ಫೈನಲ್ ಪ್ರವೇಶಿಸಿದ ಅರ್ಜೆಂಟೀನಾ – ನಾಯಕ ಮೆಸ್ಸಿ ಮ್ಯಾಜಿಕ್‌ಗೆ ಒಲಿದ ಗೆಲುವು

ಫೈನಲ್ ಪ್ರವೇಶಿಸಿದ ಅರ್ಜೆಂಟೀನಾ – ನಾಯಕ ಮೆಸ್ಸಿ ಮ್ಯಾಜಿಕ್‌ಗೆ ಒಲಿದ ಗೆಲುವು

ಫಿಫಾ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ತಂಡ ಅರ್ಜೆಂಟೀನಾ 6ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಕ್ರೊವೇಷ್ಯಾ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದ ಅರ್ಜೆಂಟೀನಾ, ಸತತ ಎಂಟು ವರ್ಷಗಳ ನಂತರ ಫೈನಲ್‌ ಗೆ ಲಗ್ಗೆ ಇಟ್ಟಿದೆ. ತಂಡದ ಪರ ಲಿಯೋನೆಲ್ ಮೆಸ್ಸಿ ಒಂದು ಗೋಲು ಹಾಗೂ ಜೂಲಿಯಾನ್ ಅಲ್ವಾರೆಜ್ ಎರಡು ಗೋಲು ಬಾರಿಸುವ ಮೂಲಕ ಗೆಲುವು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ:  ಅರ್ಜೆಂಟೀನಾ – ಕ್ರೊವೇಷ್ಯಾ ಸೆಮಿಫೈನಲ್‌ಗೆ ಶುರುವಾಯ್ತು ಕೌಂಟ್ ಡೌನ್

2014ರಲ್ಲಿ ಅರ್ಜೆಂಟೀನಾ ಫೈನಲ್ ತಲುಪಿತ್ತಾದರೂ ಅಲ್ಲಿ ಜರ್ಮನಿ ವಿರುದ್ಧ ಸೋತು ಚಾಂಪಿಯನ್ ಪಟ್ಟಕ್ಕೇರುವ ಅವಕಾಶವನ್ನು ಕಳೆದುಕೊಂಡಿತ್ತು. ಈಗ ಡಿಸೆಂಬರ್ 18 ರಂದು ನಡೆಯಲಿರುವ ಫೈನಲ್‌ನಲ್ಲಿ  ಫ್ರಾನ್ಸ್ ಅಥವಾ ಮೊರಾಕ್ಕೋ ನಡುವಿನ ಸೆಮಿಫೈನಲ್ ಪಂದ್ಯದ ವಿಜೇತ ತಂಡವನ್ನು ಅರ್ಜೆಂಟೀನಾ ಎದುರಿಸಲಿದೆ. ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಎರಡನೇ ಬಾರಿಗೆ ಫೈನಲ್ ಆಡಲಿದೆ. ಇದಕ್ಕೂ ಮೊದಲು 2014ರಲ್ಲಿ, ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಫೈನಲ್‌ನಲ್ಲಿ ಜರ್ಮನಿ ಎದುರು ಸೋತಿದ್ದರಿಂದ ಪ್ರಶಸ್ತಿ ಎತ್ತಿಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಮೆಸ್ಸಿಗೆ ಕೊನೇ ವಿಶ್ವಕಪ್ ಅಂತಾನೇ ಹೇಳಲಾಗುತ್ತಿದೆ. ಹೀಗಾಗಿ ತಂಡದ ಸ್ಟಾರ್ ಆಟಗಾರ, ತಂಡದ ಜೀವಾಳವೇ ಆಗಿದ್ದ ಮೆಸ್ಸಿಗೆ ವಿಶ್ವಕಪ್ ಕಿರೀಟ ತೊಡಿಸಲು ಇಡೀ ಟೀಮ್ ಕೂಡಾ ಶ್ರಮಹಾಕುತ್ತಿದೆ. ಹೀಗಾಗಿ ಈ ಬಾರಿ ಮೆಸ್ಸಿಗೆ ವಿಶ್ವಕಪ್ ಹಿಡಿಯೋ ಅವಕಾಶ ಸಿಗುತ್ತಾ ಅನ್ನೋದನ್ನ ನೋಡಲು ಇನ್ನು ನಾಲ್ಕು ದಿನ ಕಾಯಲೇಬೇಕು.

suddiyaana