ಫೆಬ್ರವರಿ 17 ಕ್ಕೆ ಕಂಕಣ ಸೂರ್ಯಗ್ರಹಣ – ಭಾರತದಲ್ಲಿ ಗೋಚರಿಸುತ್ತಾ, ಸೂತಕ ಇದ್ಯಾ?

ಈ ವರ್ಷದ ಮೊದಲ ಖಗೋಳ ವಿಸ್ಮಯವಾದ ‘ಕಂಕಣ ಸೂರ್ಯಗ್ರಹಣ’ ಫೆಬ್ರವರಿ 17 ರಂದು ಸಂಭವಿಸಲಿದೆ. ಆಕಾಶದಲ್ಲಿ ಸೂರ್ಯನು ಬೆಂಕಿಯ ಉಂಗುರದಂತೆ ಕಾಣುವ ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜಗತ್ತು ಕಾತರದಿಂದ ಕಾಯುತ್ತಿದೆ. ಆದ್ರೆ ಫೆಬ್ರವರಿ 17, 2026 ರಂದು ಸಂಭವಿಸಲಿರುವ ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣವು ಫೆಬ್ರವರಿ 17ರ ಮಧ್ಯಾಹ್ನ ಸುಮಾರು 3:26ಕ್ಕೆ ಆರಂಭವಾಗಿ, ಸಂಜೆ 7:57ರ ಸುಮಾರಿಗೆ ಅಂತ್ಯಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಸಮಯದ ಪ್ರಕಾರ ಇದು ಹಗಲು ಹೊತ್ತೇ ಆಗಿದ್ದರೂ, ಭೌಗೋಳಿಕ ಸ್ಥಾನದ ಕಾರಣದಿಂದಾಗಿ ಭಾರತದ ಯಾವುದೇ ಭಾಗದಲ್ಲಿ ಈ ಗ್ರಹಣ ಗೋಚರವಾಗುವುದಿಲ್ಲ. ಈ ಗ್ರಹಣದ ಸಂಪೂರ್ಣ ಗೋಚರತೆ ಅಂಟಾರ್ಕ್ಟಿಕಾ ಭಾಗಕ್ಕೆ ಸೀಮಿತವಾಗಿರುತ್ತದೆ. ಆದ್ದರಿಂದ ಭಾರತೀಯರು ಆಕಾಶದತ್ತ ನೋಡಿದರೆ ಸಾಮಾನ್ಯ ಸೂರ್ಯನೇ ಕಾಣಿಸುತ್ತಾನೆ ಹೊರತು ಗ್ರಹಣ ಹಿಡಿದ ಸೂರ್ಯನಲ್ಲ.
ಇದನ್ನೂ ಓದಿ: ಕಷ್ಟಗಳು ಕರಗಬೇಕಾ? – ಸೋಮವಾರ ಶಿವನ ಈ ಮಂತ್ರಗಳನ್ನ ಪಠಿಸಿ
ಭಾರತದಲ್ಲಿ ಗ್ರಹಣ ಗೋಚರವಾಗುವುದಿಲ್ಲವಾದ್ದರಿಂದ, ಧಾರ್ಮಿಕವಾಗಿ ಯಾವುದೇ ಸೂತಕ ಅಥವಾ ನಿಷೇಧಗಳು ಅನ್ವಯಿಸುವುದಿಲ್ಲ. ಜ್ಯೋತಿಷ ಶಾಸ್ತ್ರದ ಪ್ರಕಾರ, ಗ್ರಹಣವು ಕಣ್ಣಿಗೆ ಕಾಣಿಸದಿದ್ದಲ್ಲಿ ಅದಕ್ಕೆ ಸೂತಕದ ನಿಯಮಗಳನ್ನು ಪಾಲಿಸುವ ಅಗತ್ಯವಿರುವುದಿಲ್ಲ. ಆದ್ದರಿಂದ ಫೆಬ್ರವರಿ 17 ರಂದು ದೇವಾಲಯಗಳು ಎಂದಿನಂತೆ ತೆರೆದಿರುತ್ತವೆ ಮತ್ತು ಪೂಜಾ ಕೈಂಕರ್ಯಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಲಿವೆ. ಗರ್ಭಿಣಿಯರು ಅಥವಾ ಹಿರಿಯರು ಆತಂಕಪಡುವ ಅಗತ್ಯವಿಲ್ಲ.
ಈ ಅಪರೂಪದ ಕಂಕಣ ಸೂರ್ಯಗ್ರಹಣವು ಮುಖ್ಯವಾಗಿ ದಕ್ಷಿಣ ಗೋಳಾರ್ಧದಲ್ಲಿ ಗೋಚರಿಸಲಿದೆ. ಅಂಟಾರ್ಕ್ಟಿಕಾ ಖಂಡದಲ್ಲಿ ಇದು ಸ್ಪಷ್ಟವಾಗಿ ‘ರಿಂಗ್ ಆಫ್ ಫೈರ್’ ಅಥವಾ ಬೆಂಕಿಯ ಉಂಗುರದಂತೆ ಕಾಣಿಸಲಿದೆ. ಇದಲ್ಲದೆ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾದ ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಸಾಗರದ ಕೆಲವು ಭಾಗಗಳಲ್ಲಿ ಪಾಕ್ಷಿಕ ಸೂರ್ಯಗ್ರಹಣ ಕಾಣಿಸಲಿದೆ.

ನೋಡಿರಿ

