‘ಯಾರೂ ಜತೆಗಿರಲಿಲ್ಲ.. ನಾನೆಂದೂ ಹಿಂದುರುಗಿ ನೋಡಿಲ್ಲ’ – ವಿದಾಯದ ಭಾಷಣದಲ್ಲಿ ರಾಜಕೀಯ ಹಾದಿ ಬಿಚ್ಚಿಟ್ಟ ಬಿಎಸ್ವೈ!
ರಾಜಕೀಯ ಮುತ್ಸದ್ಧಿ, ಬಿಜೆಪಿ ಪ್ರಭಾವಿ ನಾಯಕ, ರಾಜ್ಯದುದ್ದಗಲಕ್ಕೂ ಅಬ್ಬರಿಸಿ ಬಿಜೆಪಿ ಪಕ್ಷವನ್ನ ಬಲಗೊಳಿಸಿದ ಛಲದಂಕಮಲ್ಲ. ಕರುನಾಡಲ್ಲಿ ‘ಕಮಲ’ ಅರಳಿಸಿ ನಾಲ್ಕು ಬಾರಿ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಬಿ.ಎಸ್ ಯಡಿಯೂರಪ್ಪನವರದ್ದು. ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿ ಶಿವಮೊಗ್ಗದ ಶಿಕಾರಿಪುರದಲ್ಲಿ ನೆಲೆ ಕಂಡುಕೊಂಡ ಬಿಎಸ್ವೈ ಹಾದಿಯೇ ರಣರೋಚಕ. ಕರುನಾಡಲ್ಲಿ ‘ರಾಜಾಹುಲಿ’ ಎಂದೇ ಪ್ರಖ್ಯಾತಿ ಗಳಿಸಿರುವ ಬಿಎಸ್ವೈರ ಸದನ ಸಮರ ಇಂದಿಗೆ ಮುಕ್ತಾಯವಾಗಿದೆ. ಇನ್ಮುಂದೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲ್ಲ ಅಂತಾ ಘೋಷಣೆ ಮಾಡಿದ್ದು, ಇವತ್ತು ಸದನದಲ್ಲಿ ವಿದಾಯದ ಭಾಷಣ ಮಾಡಿದ್ರು. ಈ ವೇಳೆ ತಾವು ನಡೆದು ಬಂದ ಹಾದಿಯನ್ನ ನೆನಪು ಮಾಡಿಕೊಂಡ್ರು.
ಇದನ್ನೂ ಓದಿ : ಹಾಸನದ ‘ದಳ’ಪತಿಗಳಿಗೆ ಬುಲಾವ್ ಕೊಟ್ಟ ಹೆಚ್ಡಿಕೆ – ಭಾನುವಾರ ಟಿಕೆಟ್ ಫೈಟ್ಗೆ ಬೀಳುತ್ತಾ ಬ್ರೇಕ್..?
ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಬಿಎಸ್ವೈ ತಮ್ಮ ರಾಜಕೀಯ ಕರ್ಮಭೂಮಿ ಶಿಕಾರಿಪುರ ತಾಲೂಕಿನ ಜನರಿಗೆ ನಾನು ಚಿರಋಣಿಯಾಗಿದ್ದೇನೆ ಎಂದ್ರು. ಕ್ಷೇತ್ರಗಳ ಜನರ ಆಶೀರ್ವಾದದಿಂದ ಇಲ್ಲಿ ಬಂದು ಕುಳಿತುಕೊಳ್ಳುವ ಅವಕಾಶ ಸಿಕ್ಕಿದೆ. ಅವರ ಋಣವನ್ನ ತೀರಿಸುತ್ತಿದ್ದೇವೆ. ಅದು ನಮ್ಮ ಕರ್ತವ್ಯ. ಆ ಕ್ಷೇತ್ರದ ಜನ ಮೆಚ್ಚುವ ರೀತಿ ಕೆಲಸ ಮಾಡುವಂಥದ್ದು ಎಲ್ಲಾ ಸದಸ್ಯರ ಕರ್ತವ್ಯ ಎಂದರು. ಈ ತಿಂಗಳು 27ಕ್ಕೆ ನನಗೆ 80 ವರ್ಷ ತುಂಬುತ್ತಿದೆ. ಆ ವಿಶೇಷ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ವಿಮಾನ ನಿಲ್ದಾಣದ ಉದ್ಘಾಟನೆಗೆ ಮೋದಿ ಬರುತ್ತಿದ್ದಾರೆ. 27ನೇ ತಾರೀಕು ನಿಮ್ಮ ಹುಟ್ಟುಹಬ್ಬದ ದಿನವೇ ನಾನು ಶಿವಮೊಗ್ಗಕ್ಕೆ ಬರುತ್ತೇನೆ ಎಂದಿದ್ದು ನನಗೆ ಅತ್ಯಂತ ಸಮಾಧಾನ ಹಾಗೂ ತೃಪ್ತಿ ತಂದಿದೆ.
ಒಬ್ಬ ಸಾಮಾನ್ಯ ಪುರಸಭೆ ಸದಸ್ಯನಾಗಿ ಮುಖ್ಯಂಮತ್ರಿ ಆದೆ. ರಸ್ತೆಗಳು ಸರಿ ಇಲ್ಲದ ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ಜೊತೆಗೆ ರಾಜ್ಯದಲ್ಲಿ ಪ್ರವಾಸ ಮಾಡುವ ಸೌಭಾಗ್ಯ ಸಿಕ್ಕಿತು. ನಾನು ಸಭೆಗೆ ಹೋಗಿ ಭಾಷಣ ಶುರು ಮಾಡಿದ ಮೇಲೆ ಅಟಲ್ ಜೀ, ಮುರಳಿ ಮನೋಹರ್ ಜೋಶಿ, ಅಡ್ವಾಣಿ ಬರ್ತಾ ಇದ್ರು. ಹೀಗೆ ಪಕ್ಷವನ್ನು ಕಟ್ಟುವಾಗ ಯಾರೂ ಇರಲಿಲ್ಲ ನನ್ನ ಜೊತೆಗೆ. ಶಾಸನಸಭೆ ಒಳಗೆ ಬಂದಾಗ ನಾವು ಇಬ್ಬರೇ ಶಾಸಕರು. ಆದರೆ ವಸಂತ್ ಬಂಗೇರಾ ಕೂಡ ನಮ್ಮನ್ನ ಕೈ ಬಿಟ್ಟು ಹೋದ್ರು. ಇದ್ದವನು ನಾನೊಬ್ಬನೇ. ಹಾಗಂತ ನಾನೆಂದೂ ತಿರುಗಿ ನೋಡಲಿಲ್ಲ. ಜನ, ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನಗೆ ಅತ್ಯಂತ ತೃಪ್ತಿ ತಂದಿದ್ದು ಬಗರ್ ಹುಕಂ ಸಾಗುವಳಿ ಮಾಡಿದ ರೈತರಿಗೆ ನ್ಯಾಯ ಕೊಡಿಸಲು ಹೋರಾಟ ನಡೆಸಿದಾಗ ಅದಕ್ಕೆ ಸ್ಪಂದನೆ ಸಿಗದಿದ್ದಾಗ ನಾನು ಇಲ್ಲಿ ಬಂದು ಧರಣಿ ಕೂತಿದ್ದೆ. ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ ಕೃಷ್ಣ ಅವರು ಅದಕ್ಕೆ ಪರಿಹಾರ ಹುಡುಕುವಂಥ ಕೆಲಸ ಮಾಡಿದರು ಎಂದು ನೆನಪು ಮಾಡಿಕೊಂಡರು.
ಹಾಗೇ ನಾನಿವತ್ತು ಇಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಕಾರಣ. ನಾನು ಮೊನ್ನೆಯೇ ಇದು ನನ್ನ ಕೊನೆಯ ಅಧಿವೇಶನ ಅಂತಾ ಹೇಳಿದ್ದೆ. ನಾನು ಚುನಾವಣೆಗೆ ನಿಲ್ಲಲ್ಲ ಅಂತಾ ತೀರ್ಮಾನ ಮಾಡಿದ್ದೇನೆ. ಹೊರಗಡೆ ಇದ್ದುಕೊಂಡೇ ಪಕ್ಷದ ಗೆಲುವಿಗಾಗಿ, ಪಕ್ಷವನ್ನ ಬೆಳೆಸಲು ಜೀವನದ ಕೊನೇ ಉಸಿರಿರುವವರೆಗೂ ಕೆಲಸ ಮಾಡುತ್ತೇನೆ. ನನ್ನದು ಒಂದೇ ಗುರಿ. ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಸುತ್ತಾಟ ನಡೆಸಿ ಮತ್ತೊಮ್ಮೆ ಬಿಜೆಪಿಯನ್ನ ಅಧಿಕಾರಕ್ಕೆ ತರುವುದು ನನ್ನ ಗುರಿ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಭಾರತೀಯ ಜನತಾ ಪಾರ್ಟಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಅದೇ ವಿಶ್ವಾಸದಲ್ಲಿ ನಾವು ಸದನದಿಂದ ಹೋಗೋಣ ಎಂದು ಭರವಸೆ ವ್ಯಕ್ತಪಡಿಸಿದ್ರು.