ಸಿ.ಎಂ ಇಬ್ರಾಹಿಂ ಉಚ್ಛಾಟನೆ ಹಿಂದಿದೆ ‘ರೆಬೆಲ್’ ರಾಜಕೀಯ – ಪುತ್ರನಿಗೆ ದೊಡ್ಡಗೌಡ್ರು ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದರ ಗುಟ್ಟೇನು?
ಬಿಜೆಪಿ ಜೊತೆಗಿನ ಮೈತ್ರಿ ಬಳಿಕ ದಳಪತಿಗಳ ಮನೆಯಲ್ಲಿ ಬಿರುಗಾಳಿ ಎದ್ದಿದೆ. ನಾಯಕರ ಅಸಮಾಧಾನದ ನಡುವೆಯೇ ಜೆಡಿಎಸ್ ವರಿಷ್ಠರು ಇವತ್ತು ಮಹತ್ವದ ಘೋಷಣೆ ಮಾಡಿದ್ದಾರೆ. ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂಗೆ ಉಚ್ಛಾಟನೆ ಮಾಡುವ ಮೂಲಕ ಬಿಗ್ ಶಾಕ್ ಕೊಟ್ಟಿದ್ದಾರೆ. ಜೆಡಿಎಸ್ ರಾಜ್ಯ ಘಟಕಗಳನ್ನ ವಿಸರ್ಜನೆ ಮಾಡುವ ಮೂಲಕ ಇಬ್ರಾಹಿಂರನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಹಾಗೇ ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಹೆಚ್.ಡಿ. ಕುಮಾರಸ್ವಾಮಿಯವರನ್ನೇ ನೇಮಕ ಮಾಡಲಾಗಿದೆ. ಈ ಮೂಲಕ ದೊಡ್ಡಗೌಡ್ರು ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ.
ಇದನ್ನೂ ಓದಿ : ಜೆಡಿಎಸ್ ಅಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ತೆರವು – ನೂತನ ರಾಜ್ಯಾಧ್ಷಕ್ಯರಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಯ್ಕೆ
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಜೆಡಿಎಸ್ ವರಿಷ್ಠರು ಕೋರ್ ಕಮಿಟಿ ಸಭೆ ನಡೆಸಿದ್ರು. ಸಭೆಯಲ್ಲಿ 18 ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗಿಯಾಗಿದ್ರು. ಸಭೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಯಾಕೆ ಮತ್ತು ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡುವ ಕೆಲಸ ಮಾಡಿದ್ರು. ಬಳಿಕ ಪಕ್ಷದ ಎಲ್ಲರ ಅಭಿಪ್ರಾಯದಂತೆ ಜೆಡಿಎಸ್ ರಾಜ್ಯ ಘಟಕವನ್ನು ವಿಸರ್ಜನೆ ಮಾಡಲಾಯ್ತು.
ಸಿಎಂ ಇಬ್ರಾಹಿಂ ಜೆಡಿಎಸ್ ಸೇರೋ ಮೊದಲು ಕಾಂಗ್ರೆಸ್ನಲ್ಲಿದ್ರು. ಕಾಂಗ್ರೆಸ್ ಪಕ್ಷದಲ್ಲಿ ಇರುವಾಗಲೇ ಕಾಂಗ್ರೆಸ್ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿದ್ದರು. ಕಾಂಗ್ರೆಸ್ ನಲ್ಲಿ ಇದ್ದುಕೊಂಡೇ ಜೆಡಿಎಸ್ ಪರ ಹೇಳಿಕೆಗಳನ್ನ ನೀಡ್ತಿದ್ರು. ನಂತರದ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ತೊರೆದ ಇಬ್ರಾಹಿಂ ನಿರೀಕ್ಷೆಯಂತೆಯೇ ದಳಪತಿಗಳ ಕೋಟೆಗೆ ಸೇರಿಕೊಂಡ್ರು. ಜೆಡಿಎಸ್ ಸೇರಿದ ಕೆಲವೇ ದಿನಗಳಲ್ಲಿ ಇಬ್ರಾಹಿಂಗೆ ರಾಜ್ಯಾಧ್ಯಕ್ಷ ಪಟ್ಟವನ್ನೂ ಕಟ್ಟಲಾಯ್ತು. ಅಸಲಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದರ ಹಿಂದೆ ಜೆಡಿಎಸ್ ಗೇಮ್ ಪ್ಲ್ಯಾನ್ ಕೂಡ ಇತ್ತು. ಪಕ್ಷ ಬಿಟ್ಟು ಪಕ್ಷಕ್ಕೆ ಬಂದ ನಾಯಕನಿಗೆ ಅಷ್ಟು ದೊಡ್ಡ ಹುದ್ದೆ ನೀಡುವುದೆಂದರೆ ದೊಡ್ಡ ಲೆಕ್ಕಾಚಾರವೂ ಇತ್ತು.
ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಹಿಂದೆ ಹಲವು ರಾಜಕೀಯ ಲೆಕ್ಕಾಚಾರವಿತ್ತು. ರಾಜಕೀಯದಲ್ಲಿ ಉತ್ತಮ ವಾಗ್ಮಿ ಎಂದೇ ಗುರುತಿಸಿಕೊಂಡಿರುವ ಸಿ.ಎಂ ಇಬ್ರಾಹಿಂ, ಎಂಎಲ್ಸಿ, ಕೇಂದ್ರ ಸಚಿವರಾಗಿಯೂ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಜೆಡಿಎಸ್ ಪರ ಮಾತಾಡಲು ಹೆಚ್ಡಿಡಿ ಮತ್ತು ಹೆಚ್ ಡಿಕೆ ಬಿಟ್ರೆ ಸಮರ್ಥ ನಾಯಕರಿಲ್ಲ. ಇಬ್ರಾಹಿಂ ಸೇರ್ಪಡೆಯಿಂದ ಎದುರಾಳಿ ನಾಯಕರಿಗೆ ಖಡಕ್ ಆಗಿ ತಿರುಗೇಟು ನೀಡಬಹುದೆಂಬ ಪ್ಲ್ಯಾನ್ ಇತ್ತು. 2023ರ ವಿಧಾನಸಭಾ ಚುನಾವಣೆಗೆ ಮುಸ್ಲಿಂ ಮತದಾರರನ್ನ ಸೆಳೆಯುವ ತಂತ್ರ ಜೆಡಿಎಸ್ನದ್ದಾಗಿತ್ತು. ಮುಸ್ಲಿಂ ನಾಯಕನಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿದ್ರೆ ಮುಸ್ಲಿಂ ಮತ ಓಲೈಕೆ ಪ್ಲ್ಯಾನ್ ಮಾಡಲಾಗಿತ್ತು. ನಮ್ಮದು ಜಾತ್ಯಾತೀತ ಪಕ್ಷ, ಎಲ್ಲರಿಗೂ ಅವಕಾಶ ಕೊಡುತ್ತೇವೆಂದು ಬಿಂಬಿಸೋದು.
ಚುನಾವಣೆ ಪ್ರಚಾರದ ವೇಳೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಮುಸ್ಲಿಮರೇ ಸಿಎಂ ಆಗ್ತಾರೆ ಅಂತಾನೂ ಹೆಚ್ ಡಿಕೆ ಹೇಳಿದ್ರು. ಜೆಡಿಎಸ್ ಗೆದ್ರೆ ಮುಸ್ಲಿಮರನ್ನೇ ರಾಜ್ಯದ ಸಿಎಂ ಮಾಡೋದಾಗಿ ಭರವಸೆ ನೀಡಿದ್ರು. ಚುನಾವಣೆಗೂ ಮುನ್ನ ಕುಮಾರಸ್ವಾಮಿ ಮುಸ್ಲಿಮರನ್ನ ಸಿಎಂ ಮಾಡ್ತೇನೆ ಅಂತಾ ಹೇಳಿದ್ದೇನೋ ನಿಜ. ಆದರೆ ಗೆದ್ದ ಮೇಲೆ ನಿಜಕ್ಕೂ ಹಾಗೆಯೇ ನಡೆದುಕೊಳ್ತಿದ್ರಾ ಅನ್ನೋದು ಅದು ಬೇರೆ ಪ್ರಶ್ನೆ ಬಿಡಿ. ಅಸಲಿಗೆ ಇಲ್ಲಿ ಜೆಡಿಎಸ್ ಪಕ್ಷ ಸಿಎಂ ಇಬ್ರಾಹಿಂ ಅವ್ರನ್ನ ಪಕ್ಷದ ರಾಜ್ಯಾಧ್ಯಕ್ಷನಾಗಿ ಮಾಡಿದ್ರೂ ಕೂಡ ಅವ್ರನ್ನ ಲೆಕ್ಕಕ್ಕೇ ಇಟ್ಟಿರಲಿಲ್ಲ. ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಷ್ಟು ಸ್ಥಾನಗಳನ್ನ ಗೆಲ್ಲದ ಜೆಡಿಎಸ್ ಬಳಿಕ ರಾಜ್ಯಾಧ್ಯಕ್ಷರನ್ನ ನೆಪಮಾತ್ರಕ್ಕೆ ಎನ್ನುವಂತೆ ಸೀಮಿತ ಮಾಡಿತ್ತು.
ಕಾಂಗ್ರೆಸ್ ಪಕ್ಷ ತೊರೆದು ಸಿ.ಎಂ ಇಬ್ರಾಹಿಂ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ರು. 2022ರ ಏಪ್ರಿಲ್ ನಲ್ಲಿ ಇಬ್ರಾಹಿಂರನ್ನ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. 2023ರ ವಿಧಾನಸಭಾ ಚುನಾವಣೆಗೆ ಮುಸ್ಲಿಂ ಮತಗಳನ್ನ ಸೆಳೆಯೋದು ಇದ್ರ ತಂತ್ರವಾಗಿತ್ತು. ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ರೂ ಪಕ್ಷದ ಮಹತ್ವದ ನಿರ್ಧಾರಗಳಲ್ಲಿ ಇಬ್ರಾಹಿಂರನ್ನ ಕಡೆಗಣನೆ ಮಾಡಲಾಗಿತ್ತು. ನಾಮಕಾವಸ್ಥೆಗೆ ಮಾತ್ರ ಸಿಎಂ ಇಬ್ರಾಹಿಂ ಅವ್ರನ್ನ ರಾಜ್ಯಾಧ್ಯಕ್ಷನಾಗಿ ಮಾಡಿದ್ರು. ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವೇಳೆ ದೂರ ಇಟ್ಟ ಆರೋಪ ಕೂಡ ಕೇಳಿ ಬಂದಿತ್ತು. ಬಿಜೆಪಿ ಜೊತೆಗಿನ ಮೈತ್ರಿ ವಿಚಾರವನ್ನು ರಾಜ್ಯಾಧ್ಯಕ್ಷರಿಗೇ ತಿಳಿಸದೆ ನಿರ್ಲಕ್ಷ್ಯ ವಹಿಸಿದ್ರು. ಮೈತ್ರಿ ವಿಚಾರವನ್ನ ಮಾತಾಡಲು ಇಬ್ರಾಹಿಂ ಅವರನ್ನೂ ಕರೆದುಕೊಂಡು ಹೋಗಿರಲಿಲ್ಲ. ಹೆಚ್ ಡಿಕೆ ಮತ್ತು ನಿಖಿಲ್ ಕುಮಾರಸ್ವಾಮಿ ತೆರಳಿ ಅಮಿತ್ ಶಾರನ್ನ ಭೇಟಿಯಾಗಿದ್ರು. ಇಬ್ರಾಹಿಂ ಅವರಿಗೆ ಹೇಳಿಯೇ ಮೈತ್ರಿ ಮಾಡಿಕೊಂಡೆವು ಅಂತಾ ಕುಮಾರಸ್ವಾಮಿ ಹೇಳಿದ್ರು. ಆದ್ರೆ ಮೈತ್ರಿ ವಿಚಾರ ನನಗೇ ಗೊತ್ತೇ ಇರಲಿಲ್ಲ ಅಂತಾ ಸಿಎಂ ಇಬ್ರಾಹಿಂ ಹೇಳ್ತಿದ್ದಾರೆ.
ಹೀಗೆ ಸಿಎಂ ಇಬ್ರಾಹಿಂರನ್ನ ರಾಜ್ಯಾಧ್ಯಕ್ಷ ಪಟ್ಟದಲ್ಲಿ ಕೂರಿಸಿದ್ರು ಅನ್ನೋದನ್ನ ಬಿಟ್ರೆ ಅವರಿಗೆ ಯಾವುದೇ ನಿರ್ಣಯಗಳನ್ನ ತೆಗೆದುಕೊಳ್ಳುವ ಜವಾಬ್ದಾರಿ ನೀಡಿರಲಿಲ್ಲ. ಕಾರ್ಯಕ್ರಮಗಳು ನಡೆದಾಗ ವೇದಿಕೆ ಮೇಲೆ ಅವರಿಗೊಂದು ಆಸನ ಮೀಸಲಿರುತ್ತಿತ್ತು ಅಷ್ಟೇ. ಇದು ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಮತದಾರರನ್ನ ಸೆಳೆಯೋ ಟ್ರಿಕ್ಸ್ ಅಂತಾ ಆಗಲೇ ಚರ್ಚೆಗಳೂ ಕೂಡ ನಡೆದಿದ್ದವು.