ಸಸ್ಯಕಾಶಿಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ – ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಲಾಲ್‌ಬಾಗ್‌ ಫ್ಲಾವರ್​ ಶೋ ಥೀಮ್

ಸಸ್ಯಕಾಶಿಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ –  ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಲಾಲ್‌ಬಾಗ್‌ ಫ್ಲಾವರ್​ ಶೋ ಥೀಮ್

ಪ್ರತಿ ವರ್ಷದಂತೆ ಈ ವರ್ಷವೈ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. 218ನೇ ಫಲಪುಷ್ಪ ಪ್ರದರ್ಶನಕ್ಕೆ ಇಂದು ಸಿಎಂ ಸಿದ್ಧರಾಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ವರುಣನ ಆರ್ಭಟ – ಕರಾವಳಿ ಸೇರಿ 23 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆ!

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಇಂದಿನಿಂದ ಆಗಸ್ಟ್ 18ರವರೆಗೆ ಫ್ಲವರ್ ಶೋ ನಡೆಯಲಿದೆ. ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಪುಷ್ಪಮೇಳ ನಡೆಯುತ್ತಿದೆ. ಸ್ವಾತಂತ್ರ್ಯ ವೀರರ ಜೀವನ ಚರಿತ್ರೆ ಫಲಪುಷ್ಪಗಳಲ್ಲಿ ಅನಾವರಣಗೊಂಡಿದೆ. 18 ಅಡಿ ಎತ್ತರ, 32 ಅಡಿ ಅಗಲದ ಕಿತ್ತೂರು ಕೋಟೆಯ ಮಾದರಿಯಲ್ಲಿ ನಿರ್ಮಾಣವಾಗಿದೆ. ಅದರ ಒಳಭಾಗದಲ್ಲಿ ಫಲಪುಷ್ಪಗಳ ಮೂಲಕ ಹೋರಾಟದ ಸ್ಮರಣೆ ಮಾಡಲಾಗಿದೆ.  ರಾಣಿ ಅಬ್ಬಕ್ಕದೇವಿ, ರಾಣಿ ಚೆನ್ನಭೈರಾದೇವಿ, ರಾಣಿ ಬೆಳವಾಡಿ ಮಲ್ಲಮ್ಮ, ರಾಣಿ ಕೆಳದಿ ಚೆನ್ನಮ್ಮ, ಒನಕೆ ಓಬವ್ವ ಅವರ ಹೂವಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಆ.7ರಿಂದ ಹನ್ನೊಂದು ದಿನಗಳವರೆಗೆ ಫ್ಲವರ್ ಶೋ ನಡೆಯಲಿದ್ದು, ಇಂದು ಫ್ಲವರ್‌ ಶೋಗೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದು 218ನೇ ವರ್ಷದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವಾಗಿದೆ. ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಿಗೆ ಗೌರವ ಸಲ್ಲಿಸುವ ಕೆಲಸ ಆಗಿದೆ. ಕಿತ್ತೂರು ರಾಣಿ ಚೆನ್ನಮ್ಮಗೆ ಬ್ರಿಟಿಷರ ವಿರುದ್ಧ ಮೊದಲನೇ ಯುದ್ಧಗಳಲ್ಲಿ ಜಯ ಸಿಕ್ತು. ಎರಡನೇ ಯುದ್ಧದಲ್ಲಿ ಚೆನ್ನಮ್ಮನ ಸೆರೆಯಾಯಿತು. ಚೆನ್ನಮ್ಮನ ಬಲಗೈ ಬಂಟನಾಗಿದ್ದ ರಾಯಣ್ಣನಿಗೆ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆ ಆಯಿತು. ರಾಯಣ್ಣ ಹುಟ್ಟಿದ್ದು ಸ್ವಾತಂತ್ರ್ಯ ಸಿಕ್ಕ ದಿನವಾದರೆ, ಗಲ್ಲು ಶಿಕ್ಷೆ ಆಗಿದ್ದು ಗಣರಾಜ್ಯದ ದಿನ. ಇದು ಕಾಕತಾಳೀಯ ಅಂತಾನೇ ಎನ್ನಬಹುದು ಎಂದು ಹೇಳಿದ್ದಾರೆ.

ಬ್ರಿಟಿಷರ ವಿರುದ್ಧ ರಾಯಣ್ಣ ವೀರಾವೇಶದಿಂದ ಹೋರಾಡಿದ್ದರು. ಬ್ರಿಟಿಷರನ್ನು ಸೋಲಿಸಿ 200 ವರ್ಷ ಆಯಿತು. ರಾಯಣ್ಣ ಹಿಂದುಳಿದ ಜಾತಿಗೆ ಸೇರಿದವರು, ಎಲ್ಲಾ ಸೈನ್ಯದಲ್ಲಿ ಎಲ್ಲ ಜಾತಿಯವರಿದ್ದರು. ಜಾತ್ಯಾತೀತರಾಗಿ ಎಲ್ಲರನ್ನೂ ಬಳಸಿಕೊಂಡು ಕಿತ್ತೂರು ಪ್ರಾಂತ್ಯ ಆಳಿದ್ದರು. ಚೆನ್ನಮ್ಮ ವೀರ ಮಹಿಳೆ ಹಾಗೂ ವೀರ ವನಿತೆಯೂ ಹೌದು. ಸರ್ಕಾರದಿಂದ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಆಚರಣೆ ಮಾಡಲಾಗುತ್ತದೆ. ಸಂಗೊಳ್ಳಿ ರಾಜಣ್ಣ ಅವರ ಪ್ರಾಧಿಕಾರ ಮಾಡಿದ್ದೇವೆ. ಇಂದು ಈ ವೀರರನ್ನ ಸ್ಮರಿಸಬೇಕು. ತೋಟಗಾರಿಕೆ ಇಲಾಖೆಯಿಂದ ಇಂದು ಸ್ವಾತಂತ್ರ್ಯ ವೀರರಿಗೆ ಗೌರವ ಸಲ್ಲಿಸಲಾಗಿದೆ. ದೇಶಕ್ಕಾಗಿ ಹೋರಾಡಿದವರನ್ನ ನಾವೆಲ್ಲರೂ ಸ್ಮರಿಸಬೇಕು ಎಂದು ಹೇಳಿದ್ದಾರೆ.

Shwetha M