2,000 ಮುಖಬೆಲೆಯ ನೋಟು ಸ್ಥಗಿತ – ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ನೋಟು ವಿನಿಮಯ ಸಂಕಷ್ಟ!

2,000 ಮುಖಬೆಲೆಯ ನೋಟು ಸ್ಥಗಿತ – ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ನೋಟು ವಿನಿಮಯ ಸಂಕಷ್ಟ!

ನವದೆಹಲಿ: 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದರೆ ಈ ಕ್ರಮವು ಗಲ್ಫ್ ದೇಶಗಳಲ್ಲಿರುವ ಭಾರತೀಯರಿಗೆ ತಲೆನೋವು ತಂದಿದೆ.

ಮೇ 19ರಂದು ಭಾರತೀಯ ರಿಸರ್ವ್ ಬ್ಯಾಂಕ್  2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದೆ. ಈ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಿಗೆ ಜಮೆ ಅಥವಾ ವಿನಿಮಯ ಮಾಡಿಕೊಳ್ಳಬೇಕು. ಜೊತೆಗೆ, ಈ ನೋಟುಗಳನ್ನು ಗ್ರಾಹಕರಿಗೆ ನೀಡಬಾರದು ಎಂದು ಬ್ಯಾಂಕ್‌ಗಳಿಗೂ ಸೂಚಿಸಿದೆ. ಆದರೆ ಗಲ್ಫ್ ದೇಶಗಳಲ್ಲಿರುವ ಬ್ಯಾಂಕ್‌ ಗಳಿಗೆ ಭಾರತ ಸರ್ಕಾರ 2,000 ರೂಪಾಯಿ ನೋಟಗಳನ್ನು ಚಲಾವಣೆಯಿಂದ ಹಿಂಪಡೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ತೊಂದರೆ ಅನುಭವಿಸುವಂತಾಗಿದೆ ಎಂದು ಯುಎಇನಲ್ಲಿ ಇರುವ ಹಲವು ಭಾರತೀಯರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: 2,000 ನೋಟುಗಳು ಬ್ಯಾನ್​ ಆಗಿಲ್ಲ! – ಆರ್‌ಬಿಐ ಗವರ್ನರ್‌ ಹೀಗೆ ಹೇಳಿದ್ಯಾಕೆ?

ಆರ್‌ಬಿಐ ಆದೇಶದ ಬೆನ್ನಲ್ಲೇ ಗಲ್ಫ್ ರಾಷ್ಟ್ರಗಳಲ್ಲಿರುವವರು ನೋಟುಗಳನ್ನು ಬದಲಾಯಿಸಿಕೊಳ್ಳಲು ವಿನಿಮಯ ಕೇಂದ್ರಕ್ಕೆ ತೆರಳಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ ಹೇಳಿದ ಮಾತು ಅವರಿಗೆ ಅಚ್ಚರಿ ಮೂಡಿಸಿದೆ. ಭಾರತದ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡದಂತೆ ಆಡಳಿತ ಮಂಡಳಿಯು ಅವರಿಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ. ಹಾಗಾಗಿ, ವಿನಮಯ ಸಾಧ್ಯವಿಲ್ಲವೆಂದು ಸಿಬ್ಬಂದಿ ಹೇಳುತ್ತಿರುವುದಾಗಿ ಭಾರತೀಯರು ದೂರುತ್ತಿದ್ದಾರೆ.

ಈ ನಡುವೆ ‘ಸೌದಿ ಅರೇಬಿಯಾದ ನೋಟು ವಿನಿಮಯ ಕೇಂದ್ರದಲ್ಲಿ ಭಾರತದ ಎರಡು ಸಾವಿರ ಮುಖಬೆಲೆಯ ನೋಟು ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ’ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದಾಗಿ ಗಲ್ಫ್ ದೇಶಗಳಲ್ಲಿರುವ ಭಾರತೀಯರು ಆತಂಕಕ್ಕೊಳಗಾಗಿದ್ದಾರೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವಂತೆ ಕೇಂದ್ರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

suddiyaana