ಫಿಫಾ ವಿಶ್ವಕಪ್- ಡಿಸೆಂಬರ್‌ 9ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳ ರೋಚಕ ಕಾದಾಟ

ಫಿಫಾ ವಿಶ್ವಕಪ್-  ಡಿಸೆಂಬರ್‌ 9ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳ ರೋಚಕ ಕಾದಾಟ

ಕತಾರ್ :  ಫಿಫಾ ವಿಶ್ವಕಪ್ ನಲ್ಲಿ ಡಿಸೆಂಬರ್ 9ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳ ರೋಚಕ ಕಾದಾಟ ಶುರುವಾಗಲಿದೆ. ಕ್ವಾರ್ಟರ್ ಫೈನಲ್‌ನ ಮೊದಲ ದಿನವೇ ಪ್ರಶಸ್ತಿ ಪಡೆಯುವ ಫೆವರೇಟ್ ತಂಡ, ಐದು ಬಾರಿಯ ಚಾಂಪಿಯನ್ ಬ್ರೆಜಿಲ್  ತಂಡವು, 2018ರ ರನ್ನರ್ ಅಪ್ ಕ್ರೊವೇಷ್ಯಾ  ತಂಡವನ್ನು ಎದುರಿಸಲಿದೆ. ಎಜುಕೇಷನ್ ಸಿಟಿ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆಯಲಿರುವ ಎರಡು ಮದಗಜ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಬಲ ಅರ್ಜೇಂಟೀನಾ ಮತ್ತು ನೆದರ್ಲೆಂಡ್ಸ್  ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ :  ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ಕಾಡ್ತಿದೆ ಪ್ರಮುಖ ಆಟಗಾರರ ಇಂಜುರಿ ಸಮಸ್ಯೆ

ಕತಾರ್   ದೇಶದ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿ ರೋಚಕ ಘಟ್ಟಕ್ಕೆ ಬಂದು ನಿಂತಿದೆ.  ನವೆಂಬರ್ 20 ರಿಂದ ಇಲ್ಲಿಯವರೆಗೆ ನಡೆದ ಪಂದ್ಯಗಳಲ್ಲಿ ಒಂದಿಲ್ಲೊಂದು ವಿಶೇಷತೆಗಳಿದ್ದವು. ಶುಕ್ರವಾರ ರಾತ್ರಿ ನಡೆಯಲಿರುವ ಕ್ವಾರ್ಟರ್ ಫೈನಲ್‌ ಆಡುತ್ತಿರುವ ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ನೇಮರ್, ಬ್ರೆಜಿಲ್ ಪರ 76 ಅಂತಾರಾಷ್ಟ್ರೀಯ ಗೋಲ್ ಗಳಿಸಿದ್ದು, ಇನ್ನೊಂದು ಗೋಲು ಗಳಿಸಿದರೆ, 77 ಗೋಲು ಗಳಿಸಿರುವ ಬ್ರೆಜಿಲ್ ದಂತಕತೆ ಪೀಲೆ ಅವರ ದಾಖಲೆ ಸರಿಗಟ್ಟಲಿದ್ದಾರೆ. ಹೀಗಾಗಿ ಎಲ್ಲರ ಕಣ್ಣು ನೇಮರ್ ಮೇಲೆ ನೆಟ್ಟಿದೆ.

ಫಿಫಾ ಱಂಕಿಂಗ್‌ನಲ್ಲಿ 3ನೇ ಸ್ಥಾನ ಹೊಂದಿರುವ ಲಯನೆಲ್ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ, ವಿಶ್ವದ 8ನೇ ಱಂಕಿಂಗ್‌ನಲ್ಲಿರುವ ನೆದರ್ಲೆಂಡ್ಸ್‌ ತಂಡದ ವಿರುದ್ಧ ಸೆಣಸಾಡಲಿದೆ. ಲುಸೈಲ್ ಕ್ರೀಡಾಂಗಣದಲ್ಲಿ ತಡರಾತ್ರಿ ಇತ್ತಂಡಗಳ ಸೆಣಸಾಟ ನಡೆಯಲಿದೆ. ಲಿಯೋನೆಲ್ ಮೆಸ್ಸಿಗೆ ಇದು ಕೊನೇ ವಿಶ್ವಕಪ್ ಎಂದು ಹೇಳಲಾಗ್ತಿದೆ. ಹೀಗಾಗಿ ಅರ್ಜೆಂಟೀನಾ ತಂಡ ಶತಾಯ ಗತಾಯ ಗೆಲ್ಲಲೇಬೇಕೆಂಬ ಹಠ ತೊಟ್ಟಿದೆ. ಈ ಮೂಲಕ ತಮ್ಮ ತಂಡದ ಸ್ಟಾರ್ ಆಟಗಾರ ಮೆಸ್ಸಿಗೆ ಟ್ರೋಫಿ ಉಡುಗೊರೆ ನೀಡಲು ಆಟಗಾರರು ಎದುರುನೋಡುತ್ತಿದ್ದಾರೆ.

suddiyaana