ಸುಪ್ರೀಂಕೋರ್ಟ್ ನಲ್ಲಿ ಕೇಂದ್ರಕ್ಕೆ ಜಯ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ

ಸುಪ್ರೀಂಕೋರ್ಟ್ ನಲ್ಲಿ ಕೇಂದ್ರಕ್ಕೆ ಜಯ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ

ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ಒದಗಿಸುವ ಕೇಂದ್ರ ಸರ್ಕಾರದ ಕಾನೂನನ್ನು (ಈಡಬ್ಲ್ಯೂಎಸ್) ಸುಪ್ರೀಂಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ಒದಗಿಸುವುದಕ್ಕೆ ಸಂಬಂಧಿಸುವ ಕಾನೂನಿನ ಸಿಂಧುತ್ವಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಪರಿಶೀಲಿಸಿತು. ಐವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠದಲ್ಲಿ ನಾಲ್ವರು ಮೀಸಲಾತಿ ಪರವಾಗಿ ಹಾಗೂ ಒಬ್ಬರು ಭಿನ್ನಮತದ ತೀರ್ಪು ನೀಡಿದರು. ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ತ್ರಿವೇದಿ, ಫಾರ್ದಿವಾಲ, ಯು.ಯು.ಲಲಿತ್ ಮೀಸಲಾತಿ ಪರವಾಗಿ ತೀರ್ಪು ಕೊಟ್ಟಿದ್ದು, ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಭಿನ್ನಮತ ತೀರ್ಪು ನೀಡಿದರು.

ಇದನ್ನೂ ಓದಿ: ಸೊಳ್ಳೆಗಳನ್ನು ಕೊಂದು ಕೋರ್ಟ್ ಗೆ ತಂದ ದಾವೂದ್ ಸಹಚರ: ಕಾರಣ ಕೇಳಿ ನ್ಯಾಯಾಧೀಶರೇ ಸುಸ್ತು!

ಆರ್ಥಿಕ ಮಾನದಂಡಗಳನ್ನು ಆಧರಿಸಿದ ಮೀಸಲಾತಿ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆಯೇ? ಹೀಗೆ ಮಾಡಿದರೆ ಸಂವಿಧಾನದ 103ನೇ ತಿದ್ದುಪಡಿಯು ಸಂವಿಧಾನದ ಮೂಲ ಆಶಯದ ಉಲ್ಲಂಘನೆಯಾಗುತ್ತದೆಯೇ? ಖಾಸಗಿ ಸಂಸ್ಥೆಗಳಿಗೆ ನೇಮಕಾತಿ ಅಥವಾ ದಾಖಲಾತಿಗೆ ಸಂಬಂಧಿಸಿದ ವಿಚಾರದಲ್ಲಿ  ನಿರ್ದೇಶನ ನೀಡಲು ಸರ್ಕಾರಗಳಿಗೆ ವಿಶೇಷ ಅಧಿಕಾರ ನೀಡಲು ಅವಕಾಶವಿದೆಯೇ ಎಂಬ ಅಂಶಗಳನ್ನು ನ್ಯಾಯಾಲಯ ಪರಿಶೀಲನೆಗೆ ಒಳಪಡಿಸಿತು.

ಸಂವಿಧಾನದ 15 (6) ಮತ್ತು 16 (6) 103ನೇ ತಿದ್ದುಪಡಿಯ ಅನ್ವಯ ಉದ್ಯೋಗ ಮತ್ತು ಶಿಕ್ಷಣದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರ ಮೀಸಲಾತಿ ನೀಡಲು ಅನುವು ಮಾಡಿಕೊಳ್ಳಲಾಯಿತು. ಪರಿಶಿಷ್ಟ ಜಾತಿ (ಎಸ್​ಸಿ), ಪರಿಶಿಷ್ಟ ವರ್ಗ (ಎಸ್​ಟಿ) ಮತ್ತು ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರದ ವ್ಯಕ್ತಿಗಳ ಕುಟುಂಬದ ವಾರ್ಷಿಕ ಆದಾಯವು ₹ 8 ಲಕ್ಷಕ್ಕೂ ಕಡಿಮೆಯಿದ್ದರೆ ಈ ಕಾನೂನಿನ ಅನ್ವಯ ಮೀಸಲಾತಿ ನೀಡಲು ಅವಕಾಶ ಸಿಗುತ್ತದೆ.

ಸಂವಿಧಾನದ 103ನೇ ತಿದ್ದುಪಡಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಪರಿಗಣಿಸಿದ ಮತ್ತೊಂದು ಅಂಶ ಶೇ 50ರ ಮೀಸಲಾತಿ ನಿಯಮ. 1992ರ ಇಂದ್ರಾ ಸಾಹ್ನಿ ಪ್ರಕರಣದಲ್ಲಿ (ಮಂಡಲ್ ಆಯೋಗ ಪ್ರಕರಣ) 9 ಸದಸ್ಯರಿದ್ದ ನ್ಯಾಯಪೀಠವು ಮೀಸಲಾತಿಯ ಒಟ್ಟು ಪ್ರಮಾಣ ಶೇ 50 ಮೀರಬಾರದು. ವಿಶೇಷ ಸಂದರ್ಭದಲ್ಲಿ ಈ ನಿರ್ಬಂಧಕ್ಕೆ ವಿನಾಯ್ತಿಯಿದೆ ಎಂದು ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನಿವೃತ್ತಿಗೆ ಒಂದು ದಿನ ಮೊದಲು ಈ ಮಹತ್ವದ ತೀರ್ಪು ಬಂದಿದೆ.

suddiyaana