ಭಾರತ ಪಾಕ್ ಯುದ್ಧ ಭೀತಿ -ಐಪಿಎಲ್ ಪಂದ್ಯಕ್ಕೆ ಬೀಳುತ್ತಾ ಬ್ರೇಕ್? – ಪಾಕಿಸ್ತಾನ್ ಸೂಪರ್ ಲೀಗ್ ಆಡಲ್ವಾ ವಿದೇಶಿ ಕ್ರಿಕೆಟರ್ಸ್?

ಆಪರೇಷನ್ ಸಿಂಧೂರ್. ಭಾರತೀಯ ಸೇನೆಯ ಈ ಕಾರ್ಯಾಚರಣೆಯಿಂದ ಪಾಕಿಸ್ತಾನ ಗಡಗಡ ನಡುಗುತ್ತಿದೆ. ಅಷ್ಟೇ ಯಾಕೆ ಕುತಂತ್ರಿ ಪಾಕ್, ಪಾಕಿಸ್ತಾನದ ಗಡಿಯಲ್ಲಿ ಈಗಾಗಲೇ ಭಾರತೀಯ ನಾಗರಿಕರ ಮೇಲೆ ದಾಳಿ ಶುರು ಮಾಡಿದೆ. ಇದರ ಎಫೆಕ್ಟ್ ಐಪಿಎಲ್ ಮೇಲೂ ಬೀಳುವ ಚಾನ್ಸಸ್ ಜಾಸ್ತಿಯಿದೆ. ಹೀಗಾಗಿಯೇ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಾ ಇಲ್ವಾ ಅನ್ನೋ ಅನುಮಾನ ಶುರುವಾಗಿದೆ.
ಐಪಿಎಲ್ ನ ಈ ಸೀಸನ್ನಲ್ಲಿ 56ನೇ ಪಂದ್ಯ ಮುಗಿದಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯ ಮುಗಿದ ಕೆಲವೇ ಗಂಟೆಗಳ ಬಳಿಕ ಭಾರತವು ಪಿಒಕೆಯಲ್ಲಿನ ಉಗ್ರರ ಅಡುಗುತಾಣಗಳ ಮೇಲೆ ದಾಳಿ ನಡೆಸಿದೆ.
ಭಾರತ ಮತ್ತು ಪಾಕಿಸ್ತಾನ್ ನಡುವೆ ಯುದ್ಧ ಆರಂಭವಾದರೆ, ಐಪಿಎಲ್ಗೆ ಬ್ರೇಕ್ ಬೀಳಲಿದೆ. ಈಗಾಗಲೇ ಬಿಸಿಸಿಐ ಮತ್ತು ಐಪಿಎಲ್ ವ್ಯವಸ್ಥಾಪಕರು ಈ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರದಿಂದ ಸೂಚನೆ ಬಂದರೆ, ಇಂಡಿಯನ್ ಪ್ರೀಮಿಯರ್ ಲೀಗ್ ತಾತ್ಕಾಲಿಕವಾಗಿ ರದ್ದುಗೊಳ್ಳಲಿದೆ ಎಂದು ವರದಿಯಾಗಿದೆ. ಅಲ್ಲಿಯವರೆಗೆ ಐಪಿಎಲ್ನ ಉಳಿದ ಪಂದ್ಯಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ. ಒಂದು ವೇಳೆ ಕೇಂದ್ರ ಸರ್ಕಾರ ಅಥವಾ ಇಂಡಿಯನ್ ಆರ್ಮಿ ಸೂಚನೆ ನೀಡಿದರೆ ಮಾತ್ರ ಟೂರ್ನಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಐಪಿಎಲ್ನ 56 ಪಂದ್ಯಗಳು ಮುಗಿದಿವೆ. ಇನ್ನೂ 18 ಪಂದ್ಯಗಳು ಬಾಕಿಯಿದೆ. ಅಲ್ಲದೆ ಟೂರ್ನಿಯು ಮೇ 25 ರಂದು ಮುಗಿಯಲಿದೆ.
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನ್ ಸೂಪರ್ ಲೀಗ್ ನಡೆಯೋದೂ ಕೂಡಾ ಅನುಮಾನವಾಗಿದೆ. ಅರ್ಧದಲ್ಲೇ ವಿದೇಶಿ ಆಟಗಾರರು ಕೈಕೊಡುವ ಆತಂಕವೂ ಎದುರಾಗಿದೆ. ಪಾಕಿಸ್ತಾನ್ ಸೂಪರ್ ಲೀಗ್ನಿಂದ ವಿದೇಶಿ ಆಟಗಾರರು ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ್ ನಡುವೆ ಉದ್ವಿಗ್ನತೆ ಹೆಚ್ಚಾದ ಹಿನ್ನಲೆಯಲ್ಲಿ, ಪಿಎಸ್ಎಲ್ ಟೂರ್ನಿ ಆಡುತ್ತಿರುವ ವಿದೇಶಿ ಆಟಗಾರರು ಅರ್ಧದಲ್ಲೇ ಟೂರ್ನಿ ತೊರೆದು ತವರಿಗೆ ಹಿಂತಿರುಗುವ ಸಾಧ್ಯತೆ ಹೆಚ್ಚಾಗಿದೆ. ಈ ಬಾರಿಯ ಐಪಿಎಲ್ನಲ್ಲಿ ಅವಕಾಶ ವಂಚಿತರಾದ ಬಹುತೇಕ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕಾಣಿಸಿಕೊಂಡಿದ್ದರು. ಪಾಕಿಸ್ತಾನ ತಾನೇ ತೋಡಿದ ಹಳ್ಳಕ್ಕೆ ಬಿದ್ದಾಗಿದೆ.