ಹಂತಕ ಆನೆ ಕರ್ನಾಟಕದ್ದು! – ಸತ್ತ ವ್ಯಕ್ತಿ ಕೇರಳ ರಾಜ್ಯದವನು – ಅಲ್ಲಿನ ವ್ಯಕ್ತಿಗೆ ಸಿದ್ದು ಸರ್ಕಾರದಿಂದ ಪರಿಹಾರ
ಎತ್ತಣ ಕೇರಳ, ಎಲ್ಲಿಯ ಕರ್ನಾಟಕ – ಪರಿಹಾರದ ವಿಚಾರದಲ್ಲಿ ಎಡವಿತಾ ಸಿದ್ದು ಸರ್ಕಾರ..!

ಹಂತಕ ಆನೆ ಕರ್ನಾಟಕದ್ದು! – ಸತ್ತ ವ್ಯಕ್ತಿ ಕೇರಳ ರಾಜ್ಯದವನು –  ಅಲ್ಲಿನ ವ್ಯಕ್ತಿಗೆ ಸಿದ್ದು ಸರ್ಕಾರದಿಂದ ಪರಿಹಾರಎತ್ತಣ ಕೇರಳ, ಎಲ್ಲಿಯ ಕರ್ನಾಟಕ – ಪರಿಹಾರದ ವಿಚಾರದಲ್ಲಿ ಎಡವಿತಾ ಸಿದ್ದು ಸರ್ಕಾರ..!

ಯಾವುದೇ ಒಬ್ಬ ವ್ಯಕ್ತಿ ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ ಆಯಾ ರಾಜ್ಯಗಳ ಸರ್ಕಾರಗಳು ಪರಿಹಾರ ನೀಡೋದು ಸಾಮಾನ್ಯ. ಆದ್ರೆ ಈಗ ಕೇರಳದಲ್ಲಿ ವ್ಯಕ್ತಿಯೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದಕ್ಕೆ ಕರ್ನಾಟಕ ಸರ್ಕಾರ ಪರಿಹಾರ ನೀಡಿದೆ. ಅದೂ ಕೂಡ ಒಂದಲ್ಲ, ಎರಡಲ್ಲ ಬರೋಬ್ಬರಿ 15 ಲಕ್ಷ ರೂಪಾಯಿ ಹಣವನ್ನ ಮೃತನ ಕುಟುಂಬಸ್ಥರಿಗೆ ನೀಡಿದೆ. ಅರೆ ಕೇರಳದಲ್ಲಿ ದಾಳಿ ಆಗಿ ಕೇರಳದ ವ್ಯಕ್ತಿ ಮೃತಪಟ್ಟರೆ ಕರ್ನಾಟಕ ಸರ್ಕಾರ ಯಾಕೆ ಪರಿಹಾರ ಕೊಡಬೇಕು..? ಇದೇ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಅದೂ ಕೂಡ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾತು ಕೇಳಿ ಅನ್ನೋದೇ ಸಂಚಲನ ಸೃಷ್ಟಿಸಿದೆ. ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇದನ್ನೂ ಓದಿ:ಕೇರಳದಲ್ಲಿ ಆನೆ ದಾಳಿಗೆ ಕರ್ನಾಟಕದಿಂದ ₹15 ಲಕ್ಷ ಪರಿಹಾರ! – ರಾಹುಲ್‌ ಗಾಂಧಿಯನ್ನು ಮೆಚ್ಚಿಸಲು ಕೈ ನಾಯಕರು ಹೀಗೆ ಮಾಡಿದ್ರಾ?

ಕರ್ನಾಟಕದಿಂದ ₹15 ಲಕ್ಷ ಪರಿಹಾರ! 

ಕೇರಳದ ವಯನಾಡ್‌ ನಲ್ಲಿ ಆನೆ ದಾಳಿಯಿಂದಾಗಿ ಅಜೀಶ್‌ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಸ್ವತಃ ಆ ಕ್ಷೇತ್ರದ ಸಂಸದರಾಗಿರುವ ರಾಹುಲ್‌ ಗಾಂಧಿ ಅವರು ಮೃತ ವ್ಯಕ್ತಿಯ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಪರಿಹಾರ ನೀಡುವ ಭರವಸೆ ಕೊಟ್ಟಿದ್ದರು. ಇದೀಗ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಸಲಹೆ ಮೇರೆಗೆ ರಾಜ್ಯ ಅರಣ್ಯ ಮಂತ್ರಿ ಈಶ್ವರಖಂಡ್ರೆ ಮೃತನ ಕುಟುಂಬಸ್ಥರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಈ ಕುರಿತು ರಾಹುಲ್‌ ಗಾಂಧಿ ಅವರಿಗೆ ಸಚಿವ ಈಶ್ವರ್‌ ಖಂಡ್ರೆ ಬರೆದಿರುವ ಪತ್ರ ವೈರಲ್‌ ಆಗಿದೆ. ನಿಮ್ಮ ಸಲಹೆಯಂತೆ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದಲ್ಲಿ ಆನೆ ದಾಳಿಯಿಂದ ಮೃತಪಟ್ಟರೆ 5 ಲಕ್ಷ ರೂಪಾಯಿ ಮಾತ್ರ ಪರಿಹಾರ ನೀಡಲಾಗುತ್ತದೆ. ಆದ್ರೆ ಈಗ ಬರ ಪರಿಹಾರಕ್ಕೆ ಹಣವಿಲ್ಲ. ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ಮೋಸ ಮಾಡಿದೆ ಎಂದೆಲ್ಲ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಿದ್ರೂ ಪಕ್ಕದ ರಾಜ್ಯದ ವ್ಯಕ್ತಿ ಆನೆ ದಾಳಿಯಿಂದ ಮೃತಪಟ್ಟಾಗ ಕೊಡಲು ಹಣವಿದೆಯೇ? ಎಂದು ರಾಜ್ಯದ ಜನ ಆಕ್ರೋಶ ಹೊರ ಹಾಕಿದ್ದಾರೆ. ಆದ್ರೆ ಪರಿಹಾರ ನೀಡಿದ್ದರ ಹಿಂದಿನ ಲೆಕ್ಕಾಚಾರವೇ ಬೇರೆ ಇದೆ. ಯಾಕಂದ್ರೆ ಈ ಆನೆ ಕರ್ನಾಟಕದ್ದು ಎನ್ನುವುದು ಕೇರಳ ಸರ್ಕಾರದ ಆರೋಪ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ದಂತರಹಿತ ಗಂಡು ಆನೆಯನ್ನು 2023 ರ ನವೆಂಬರ್ 30 ರಂದು ಸೆರೆಹಿಡಿಯಲಾಗಿತ್ತು. ನಂತರ ಆನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಈ ಆನೆಯು ಸುಮಾರು ಎರಡು ತಿಂಗಳ ನಂತರ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಫೆಬ್ರವರಿ 10 ರ ಬೆಳಿಗ್ಗೆ ವಯನಾಡು ಜಿಲ್ಲೆಯ ಬೇಗೂರಿನ ಚತಿಗಡದಲ್ಲಿ ಈ ಆನೆ ದಾಳಿಯಿಂದಾಗಿ ರೈತ ಅಜೀಶ್ ಅವರು ಪ್ರಾಣ ಕಳೆದುಕೊಂಡಿದ್ದರು. ಸೆರೆ ಹಿಡಿದ ಆನೆಗೆ ರೇಡಿಯೋ ಕಾಲರ್‌ ಹಾಕಿದ್ದರಿಂದ ಇದು ಕರ್ನಾಟಕದ ಆನೆ ಎಂದು ಪತ್ತೆ ಮಾಡಲಾಗಿತ್ತು. ಅಜೀಶ್ ರವರ ಸಾವಿಗೆ ಪರಿಹಾರವಾಗಿ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಕೇರಳದ ಜನಪ್ರತಿನಿಧಿಗಳು ಮತ್ತು ಕೇರಳ ಸರ್ಕಾರವು ಕರ್ನಾಟಕದ ಸರ್ಕಾರವನ್ನು ಕೋರಿತ್ತು. ಅಲ್ದೇ ಸ್ಥಳೀಯರು ರೊಚ್ಚಿಗೆದ್ದ ಪರಿಣಾಮ ರಾಹುಲ್ ಗಾಂಧಿ ಮೃತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು. ಬಳಿಕ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಭಾನುವಾರ ಚರ್ಚೆ ನಡೆದಿದ್ದು, ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ.

ಕೇರಳದಲ್ಲಿ ಆನೆ ದಾಳಿಗೆ ಬಲಿಯಾದ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ ನೀಡಿದ್ದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಕೇರಳದಲ್ಲಿ ಮೃತಪಟ್ಟರೆ 15 ಲಕ್ಷ ಕೊಡ್ತಾರೆ. ನಮ್ಮಲ್ಲಿ ಮೃತಪಟ್ಟರೆ 5 ಲಕ್ಷ ಕೊಡ್ತಾರೆ.  ಅದಕ್ಕೂ ಕಚೇರಿಗೆ ಅಲೆಯಬೇಕು ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ರಾಹುಲ್‌ ಗಾಂಧಿ ಮಾತು ಕೇಳಿ 15 ಲಕ್ಷ ಪರಿಹಾರ ನೀಡಿ ರಾಜ್ಯ ಸರ್ಕಾರ ನಮ್ಮ ರಾಜ್ಯಕ್ಕೆ ದ್ರೋಹ ಮಾಡಿದ ಎಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಆನೆ ದಾಳಿ ಪರಿಹಾರ ವಿಚಾರ ರಾಜ್ಯ ರಾಜಕೀಯದಲ್ಲಿ ಜಟಾಪಟಿಗೆ ಕಾರಣವಾಗಿದೆ.

Sulekha