋ ಸಂಸದರ ಬಗ್ಗೆ ಜನರಿಗೆ ಒಳ್ಳಯ ಅಭಿಪ್ರಾಯ ಇಲ್ಲ ಅನ್ನೋದಾದ್ರೆ ಬೇರೆ ಯಾರಿಗೆ ಟಿಕೆಟ್ ನೀಡಬಹುದು ಅನ್ನೋ ವಿಚಾರವಾಗಿ ಜನರಿಂದಲೇ ಮಾಹಿತಿ ಸಂಗ್ರಹಿಸಲಾಗಿದೆ. ಹೀಗಾಗಿ ಜನರ ಒಲವು ಯಾರ ಕಡೆಗೆ ಇದ್ಯೋ ಅವರಿಗೇ ಬಿಜೆಪಿ ಟಿಕೆಟ್ ನೀಡ್ತಿದೆ.

ಕಳೆದ ಎರಡು ವರ್ಷಗಳಿಂದಲೇ ಕ್ಷೇತ್ರದ ಸಂಸದರ ಬಗ್ಗೆ ಮತ್ತು ಇತರೆ ನಾಯಕರ ಬಗ್ಗೆ ಬಿಜೆಪಿ ಮಾಹಿತಿ ಕಲೆ ಹಾಕಿದೆ. ಅದೇ ರೀತಿ ಬಿಜೆಪಿ ಸರ್ವೆ ಏಜೆನ್ಸಿ ಕೂಡ ಪ್ರತಿ ಕ್ಷೇತ್ರಗಳಿಂದ ತನ್ನದೇ ಸಮೀಕ್ಷಾ ವರದಿಯನ್ನ ಸಲ್ಲಿಸಿದೆ. ಇಷ್ಟೇ ಅಲ್ಲ, ಕೇಂದ್ರ ಸಚಿವರುಗಳನ್ನ ದೇಶಾದ್ಯಂತ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಕಳುಹಿಸಿ ಅಲ್ಲಿನ ಸಂಸದರ ಕಾರ್ಯವೈಖರಿ, ಅವರ ಟ್ರ್ಯಾಕ್​ ರೆಕಾರ್ಡ್​ ಹೇಗಿದೆ ಅನ್ನೋದನ್ನ ಪರಿಶೀಲಿಸಿದ್ದಾರೆ. ಮಿನಿಸ್ಟರ್​ಗಳ ವರದಿ, ಸಮೀಕ್ಷಾ ವರದಿ, ಜನರ ಅಭಿಪ್ರಾಯ ಇವೆಲ್ಲವನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ, ಬಿಜೆಪಿ ಜನರಲ್ ಸೆಕ್ರೆಟರಿ ಬಿಎಲ್​ ಸಂತೋಷ್ ಸಂಪೂರ್ಣವಾಗಿ ರಿವ್ಯೂ ಮಾಡಿ ನಂತರ ಪ್ರಧಾನಿ ಮೋದಿ ಮುಂದೆ ಸಬ್​ಮಿಟ್ ಮಾಡಿ ಚರ್ಚೆ ನಡೆಸಿದ್ದಾರೆ.

ಹಾಗೆಯೇ ಬೇರೆ ಪಕ್ಷಗಳ ಸ್ಥಳೀಯ ಪ್ರಭಾವಿ ನಾಯಕರನ್ನ ಸೆಳೆಯೋಕೆ ಬಿಜೆಪಿ ಪ್ಲ್ಯಾನ್ ಮಾಡಿತ್ತು. ಈಗಿರೋ ಬಿಜೆಪಿ ಸಂಸದರ ಪೈಕಿ 60-70 ಮಂದಿಗೆ ಈ ಬಾರಿ ಟಿಕೆಟ್ ಸಿಗೋದು ಡೌಟ್ ಅನ್ನೋ ಮಾಹಿತಿ ಕೂಡ ಇದೆ. ಅಂದ್ರೆ 60-70 ಹೊಸ ಅಭ್ಯರ್ಥಿಗಳು ಬಿಜೆಪಿಯಿಂದ ಅಖಾಡಕ್ಕಿಳಿಯಬಹುದು. ಆದ್ರೆ ಕಳೆದ ಬಾರಿ ಸ್ಪರ್ಧಿಸಿ ಗೆದ್ದಿದ್ದ ಹಿಂದುಳಿದ ಸಮುದಾಯಗಳ ಅಭ್ಯರ್ಥಿಗಳಿಗೆ ಮಾತ್ರ ಈ ಬಾರಿಯೂ ಟಿಕೆಟ್ ನೀಡೋಕೆ ಬಿಜೆಪಿ ನಿರ್ಧರಿಸಿದ್ಯಂತೆ. ಹಿಂದುಳಿದ ವರ್ಗಗಳ ಸಂಸದರ ಟಿಕೆಟ್ ತಪ್ಪುವ ಬಗ್ಗೆ ಯಾವುದೇ ಆತಂಕ ಇಲ್ಲ. 2019ರ ಚುನಾವಣೆಯಲ್ಲಿ ಬಿಜೆಪಿಯಿಂದ 85 ಹಿಂದುಳಿದ ಸಮುದಾಯದ ಅಭ್ಯರ್ಥಿಗಳು ಸಂಸದರಾಗಿದ್ರು. ಅಂತೂ ಅಳೆದು ತೂಗಿ, ಲೆಕ್ಕಾಚಾರ ಹಾಕಿಯೇ ಬಿಜೆಪಿ ಅಭ್ಯರ್ಥಿಗಳನ್ನ ಫೈನಲ್ ಮಾಡಲಾಗ್ತಿದೆ.

Sulekha