ಸೋತ ಪಾಕಿಸ್ತಾನ ಪರವಾಗಿ Sorry ಕೇಳಿದ ಅಬ್ದುಲ್ಲಾ ಶಫೀಕ್ – ಪಾಕ್ ತಂಡದ ಫಿಟ್‌ನೆಸ್ ಬಗ್ಗೆ ಮಾಜಿ ನಾಯಕ ವಾಸಿಂ ಅಕ್ರಮ್ ಟೀಕೆ
ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳಲ್ಲಿ ಪಾಕಿಸ್ತಾನವೂ ಒಂದು ಎನ್ನಲಾಗುತ್ತಿತ್ತು. ಅದಕ್ಕೆ ಸರಿಯಾಗಿ ಭಾರಿ ನಿರೀಕ್ಷೆಯೊಂದಿಗೆ ಮೆಗಾ ಟೂರ್ನಿಗೆ ಪಾಕಿಸ್ತಾನ ಎಂಟ್ರಿ ಕೊಟ್ಟಿತ್ತು. ಆದರೆ, ಪಾಕಿಸ್ತಾನ ತಂಡದ ಸ್ಥಿತಿ ಮಾತ್ರ ದಿನೇ ದಿನೇ ಹದಗೆಡುತ್ತಿದೆ. ಪಾಕ್ ತಂಡ ಸತತ ಸೋಲು ಎದುರಿಸುತ್ತಿದೆ. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟ ಪಾಕಿಸ್ತಾನಕ್ಕೆ ಮಾಜಿ ನಾಯಕ ವಾಸಿಂ ಅಕ್ರಮ್ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿದ್ದ ಪಾಕಿಸ್ತಾನ, ಗೆದ್ದ ಅಫ್ಘಾನಿಸ್ತಾನ – ಪಾಕ್ ಟೀಮ್ ಕ್ಯಾಪ್ಟನ್ ಬಾಬರ್ ಆಜಂ ನಾಯಕ ಸ್ಥಾನಕ್ಕೂ ಬರುತ್ತಾ ಕುತ್ತು?
1992ರಲ್ಲಿ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಪಾಕ್ ತಂಡ, 2023ರ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದೆ. ಆರಂಭಿಕ ಪಂದ್ಯಗಳಲ್ಲಿ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಪಾಕ್ ಬಳಿಕ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದೆ. ಅದರಲ್ಲೂ ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಏಕದಿನ ವಿಶ್ವಕಪ್ ಟೂರ್ನಿಯ 22ನೇ ಪಂದ್ಯದಲ್ಲಿ ಅದ್ಭುತ ಆಟವಾಡಿದ ಅಫ್ಘಾನಿಸ್ತಾನ ತಂಡ 8 ವಿಕೆಟ್‌ಗಳಿಂದ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನ ಬಗ್ಗು ಬಡಿಯಿತು. ಇದರಿಂದ ಪಾಕಿಸ್ತಾನ ತಂಡ ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ಎದುರು ಮುಗ್ಗರಿಸಿ ಹ್ಯಾಟ್ರಿಕ್ ಸೋಲಿನ ಆಘಾತಕ್ಕೊಳಗಾಗಿದೆ. ಈ ನಡುವೆ, ಪಾಕ್ ತಂಡದ ಆರಂಭಿಕ ಆಟಗಾರ, ಅಬ್ದುಲ್ಲಾ ಶಫೀಕ್ ಭಾವುಕವಾಗಿ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನ ಜನತೆಗೆ ಕ್ಷಮೆ ಕೋರಿದ್ದಾರೆ. ನಾಯಕ ಬಾಬರ್ ಆಜಂ ಜೊತೆಗೆ ಅಫ್ಘಾನಿಸ್ತಾನದ ವಿರುದ್ಧ ಸೋತು ಮೈದಾನದಿಂದ ಹೊರನಡೆಯುತ್ತಿದ್ದ ಚಿತ್ರವನ್ನು ಹಂಚಿಕೊಂಡಿದ್ದು, ನಮ್ಮನ್ನು ಕ್ಷಮಿಸಿಬಿಡಿ ಪಾಕಿಸ್ತಾನ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಒಡೆದ ಹೃದಯದ ಇಮೋಜಿಯನ್ನೂ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
We are sorry, Pakistan💔
#PAKvsAFG pic.twitter.com/PFFmbHik2O— Abdullah Shafique (@iamAbdS28) October 23, 2023
ಮತ್ತೊಂದೆಡೆ ಪಾಕಿಸ್ತಾನದ ಖ್ಯಾತ ಆಟಗಾರ ಹಾಗೂ ಮಾಜಿ ನಾಯಕ ವಾಸಿಂ ಅಕ್ರಮ್, ಪಾಕಿಸ್ತಾನಿ ಕ್ರಿಕೆಟಿಗರ ಫಿಟ್ನೆಸ್ ಬಗ್ಗೆ ಟೀಕೆ ಮಾಡಿದ್ದಾರೆ. ಸೋಮವಾರ ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುವ ಅಫ್ಘಾನಿಸ್ತಾನ ತಂಡ ಪಾಕ್ ತಂಡವನ್ನು ಸೋಲಿಸಿತ್ತು. ಈ ಸೋಲನ್ನು ಅರಗಿಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಈ ನಡುವೆ ವಾಸಿಂ ಮಾಡಿರುವ ಕಾಮೆಂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ ಅವರು ತಂಡದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಟಗಾರರ ಫಿಟ್ನೆಸ್ ಲೇವೆಲ್ ಅನ್ನು ಟೀಕಿಸಿದ್ದಾರೆ. ‘ಇದು ಮುಜುಗರದ ಸಂಗತಿ. ಕೇವಲ 2 ವಿಕೆಟ್‌ಗೆ 280 ಅಥವಾ 290 ರನ್‌ಗಳನ್ನು ಬೆನ್ನಟ್ಟುವುದು ಸುಲಭದ ಮಾತಲ್ಲ. ಚೆನ್ನೈನ ಪಿಚ್ ಅನ್ನು ಪಕ್ಕಕ್ಕಿಡಿ. ಆದರೆ ಪಾಕಿಸ್ತಾನಿ ಆಟಗಾರರ ಫೀಲ್ಡಿಂಗ್ ನೋಡಿ. ಅವರ ಫಿಟ್ನೆಸ್ ಮಟ್ಟ ಹೇಗಿದೆ ಎಂಬುದು ಅರ್ಥವಾಗುತ್ತದೆ. ಫಿಟ್ ಆಗದ ಕ್ರಿಕೆಟಿಗರ ಹೆಸರು ಹೇಳಿದರೆ ಅವರು ಅದನ್ನು ಇಷ್ಟಪಡುವುದಿಲ್ಲ. ಆದರೆ ಅವರ ಫಿಟ್ನೆಸ್ ಮಟ್ಟವನ್ನು ನೋಡಿದರೆ ಅವರು ಪ್ರತಿದಿನ 8 ಕೆಜಿ ಮಟನ್ ತಿನ್ನುತ್ತಿದ್ದಾರೆ ಎಂದು ತೋರುತ್ತಿದೆ’ ಎಂದಿದ್ದಾರೆ. ‘ಮಿಸ್ಬಾ-ಉಲ್-ಹಕ್ ಮುಖ್ಯ ಕೋಚ್ ಆಗಿದ್ದಾಗ ಪಾಕಿಸ್ತಾನದ ಆಟಗಾರರು ಫಿಟ್ನೆಸ್ ಪರೀಕ್ಷೆಗಳನ್ನು ಇಷ್ಟಪಡಲಿಲ್ಲ. ಆದರೆ ಆ ಪರೀಕ್ಷೆಗಳು ತಂಡಕ್ಕೆ ಮೂಲಭೂತ ಅಂಶಗಳನ್ನು ಸರಿಯಾಗಿ ಮಾಡಲು ಸಹಾಯ ಮಾಡಿದೆ. ಪರೀಕ್ಷೆಗಳು ಇರಬೇಕು, ವೃತ್ತಿಪರವಾಗಿ, ನೀವು ನಿಮ್ಮ ದೇಶಕ್ಕಾಗಿ ಆಡುತ್ತಿದ್ದೀರಿ, ನಿಮಗೆ ಸಂಬಳ ನೀಡಲಾಗುತ್ತಿದೆ. ನಾನು ಮಿಸ್ಬಾ ಅವರೊಂದಿಗೆ ಇದ್ದೇನೆ, ಅವರು ಕೋಚ್ ಆಗಿದ್ದಾಗ, ಅವರು ಆ ಮಾನದಂಡವನ್ನು ಹೊಂದಿದ್ದರು. ಆದರೆ ಆಟಗಾರರು ಮಿಸ್ಬಾ ಅವರನ್ನು ದ್ವೇಷಿಸುತ್ತಿದ್ದರು. ಆದರೆ, ಅದು ತಂಡಕ್ಕೆ ಕೆಲಸ ಮಾಡಿದೆ. ಆದರೀಗ ಫಿಟ್ನೆಸ್ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ತಂಡದ ಪ್ರದರ್ಶನ ಹೀಗಿದೆ’ ಎಂದು ದೂರಿದ್ದಾರೆ.