₹ 4 ಕೋಟಿ ಮೌಲ್ಯದ ಮಾದಕ ವಸ್ತುಗಳು ಮಾರಾಟ – 10 K.G ಡ್ರಗ್ , 10 ಜನ ಅರೆಸ್ಟ್

₹ 4 ಕೋಟಿ ಮೌಲ್ಯದ ಮಾದಕ ವಸ್ತುಗಳು ಮಾರಾಟ – 10 K.G ಡ್ರಗ್ , 10 ಜನ ಅರೆಸ್ಟ್

ನಗರದ ವಿವಿಧ ಕಡೆಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಕೇರಳದ ಏಳು ಮಂದಿ ಸೇರಿದಂತೆ ಹತ್ತು ಡ್ರಗ್‌ ಪೆಡ್ಲರ್‌ಗಳನ್ನು ಈಶಾನ್ಯ ವಿಭಾಗದ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿ 4 ಕೋಟಿ ಮೌಲ್ಯದ ಗಾಂಜಾ, ಚರಸ್‌‍, ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ನಗರದ ಕೋಗಿಲು ಲೇಔಟ್‌ ನಿವಾಸಿ, ಏರೋನಾಟಿಕಲ್‌ ಎಂಜಿನಿ ಯರಿಂಗ್‌ ವಿದ್ಯಾರ್ಥಿ ಕುಶಾಲ್‌ಗೌಡ (23),ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿರುವ ದೆಹಲಿಯ ಶಶಾಂಕ್‌ (22), ಹೊರಮಾವು ನಿವಾಸಿ ಸಾಗರ್‌ (29), ಕೇರಳದ ವಿಲ್ಸನ್‌ (48), ಆಶಿರ್‌ (36), ರಿಯಾಸ್‌‍ (35), ಸಜಾದ್‌ (34), ಶಿಹಾಬ್‌ (30), ಅಬ್ದುಲ್‌ ನಾಸಿರ್‌(28) ಮತ್ತು ಸಾಫ್ಟ್ ವೇರ್‌ ಎಂಜಿನಿಯರ್‌ ಅಭಿನವ್‌ (21) ಬಂಧಿತರು.

ಜಕ್ಕೂರು ರೈಲ್ವೆ ಟ್ರ್ಯಾಕ್‌ ಬಳಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳದ ಮೇಲೆ ದಾಳಿ ಮಾಡಿದ ಪೊಲೀಸರು ಹೊರ ರಾಜ್ಯದ ಇಬ್ಬರು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.ಈ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ವಿದೇಶ ಹಾಗೂ ಹೊರ ರಾಜ್ಯದಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ: ವೈಜಾಗ್ ನಲ್ಲಿ ಸೇಡಿನ ಸಮರ – ವೈಟ್ ವಾಶ್ ಮಾಡಿದ್ರಷ್ಟೇ ಸಮಾಧಾನ!

ಆರೋಪಿಗಳಿಂದ 1 ಕೆಜಿ ಹೈಡ್ರೋ ಗಾಂಜಾ, 50 ಗ್ರಾಂ ಎಂಡಿಎಂಎ , 500 ಗ್ರಾಂ ಚರಸ್‌‍, 8 ಕೆಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ 6 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ತನಿಖೆ ಮುಂದುವರೆಸಿದ ಪೊಲೀಸರು ಕನಕಪುರ ರಸ್ತೆಯ ಕಗ್ಗಲಿ ಪುರದಲ್ಲಿ ಮತ್ತೆ ಐವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇವರು ಹೊರ ರಾಜ್ಯದವರು ಎಂದು ಗೊತ್ತಾಗಿದೆ.

ಆರೋಪಿಗಳಿಂದ 2 ಕೆ.ಜಿ ಹೈಡ್ರೋ ಗಾಂಜಾ, 2 ಕಾರು, 8 ಮೊಬೈಲ್‌ಗಳು ಹಾಗೂ 36 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ.ಈ ಐದು ಮಂದಿಯನ್ನು ಸುದೀರ್ಘ ವಿಚಾರಣೆ ನಡೆಸಿ ಅವರು ನೀಡಿದ ಮಾಹಿತಿ ಮೇರೆಗೆ ಹೊರ ರಾಜ್ಯದ ಮತ್ತೊಬ್ಬನನ್ನು ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌‍ ನಿಲ್ದಾಣದ ಬಳಿ ವಶಕ್ಕೆ ಪಡೆದು 500 ಎಲ್‌ಎಸ್‌‍ಡಿ ಸ್ಟ್ರಿಪ್ಸ್ , 2 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ಒಟ್ಟಾರೆ 10 ಮಂದಿ ಆರೋಪಿಗಳಿಂದ 4 ಕೋಟಿ ಮೌಲ್ಯದ ಮಾದಕ ವಸ್ತುಗಳು, 2 ಕಾರು, 14 ಮೊಬೈಲ್‌ಗಳು ಹಾಗೂ 36 ಸಾವಿರ ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಅಂಬರೀಶ್‌ ಅವರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಕೈಗೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

 

Kishor KV