ಮಂಡ್ಯದಲ್ಲಿ ಪಾರುಪತ್ಯ ಸಾಧಿಸಲು ಕಾಂಗ್ರೆಸ್ ರಣತಂತ್ರ – ಸುಮಲತಾ, ಹೆಚ್‌ಡಿಕೆಗೆ ಕಾದಿದ್ಯಾ ಶಾಕ್?

ಮಂಡ್ಯದಲ್ಲಿ ಪಾರುಪತ್ಯ ಸಾಧಿಸಲು ಕಾಂಗ್ರೆಸ್ ರಣತಂತ್ರ – ಸುಮಲತಾ, ಹೆಚ್‌ಡಿಕೆಗೆ ಕಾದಿದ್ಯಾ ಶಾಕ್?

ಲೋಕಸಭಾ ಚುನಾವಣೆಗೆ ಸಜ್ಜಾಗ್ತಿರೋ ಮಂಡ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಮಂಡ್ಯದಲ್ಲಿ ಪಾರುಪತ್ಯ ಸಾಧಿಸಲು ರಣತಂತ್ರ ಹೆಣೆದಿವೆ. ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರ ಬಿಟ್ಟುಕೊಡುವ ಮಾತೇ ಇಲ್ಲ ಅಂತಿದ್ದಾರೆ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸೋ ತಯಾರಿ ನಡೆಸಿವೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂಬ ಚರ್ಚೆಯೂ ಜೋರಾಗಿದೆ. ಒಂದ್ಕಡೆ ಸುಮಲತಾ ಮತ್ತೊಂದ್ಕಡೆ ಕುಮಾರಣ್ಣನ ನಡುವೆ ಪೈಪೋಟಿ ನಡೆಯುತ್ತೆ ಎನ್ನಲಾಗ್ತಿದೆ. ಆದ್ರೆ ಕಾಂಗ್ರೆಸ್ ಮಾತ್ರ ಈ ಬಾರಿಯಾದರೂ ಮಂಡ್ಯ ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಹಠಕ್ಕೆ ಬಿದ್ದಿದೆ. ಅದಕ್ಕಾಗಿ ಭರ್ಜರಿ ತಯಾರಿಯನ್ನೂ ಆರಂಭಿಸಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಅಪ್ಪ ಮಗ ಎಲೆಕ್ಷನ್‌ಗೆ ನಿಲ್ಲಲ್ಲ ಅಂದಿದ್ದು ಇದೇ ಕಾರಣಕ್ಕಾ? – ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್ ಮಂಜುನಾಥ್ ಕಣಕ್ಕೆ?

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಈಗಾಗಲೇ ಸ್ಟಾರ್ ಚಂದ್ರು ಮಂಡ್ಯ ಲೋಕಸಭಾ ಅಭ್ಯರ್ಥಿ ಎನ್ನಲಾಗ್ತಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಚೆಲುವರಾಯಸ್ವಾಮಿ, ಸ್ಟಾರ್ ಚಂದ್ರು ಆಕಾಂಕ್ಷಿಯಾಗಿದ್ದಾರೆ. ಪಕ್ಷದ ಹೈಕಮಾಂಡ್ ಇನ್ನೊಂದು ವಾರ ಅಥವಾ 10 ದಿನದಲ್ಲಿ ಡಿಸೈಡ್ ಮಾಡುತ್ತೆ. ಮಂಡ್ಯ ಅಭ್ಯರ್ಥಿಯಾಗಿ ಮಂಡ್ಯ ನೆಲದವರನ್ನೇ ಅಭ್ಯರ್ಥಿ ಮಾಡುತ್ತೇವೆ. ಹೊರಗಿನಿಂದ ಯಾರನ್ನೂ ಕರೆ ತರಲ್ಲ ಎನ್ನುವ ಮೂಲಕ ಹೊರಗಿನವರ ಸ್ಪರ್ಧೆ ವದಂತಿಗೆ ಬ್ರೇಕ್ ಹಾಕಿದ್ದಾರೆ. ಹಾಗೇ 5 ಗ್ಯಾರಂಟಿ ಯೋಜನೆಗಳ ಲಾಭ ಪಡೆಯೋಕೂ ತಂತ್ರಗಾರಿಕೆ ಮಾಡಲಾಗಿದೆ. ನಾವು ನುಡಿದಂತೆ ನಡೆದಿದ್ದೇವೆ. ಹಿಂದೆ ಭರವಸೆ ಕೊಟ್ಟವರು ಯಾರೂ ಮಾಡಿಲ್ಲ, ನಾವು ಮಾಡಿದ್ದೇವೆ. ಕೆಲಸ ಮಾಡುವವರಿಗೆ ಮತ ಹಾಕಿ ಎಂದು ಜನರಿಗೆ ಮನವರಿಕೆ ಮಾಡಿಕೊಡಲು ಸೂಚನೆ ನೀಡಲಾಗಿದೆ. ಹಾಗೇ ಮಂಡ್ಯ ಜಿಲ್ಲೆಯ ಜನರ ಜೀವನಾಡಿಯಾಗಿರುವ ಮೈಶುಗರ್ ಕಾರ್ಖಾನೆಯ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಘೋಷಣೆ ಮಾಡಲಾಗಿದೆ. ಸರ್ಕಾರದ ಅನುದಾನ, ಇತರೆ ಮೂಲಗಳು ಹಾಗೂ ಕಾರ್ಖಾನೆಯ ಆಸ್ತಿ ನಗದೀಕರಣಗೊಳಿಸುವ ಸಂಪನ್ಮೂಲ ಕ್ರೋಡೀಕರಿಸಲು ಉದ್ದೇಶಿಸಲಾಗಿದೆ.

ಸದ್ಯದ ರಾಜಕೀಯ ಲೆಕ್ಕಾಚಾರದ ಪ್ರಕಾರ ಮಂಡ್ಯದಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನೇ ಹೊಂದಿದೆ. ವಿಧಾನಸಭಾ ಚುನಾವಣೆಯಲ್ಲೂ ಭರ್ಜರಿ ಜಯ ಗಳಿಸಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಕಾಂಗ್ರೆಸ್ ಪರವಾಗೇ ಇದ್ದಾರೆ. ಈ ಮೂಲಕ ವಿಧಾನಸಭೆ ಬಲಾಬಲ ನೋಡೋದಾದ್ರೆ ಲೋಕಸಭೆಗೆ ಈಸಿಯಾಗಿ ಗೆಲ್ಲಬಹುದು. ಆದ್ರೆ ಕಾಂಗ್ರೆಸ್​ಗೆ ಪ್ರಬಲ ಎದುರಾಳಿ ಅಂದ್ರೆ ಅದು ಸುಮಲತಾ ಅಂಬರೀಶ್. ಹಾಗೂ ದೊಡ್ಡಗೌಡರ ಕುಟುಂಬ.

2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಗೆದ್ದಿದ್ದ ಸುಮಲತಾ ಈ ಬಾರಿಯೂ ಮಂಡ್ಯದಿಂದಲೇ ಸ್ಪರ್ಧಿಸೋದಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್​ಗಾಗಿ ಎದುರು ನೋಡ್ತಿದ್ದಾರೆ. ಆದ್ರೆ ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರ ಯಾರ ಪಾಲಾಗುತ್ತೆ ಅನ್ನೋದು ಫೈನಲ್ ಆಗಿಲ್ಲ. ಪದೇಪದೆ ಮಂಡ್ಯದಿಂದಲೇ ಸ್ಪರ್ಧೆ ಎನ್ನುತ್ತಿರೋ ಸುಮಲತಾ, ತಾನು ಯಾವತ್ತು ಟಿಕೆಟ್​ಗಾಗಿ ಲಾಬಿ ಮಾಡಿಲ್ಲ ಎನ್ನುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್​ಗೆ ಟಾಂಗ್ ಕೊಟ್ಟಿದ್ದಾರೆ. ಮತ್ತೊಂದೆಡೆ ಹೆಚ್​.ಡಿ ಕುಮಾರಸ್ವಾಮಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು ಕ್ಷೇತ್ರ ಪಡೆಯೋಕೆ ನಾನಾ ತಂತ್ರಗಾರಿಕೆ ಮಾಡ್ತಿದ್ದಾರೆ. ಬುಧವಾರ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆ ದೆಹಲಿಗೆ ಹಾರಿದ್ದಾರೆ. ಲೋಕಸಭಾ ಚುನಾವಣೆಗೆ ಕ್ಷೇತ್ರಗಳ ಹಂಚಿಕೆ ಮಾತುಕತೆಗಾಗಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗ್ತಿದೆ.

ಒಟ್ಟಾರೆ ಮಂಡ್ಯ ಕ್ಷೇತ್ರ ದಿನದಿನಕ್ಕೂ ಸಂಚಲನ ಮೂಡಿಸುತ್ತಿದೆ. ಕಳೆದ ಬಾರಿ ನಿಖಿಲ್ ಮತ್ತು ಸುಮಲತಾ ನಡುವೆಯೇ ನೇರಾನೇರ ಪೈಪೋಟಿ ನಡೆದಿತ್ತು. ಆದ್ರೆ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಎಲ್ಲಾ ಸಾಧ್ಯತೆಗಳೂ ಕಾಣ್ತಿವೆ. ಹೀಗಾಗಿ ಈ ಸಲವೂ ಮಂಡ್ಯ ರಣರಂಗವಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

Sulekha