ಸ್ಟಾರ್ ಪ್ಲೇಯರ್ಸ್ಗೆ BCCI ಟಾಸ್ಕ್ – ದುಲೀಪ್ ಟ್ರೋಫಿ ಭವಿಷ್ಯ ಬದಲಿಸುತ್ತಾ?
ಬಾಂಗ್ಲಾ ಸರಣಿಗೆ ಟೀಂ ಆಯ್ಕೆ ಹೀಗಾ?

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಯಾರೆಲ್ಲಾ ಕಣಕ್ಕಿಳಿಯುತ್ತಾರೆ ಅನ್ನೋ ಸುದ್ದಿ ಸಾಕಷ್ಟು ಚರ್ಚೆಯಾಗ್ತಿದೆ. ಯಾಕಂದ್ರೆ ಒಂದೊಂದು ಸ್ಲಾಟ್ಗೂ ಕೂಡ ಮೂರ್ನಾಲ್ಕು ಆಟಗಾರರ ನಡುವೆ ರೇಸ್ ಇದೆ. ಆದ್ರೆ ಅಂತಿಮವಾಗಿ ಯಾರನ್ನ ಸೆಲೆಕ್ಟ್ ಮಾಡ್ಬೇಕು ಅನ್ನೋದೇ ಬಿಸಿಸಿಐಗೆ ದೊಡ್ಡ ತಲೆನೋವಾಗಿದೆ. ಆದ್ರೆ ಈ ಪ್ರಾಬ್ಲಂಗೆ ಸಲ್ಯೂಷನ್ ಹುಡುಕೋಕೆ ಮ್ಯಾನೇಜ್ಮೆಂಟ್ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಅದುವೇ ದುಲೀಫ್ ಟ್ರೋಫಿ. ಯೆಸ್ ಮುಂದಿನ ತಿಂಗಳ ಮೊದಲ ವಾರದಲ್ಲಿ ನಡೆಯಲಿರುವ ದುಲೀಫ್ ಟ್ರೋಫಿ ಮೂಲಕವೇ ಟೀಂ ಇಂಡಿಯಾ ಸ್ಕ್ಬಾಡ್ ರೆಡಿ ಮಾಡೋಕೆ ತಯಾರಿ ನಡೆದಿದೆ.
ಇದನ್ನೂ ಓದಿ: ಸೀರಿಯಲ್‌ನಲ್ಲಿ ದೊಡ್ಡ ಟ್ವಿಸ್ಟ್!! – ಸ್ನೇಹ ಪಾತ್ರ ಬದಲಾಗುತ್ತಾ?
ಶ್ರೀಲಂಕಾ ಪ್ರವಾಸದ ಬಳಿಕ ರೆಸ್ಟ್ ಮೂಡ್ನಲ್ಲಿರೋ ಟೀಂ ಇಂಡಿಯಾ ಆಟಗಾರರು ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದ್ದಾರೆ. ಸೆಪ್ಟೆಂಬರ್ 19ರಿಂದ 23ರವರೆಗೆ ಮೊದಲ ಟೆಸ್ಟ್ ಪಂದ್ಯ ಹಾಗೇ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 1ರವರೆಗೆ ಎರಡನೇ ಟೆಸ್ಟ್ ಮ್ಯಾಚ್ ನಡೆಯಲಿದೆ. ಆ ನಂತ್ರ 3 ಟಿ20 ಪಂದ್ಯಗಳು ನಡೆಯಲಿವೆ. ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪರ ಯಾರನ್ನೆಲ್ಲಾ ಕಣಕ್ಕಿಳಿಸಬೇಕು ಅನ್ನೋದನ್ನ ದುಲೀಪ್ ಟ್ರೋಫಿ ಮೂಲಕವೇ ನಿರ್ಧಾರ ಮಾಡಲಾಗುತ್ತೆ. ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ನಡೆಯಲಿದ್ದು, ಅಲ್ಲಿ ಮಿಂಚಿದ ಆಟಗಾರರನ್ನೇ ಬಾಂಗ್ಲಾ ಸರಣಿಗೆ ಇಳಿಸೋ ಲೆಕ್ಕಾಚಾರ ಮಾಡಿದೆ. ಅಂದ್ರೆ ದೇಶೀಯ ಟೂರ್ನಿ ಒಂಥರಾ 15 ಆಟಗಾರರ ಫಿಲ್ಟರ್ ಪ್ರೊಸೀಜರ್ಸ್ ನಡೆಸೋ ಟೂರ್ನಿ ಎನ್ನುವಂತಾಗಿದೆ . ಅದು ಹೇಗೆ ಅನ್ನೋದನ್ನೇ ಹೇಳ್ತೇನೆ ನೋಡಿ.
ದುಲೀಪ್ ಟ್ರೋಫಿ ಟಾರ್ಗೆಟ್!
ಸೆಪ್ಟೆಂಬರ್ 5ರಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ನಾಲ್ಕು ತಂಡಗಳು ಕಣಕ್ಕಿಳಿಯಲಿವೆ. ಈ ಟೂರ್ನಿಯಲ್ಲಿ ಸ್ಟಾರ್ ಕ್ರಿಕೆಟರ್ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್.ಅಶ್ವಿನ್ ಹಾಗೂ ಜಸ್ಪ್ರೀತ್ ಬುಮ್ರಾಗೆ ವಿನಾಯಿತಿ ನೀಡಲಾಗಿದೆ. ಭಾರತ ತಂಡದ ಸ್ಟಾರ್ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್, ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಆಲ್‌ರೌಂಡರ್ ರವೀಂದ್ರ ಜಡೇಜ, ವೇಗಿಗಳಾದ ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಸೇರಿದಂತೆ ಹಲವು ಆಟಗಾರರು ವಿವಿಧ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೇ ಬಿಸಿಸಿಐ ಕೇಂದ್ರ ಒಪ್ಪಂದಗಳ ಪಟ್ಟಿಯಿಂದ ಹೊರಬಿದ್ದಿದ್ದ ಇಶಾನ್ ಕಿಶನ್ಗೂ ಅವಕಾಶ ನೀಡಲಾಗಿದೆ. ಹೀಗಾಗಿ ಬಹುತೇಕ ಟೀಂ ಇಂಡಿಯಾ ಆಟಗಾರರು ಕಣಕ್ಕಿಳಿಯುತ್ತಿರೋದ್ರಿಂದ ದುಲೀಫ್ ಟ್ರೋಫಿ ಟೂರ್ನಿ ಮೇಲೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಕಣ್ಣಿಟ್ಟಿದೆ. ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡೋದಂತೂ ಗ್ಯಾರಂಟಿ. ಉಳಿದಂತೆ ಈ ವರ್ಷ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 2 ಶತಕ ಮತ್ತು 2 ಅರ್ಧಶತಕ ಗಳಿಸಿದ್ದ ಗಿಲ್ ಕೂಡ ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಎನ್ನಲಾಗ್ತಿದೆ. ಅದೇ ರೀತಿ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 712 ರನ್ ಗಳಿಸುವ ಮೂಲಕ ತಮ್ಮ ಸ್ಥಾನವನ್ನು ಖಚಿತಪಡಿಸಿದ್ದಾರೆ. ಕೆ.ಎಲ್. ರಾಹುಲ್ ಮತ್ತು ರಿಷಬ್ ಪಂತ್ ವಿಕೆಟ್ ಕೀಪರ್ ಕೋಟಾದಲ್ಲಿ ತಂಡವನ್ನು ಸೇರಿಕೊಳ್ಳಬಹುದು. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೋಡಿಯೂ ಎಂಟ್ರಿ ಕೊಡಲಿದೆ. ಅವರಿಗೆ ಸಾಥ್ ನೀಡಲು ಕುಲದೀಪ್ ಯಾದವ್ ಮೂರನೇ ಸ್ಪಿನ್ನರ್ ಆಗಿ ಕಣಕ್ಕಿಳಿಯಲಿದ್ದಾರೆ. ಉಳಿದಂತೆ ಯಾರನ್ನ ತಂಡಕ್ಕೆ ಸೇರಿಸಿಕೊಳ್ಳಬೇಕು ಹಾಗೇ ಯಾರನ್ನ ಕೈ ಬಿಡಬೇಕು ಅನ್ನೋದನ್ನ ದುಲೀಪ್ ಟ್ರೋಫಿಯಲ್ಲಿ ನಿರ್ಧಾರ ಮಾಡಲಾಗುತ್ತೆ.
ಇನ್ನು ದುಲೀಪ್ ಟ್ರೋಫಿ ದೇಶೀಯ ಟೂರ್ನಿಯಲ್ಲಿ ಕರ್ನಾಟಕದ ಆರು ಆಟಗಾರರು ಸ್ಥಾನ ಪಡೆದಿದ್ದಾರೆ. ಕೆ.ಎಲ್.ರಾಹುಲ್, ಮಯಂಕ್ ಅಗರವಾಲ್, ಪ್ರಸಿದ್ಧ ಕೃಷ್ಣ ಮತ್ತು ವಿದ್ವತ್ ಕಾವೇರಪ್ಪ ಅವರು ಶುಭಮನ್ ಗಿಲ್ ನಾಯಕತ್ವದ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದೇವದತ್ತ ಪಡಿಕ್ಕಲ್ ಅವರು ಶ್ರೇಯಸ್ ಅಯ್ಯರ್ ನಾಯಕತ್ವದ ‘ಡಿ’ ತಂಡದಲ್ಲಿ ಮತ್ತು ವೈಶಾಖ ವಿಜಯಕುಮಾರ್ ಅವರು ಋತುರಾಜ್ ಗಾಯಕವಾಡ್ ನಾಯಕತ್ವದ ‘ಸಿ’ ತಂಡದಲ್ಲಿ ಅವಕಾಶ ಗಳಿಸಿದ್ದಾರೆ. ಆದ್ರೆ ದುಲೀಪ್ ಟ್ರೋಫಿಯಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನ ಕೈ ಬಿಟ್ಟಿರೋದು ಮಾಜಿ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣ ಆಗಿದೆ. ಟಿ-20 ವಿಶ್ವಕಪ್ನಲ್ಲಿ ಫೇಲ್ಯೂರ್ ಆಗಿದ್ದ ವಿರಾಟ್ ಕೊಹ್ಲಿ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ. ಹೀಗಾಗಿ ಬಾಂಗ್ಲಾ ವಿರುದ್ಧದ ಸರಣಿಗೆ ನೇರವಾಗಿ ಕಣಕ್ಕಿಳಿದ್ರೆ ಅಭ್ಯಾಸವಿಲ್ಲದೆ ಕಳಪೆ ಫಾರ್ಮ್ ಮುಂದುವರಿಯುತ್ತೆ. ಹೀಗಾಗಿ ಬ್ಯಾಟರ್ಸ್ ಆಗಿರೋದ್ರಿಂದ ರೋಹಿತ್ ಮತ್ತು ಕೊಹ್ಲಿಯನ್ನ ದುಲೀಪ್ ಟ್ರೋಫಿ ಆಡಿಸಬೇಕಿತ್ತು ಅಂತಾ ಬೇಸರ ಹೊರ ಹಾಕಿದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಬಿಸಿಸಿಐ ಮ್ಯಾನೇಜ್ಮೆಂಟ್ ರೋಹಿತ್ ಮತ್ತು ಕೊಹ್ಲಿ ಹೊರತುಪಡಿಸಿ ಉಳಿದ ಸ್ಲಾಟ್ಗಳನ್ನ ದುಲೀಪ್ ಟ್ರೋಫಿ ಮೂಲಕವೇ ಆಯ್ಕೆ ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿದೆ.