ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ 10 ಕೋಟಿ ಹಿಂದೂ ಕುಟುಂಬಕ್ಕೆ ಆಹ್ವಾನ!
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಜ.22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಈ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿಶ್ವಾದ್ಯಂತ 10 ಕೋಟಿ ಹಿಂದೂ ಕುಟುಂಬಗಳಿಗೆ ಆಹ್ವಾನ ನೀಡಲಾಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಹೇಳಿದೆ.
ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ವಿಹೆಚ್ ಪಿ ಕೇಂದ್ರ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಅಯೋಧ್ಯೆಯ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಶ್ವ ಹಿಂದೂ ಪರಿಷತ್ 10 ಕೋಟಿ ಕುಟುಂಬಗಳಿಗೆ ಆಹ್ವಾನ ನೀಡಲಾಗುವುದು. ಅಕ್ಷತೆಯನ್ನೊಳಗೊಂಡ ಕಳಶ ಈಗಾಗಲೇ ದೇಶಾದ್ಯಂತ ತಲುಪಿಸಲಾಗುತ್ತಿದೆ. ವಿಶ್ವಹಿಂದೂ ಪರಿಷತ್ ನ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಜ.1 ರಿಂದ ಜ.15 ವರೆಗೆ ದೇಶದ ಗ್ರಾಮ, ನಗರಗಳಿಗೆ ತೆರಳಿ ಹಿಂದೂ ಕುಟುಂಬಗಳಿಗೆ ಆಹ್ವಾನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ‘ರಾಮಲಲ್ಲಾ’ ಮೂರ್ತಿಯನ್ನು ಹೊತ್ತು ನಡೆಯಲಿದ್ದಾರೆ ಪ್ರಧಾನಿ ಮೋದಿ!
ಆಹ್ವಾನ ಪತ್ರಿಕೆಯೊಂದಿಗೆ ರಾಮನ ಚಿತ್ರವನ್ನು ನೀಡಲಾಗುತ್ತದೆ. ಈ ವೇಳೆ ಯಾವುದೇ ರೀತಿಯ ಕಾಣಿಕೆ ಸಂಗ್ರಹ ಮಾಡುವುದಿಲ್ಲ. ವಿಶೇಷವಾಗಿ ರಾಮಜನ್ಮಭೂಮಿ ಹೋರಾಟದಲ್ಲಿ ಮಡಿದವರ ಕುಟುಂಬಗಳಿಗೆ ವಿಶೇಷ ಆಹ್ವಾನ ನೀಡಲಾಗುತ್ತದೆ. ಅವರಿಗೆ ಜ.27ರಿಂದ ಫೆ.22ರವರೆಗೆ ಗುಂಪುಗಳಾಗಿ ಮಾಡಿ ಸ್ವಾಮಿ ದರ್ಶನ ಮಾಡಿಸಲಾಗುತ್ತದೆ. ವಿದೇಶಗಳಲ್ಲಿರುವ ಹಿಂದೂ ಕುಟುಂಬಗಳಿಗೆ ಆಹ್ವಾನ ನೀಡುವುದಕ್ಕಾಗಿ ಇದೇ ಮಾದರಿಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.