ಬೇಸಿಗೆಯಲ್ಲಿ ಹೋಗಬಹುದಾದ ಕರ್ನಾಟಕದ 10 ಸ್ಥಳ
ಬೆಟ್ಟಗಳ ಸಾಲಿನಲ್ಲಿ ಕೂಲ್ ಕೂಲ್
ಬೇಸಿಗೆ ಟೈಂನಲ್ಲಿ ಎಲ್ಲಾದ್ರೂ ಟ್ರಿಪ್ ಹೋಗ್ಬೇಕು ಅನಿಸ್ತಿದ್ಯಾ. ಆಫೀಸ್ ಕೆಲಸ, ಟ್ರಾಫಿಕ್ ಕಿರಿಕಿರಿಯಿಂದ ಸ್ವಲ್ಪ ರಿಲ್ಯಾಕ್ಸ್ ಬೇಕು ಅಂತಿದೀರಾ. ಕರ್ನಾಟಕದಲ್ಲೇ ಯಾವುದಾದ್ರೂ ಪ್ಲೇಸ್ ಟ್ರಿಪ್ ಮಾಡ್ಬೇಕು ಅನ್ಕೊಂಡು ಇದೀರಾ.. ಒಂದೆರಡು ದಿನ ರಜೆ ತಗೊಂಡು ಫ್ಯಾಮೀಲಿ ಜೊತೆ ಅಥವಾ ಸ್ನೇಹಿತರ ಜೊತೆ ಟೈಮ್ ಪಾಸ್ ಮಾಡ್ಬೇಕು ಅಂತ ಪ್ಲ್ಯಾನ್ ಮಾಡ್ಕೊಂಡು ಇದೀರಾ.. ಹಾಗಿದ್ರೆ ಕರ್ನಾಟಕದಲ್ಲಿ ಬೇಸಿಗೆಯಲ್ಲೂ ಕೂಲ್ ಇರೋ 10 ಸ್ಥಳಗಳನ್ನ ನೋಡೋಣ ಬನ್ನಿ.
ಬೆಟ್ಟಗಳ ಸಾಲಿನಲ್ಲಿ ಕಾಫಿನಾಡಿನ ಸೌಂದರ್ಯ
ಚಿಕ್ಕಮಗಳೂರು ಕೂಡ ಕರ್ನಾಟಕದ ಪ್ರಮುಖ ಬೆಟ್ಟಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಜಿಲ್ಲೆ. ಮುಳ್ಳಯ್ಯನಗಿರಿ ಅತೀ ಎತ್ತರದ ಬೆಟ್ಟ. ಬೆಟ್ಟದ ತುಟ್ಟ ತುದಿ ಏರಿ ಸುತ್ತಲೂ ಕಣ್ಣು ಹಾಯಿಸಿದಾಗ ಆಗುವ ಮಜವೇ ಬೇರೆ. ಅಷ್ಟರ ಮಟ್ಟಿ ಅಲ್ಲಿನ ಸೌಂದರ್ಯ ನಮ್ಮನ್ನು ರಿಲಾಕ್ಸ್ ಮೂಡ್‌ಗೆ ಕರೆದುಕೊಂಡು ಹೋಗುತ್ತೆ.. ಇದರೊಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ, ಭದ್ರಾ ಅರಣ್ಯ ಪ್ರದೇಶದ ಸಫಾರಿ. ಕಲ್ಲತ್ತಗಿರಿ ಜಲಪಾತದ ಸೊಬಗೂ ಬೇಸಿಗೆಗೆ ಖುಷಿ ಕೊಡಲಿವೆ
ಕಬಿನಿ ಹಿನ್ನೀರು ಬೇಸಿಗೆಯಲ್ಲಿ ತಂಪು
ಮೈಸೂರು ಜಿಲ್ಲೆಯ ನಾಗರಹೊಳೆ ಹಾಗೂ ಬಂಡೀಪುರ ಅರಣ್ಯದ ನಡುವೆ ಹಂಚಿ ಹೋಗಿರುವ ಕಬಿನಿ ಹಿನ್ನೀರು ಕೂಡ ಬೇಸಿಗೆಗೆ ಉತ್ತಮ ಪ್ರವಾಸಿ ತಾಣ. ನಾಗರಹೊಳೆ ಕಾಡಿನ ನಡುವಿನ ಸಫಾರಿಯೊಂದಿಗೆ ಕಬಿನಿ ಹಿನ್ನೀರಿಗೂ ಹೋದರೆ ಅಲ್ಲಿ ಬೋಟಿಂಗ್‌ಗೆ ಹೋಗಬಹುದು. ರೆಸಾರ್ಟ್ ಮೂಲಕ ಬೋಟಿಂಗ್‌ಗೆ ವ್ಯವಸ್ಥೆ ಇದೆ. ಅರಣ್ಯ ಇಲಾಖೆಯಿಂದ ಎಚ್‌ಡಿಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಬಳಿ ಅರಣ್ಯ ಇಲಾಖೆ ಸಫಾರಿ ವ್ಯವಸ್ಥೆಯಿದೆ. ಮೊದಲೇ ಯೋಜಿಸಿಕೊಂಡರೆ ಕಬಿನಿ ಹಿನ್ನೀರ ಭಾಗದ ಹೋಂಸ್ಟೇಗಳಲ್ಲಿ ಉಳಿದು ದಿನ ಕಳೆಯಬಹುದು
ಟಿಪ್ಪುವಿನ ಬೇಸಿಗೆ ಅರಮನೆ ಯಾವಾಗಲೂ ಕೂಲ್
ಮಂಡ್ಯ ಜಿಲ್ಲೆಯ ಮತ್ತೊಂದು ಕಾವೇರಿ ತೀರದ ಪ್ರವಾಸಿ ತಾಣ ಶ್ರೀರಂಗಪಟ್ಟಣ, ಟಿಪ್ಪುವಿನ ಬೇಸಿಗೆ ಅರಮನೆ ಯಾವಾಗಲೂ ಕೂಲ್ ಆಗಿರುತ್ತದೆ. ಆ ರೀತಿಯಲ್ಲಿಯೇ ಅದನ್ನು ನಿರ್ಮಿಸಲಾಗಿದೆ. ಸಮೀಪದಲ್ಲಿಯೇ ಘೋಸಾಯಿ ಘಾಟ್ ಇದ್ದು ಇಲ್ಲಿ ಮಕ್ಕಳೊಂದಿಗೆ ಆಟವಾಡಲು ಕಾವೇರಿ ನದಿಯ ಪಾತ್ರ ಅವಕಾಶ ಮಾಡಿಕೊಡುತ್ತದೆ. ಸಂಗಮ ಪ್ರದೇಶವೂ ಇದೆ. ನಿಮಿಷಾಂಬ ದೇಗುಲದ ಸಮೀಪದಲ್ಲಿಯೂ ಕಾವೇರಿ ತೀರದ ಸವಿಯನ್ನು ಸವಿಯಬಹುದು. ಶ್ರೀರಂಗಪಟ್ಟಣದಿಂ ಹದಿನೈದು ಕಿ.ಮಿ ದೂರದಲ್ಲಿ ಬಲಮುರಿಯಿದ್ದು. ಇದು ಕೂಡ ಕಾವೇರಿ ನದಿಯ ನೈಸರ್ಗಿಕ ತಾಣ. ಇಲ್ಲಿಯೂ ನೀರಿನಲ್ಲಿ ಕುಟುಂಬದೊಂದಿಗೆ ಕಳೆಯಲು ಅವಕಾಶವಿದೆ.
ಮಲೆನಾಡಿನಲ್ಲಿ ಕೊಡಚಾದ್ರಿ ಬೆಟ್ಟ ಸಾಲು
ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯಲ್ಲಿ ಹಂಚಿಹೋಗಿರುವ ಕೊಡಚಾದ್ರಿ ಭೇಟಿಯೂ ಬೇಸಿಗೆಗೆ ಉತ್ತಮ. ಕೊಡಚಾದ್ರಿ ಬೆಟ್ಟವನ್ನು ಏರಿಬಂದರೆ ದೇಹ ಪುಳಕಿತಗೊಳ್ಳುವುದಂತೂ ಖಚಿತ. ಅಷ್ಟು ಎತ್ತರದಲ್ಲಿದೆ ಕೊಡಚಾದ್ರಿ ಬೆಟ್ಟ ಸಾಲುಗಳು. ಇಲ್ಲಿ ಮೊದಲೇ ಬುಕ್ಕಿಂಗ್ ಮಾಡಿಕೊಂಡು ಹೋದರೆ ಟ್ರಕ್ಕಿಂಗ್‌ಗೂ ಅವಕಾಶವಿದೆ. ಸಮೀಪದಲ್ಲಿಯೇ ಸಿಗಂದೂರು ದೇಗುಲ ದರ್ಶನ, ಲಾಂಜ್ ಪಯಣ, ಕೊಲ್ಲೂರು ಸೌಪರ್ಣಿಕ ನದಿ ಸ್ನಾನ, ಮೂಕಾಂಬಿಕ ದರ್ಶನವನ್ನೂ ಜೋಡಿಸಿಕೊಳ್ಳಬಹುದು.
ಸಕಲೇಶಪುರ ಕೂಡ ಬೇಸಿಗೆಯಲ್ಲಿ ಸೂಪರ್
ಹಾಸನ ಜಿಲ್ಲೆಯ ಸಕಲೇಶಪುರ ಕೂಡ ಬೇಸಿಗೆ ವೇಳೆ ನಮ್ಮ ಪ್ರವಾಸದ ಅತ್ಯುತ್ತಮ ಆಯ್ಕೆಯಾಗಬಹುದು. ಸಕಲೇಶಪುರ ಬಳಿ ಇರುವ ಬೆಟ್ಟದ ಸಾಲುಗಳು, ಕೋಟೆಯನ್ನು ವೀಕ್ಷಿಸಲು ಅವಕಾಶವಿದೆ. ಸಕಲೇಶಪುರ ಸುತ್ತಮುತ್ತ ಹಸಿರು ಪರಿಸರದ ನಡುವೆ ಹಲವು ಹೋಂಸ್ಟೇ, ರೆಸಾರ್ಟ್‌ಗಳ ಸೇವೆಯೂ ಬಿಸಿಲ ಝಳಕ್ಕೆ ಕೊಂಚ ನಿರಾಳತೆ ನೀಡಬಹುದು. ಬಿಸಿಲೇ ಘಾಟ್ ಪಯಣವೂ ಮುದ ಕೊಡಬಹುದು. ಸಮೀಪವೇ ಬೇಲೂರು ಹಳೆಬೀಡು ಕೂಡ ಇರುವುದರಿಂದ ಪ್ರವಾಸದ ಭಾಗ ಮಾಡಿಕೊಳ್ಳಬಹುದು.
ಕಾಡಿನ ನಡುವೆ ಹರಿಯುವ ಕಾವೇರಿ
ಕಾವೇರಿ ತೀರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮಂಡ್ಯ ಜಿಲ್ಲೆಯ ಮುತ್ತತ್ತಿ ಪ್ರಮುಖವಾದದ್ದು. ಕಾವೇರಿ ನದಿ ಹರಿಯವ ಮುತ್ತತ್ತಿಯಲ್ಲಿ ಆಂಜನೇಯಸ್ವಾಮಿ ದೇಗುಲವಿದೆ. ಕಾಡಿನ ನಡುವೆ ಹರಿಯುವ ಕಾವೇರಿ ನದಿಯು ಪ್ರಾಕೃತಿಕ ಸೊಬಗನ್ನು ಹೆಚ್ಚಿಸಿದೆ. ಇಲ್ಲಿನ ಆಹ್ಲಾದಕರ ಸನ್ನಿವೇಶ ಖಂಡಿತವಾಗಿಯೂ ಮುದ ನೀಡುತ್ತದೆ. ವಿಶ್ವದಲ್ಲೇ ವಿಶಿಷ್ಟ ಎನ್ನಬಹುದಾದ ಮಹಷಿರ್ ಮೀನು ಇಲ್ಲಿನ ವಿಶೇಷ. ಕಾವೇರಿ ನದಿಯಲ್ಲಿ ಇವುಗಳನ್ನು ಹಿಡಿಯುವ ಸಾಹನ ಚಟುವಟಿಕೆಯನ್ನು ರೆಸಾರ್ಟ್‌ಗಳು ನಡೆಸುತ್ತವೆ. ಬೆಂಗಳೂರು ಹಾಗೂ ಮೈಸೂರಿನಿಂದ ಹತ್ತಿರದಲ್ಲಿಯೇ ಇದೆ ಮುತ್ತತ್ತಿ.
ಕೈ ಬೀಸಿ ಕರೆಯುತ್ತೆ ಕನಕಪುರ ಸಂಗಮ
ಬೆಂಗಳೂರು ಸಮೀಪದಲ್ಲಿಯೇ ಇರುವ ಕನಕಪುರ ತಾಲ್ಲೂಕಿನ ಸಂಗಮವೂ ಬೇಸಿಗೆಗೆ ಉತ್ತಮ ತಾಣ. ಇಲ್ಲಿ ಕಾವೇರಿ ನದಿ ಸಂಗಮ ರೂಪವಾಗಿ ಮುಂದೆ ಮೇಕೆದಾಟುಗೆ ಹೋಗುವ ತಾಣವಿದೆ. ಇಲ್ಲಿಯೂ ಅರಣ್ಯ ಪ್ರದೇಶವೂ ಇರುವುದರಿಂದ ಹಸಿರು ವಾತಾವರಣ ಚೆನ್ನಾಗಿದೆ. ಕಾವೇರಿ ನದಿಯಲ್ಲಿ ಕುಟುಂಬದೊಂದಿಗೆ ಕಳೆಯಲು ಸೂಕ್ತ ತಾಣವೂ ಆಗಿದೆ. ಅಲ್ಲಿಂದ ಮೇಕೆದಾಟುವಿಗೂ ಹೋಗಿ ಕಾವೇರಿ ನದಿ ತಿರುವಿನಿಂದ ರೂಪಿಸಿರುವ ಕಲಾಕೃತಿಗಳನ್ನು ನೋಡಿಕೊಂಡು ಬರಬಹುದು. ಈ ಭಾಗದಲ್ಲೂ ಹೋಂಸ್ಟೇ ವ್ಯವಸ್ಥೆಗಳಿವೆ.
ದಾಂಡೇಲಿ ಬೇಸಿಗೆ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ
ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಸಮೀಪದಲ್ಲಿಯೇ ಹರಿಯುವ ಹಾಗೂ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ ಪ್ರದೇಶವನ್ನು ಬೆನ್ನಿ ಇಟ್ಟುಕೊಂಡಿರುವ ದಾಂಡೇಲಿ ಬೇಸಿಗೆ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಕಾಳಿ ನದಿ ರಾಫ್ಟಿಂಗ್ ಸಹಿತ ಹಲವು ಚಟುವಟಿಕೆಗಳನ್ನು ಇಲ್ಲಿ ಮಾಡಬಹುದು. ಇದು ಮನಸಿಗೆ ಮುದ ನೀಡಲಿದೆ. ಸಮೀಪದಲ್ಲಿಯೇ ಸೈಕ್ಸ್ ಪಾಯಿಂಟ್, ಅಣಶಿ ಅರಣ್ಯ ಸಫಾರಿಗೂ ಅವಕಾಶವಿದೆ. ಅಲ್ಲಿಂದ ಡ್ರೈವ್ ಕೂಡ ಮಾಡಿಕೊಂಡು ಕಾರವಾರದವರೆಗೂ ಹೋಗಬಹುದು. ಇದು ಕೂಡ ಮುದ ನೀಡುವ ಮಾರ್ಗವೇ.
ಕೊಡಗಿನಲ್ಲಿ ಪ್ರವಾಸಿಗರಿಗೆ ಸ್ವರ್ಗ
ಕೊಡಗು ಜಿಲ್ಲೆ ಬೇಸಿಗೆಯಲ್ಲಿನ ಪ್ರವಾಸಕ್ಕೆ ಅತ್ಯುತ್ತಮ ತಾಣ.ಕಾವೇರಿ ಉಗಮ ಸ್ಥಾನದ ಜತೆಗೆ ನದಿ ಹರಿಯುವ ಹಲವು ತಾಣಗಳು ಇಲ್ಲಿವೆ. ಕೊಡಗು ಜಿಲ್ಲೆಯ ಹಲವು ಬೆಟ್ಟಗುಡ್ಡಗಳ ಸಾಲಿನ ಪ್ರವಾಸಿ ತಾಣಗಳಿಗೆ ಹೋಗಬಹುದು. ಸೋಮವಾರಪೇಟೆ ತಾಲ್ಲೂಕು, ವೀರಾಜಪೇಟೆ ತಾಲ್ಲೂಕಿನ ತಾಣಗಳು ಚೆನ್ನಾಗಿವೆ. ಕುಶಾಲನಗರ ಸಮೀಪದ ನಿಸರ್ಗಧಾಮ, ದುಬಾರೆ ಕೂಡ ಪ್ರವಾಸಿಗರಿಗೆ ಅತ್ಯುತ್ತಮ ಆಯ್ಕೆ. ಕಾವೇರಿ ನದಿಯಲ್ಲಿ ಮಿಂದೇಳುವ ಅವಕಾಶ ಇಲ್ಲಿದೆ. ಆನೆ ಶಿಬಿರ ಭೇಟಿಯೂ ಮಜಾ ನೀಡುತ್ತದೆ
ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ಕೊಡಿ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟ ಬೇಸಿಗೆಯಲ್ಲಿ ಕಳೆಯಲು ಉತ್ತಮ ಆಯ್ಕೆಯಾಗಬಹುದು. ಎತ್ತರದ ಬೆಟ್ಟ, ಸುತ್ತಲು ಹಸಿರು ವಾತಾವರಣ, ಅರಣ್ಯ ಪ್ರದೇಶ ಇಲ್ಲಿ ಉಷ್ಣಾಂಶ ಕಡಿಮೆಯಾಗಲು ಕಾರಣ. ಬೆಟ್ಟದಲ್ಲಿ ರಂಗನಾಥಸ್ವಾಮಿ ದೇಗುಲವೂ ಇದೆ. ದೇಗುಲದಿಂದ ನಿಂತು ನೋಡಿದರೆ ಸುತ್ತಲೂ ಹಸಿರು ವಾತಾವರಣ, ವನ್ಯಜೀವಿಗಳ ಸಂಚಾರವನ್ನೂ ನೋಡಬಹುದು. ಸಮೀಪದಲ್ಲಿಯೇ ಕೆಗುಡಿ ಅರಣ್ಯ ಪ್ರದೇಶವೂ ಇರುವುದರಿಂದ ಅಲ್ಲಿಗೂ ಹೋಗಿ ಬರಬಹುದು..