ಪಾಕಿಸ್ತಾನದ ಮೈದಾನಗಳಿಗೆ ನುಗ್ಗಿದ ಫ್ಯಾನ್ಸ್ – ICC ಟೂರ್ನಿಗೆ ಇದೇನಾ ಭದ್ರತೆ?

ಮುಂದಿನ ಬುಧವಾರ ಅಂದ್ರೆ ಫೆಬ್ರವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಟೂರ್ನಿಗೂ ಮುನ್ನ ಪಾಕಿಸ್ತಾನದಲ್ಲಿ ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕ್ ನಡುವೆ ತ್ರಿಕೋನ ಸರಣಿ ನಡೆಯುತ್ತಿದೆ. ಅಂದ್ರೆ ಇದೊಂಥರಾ ಮೂರೂ ತಂಡಗಳಿಗೆ ವಾರ್ಮ್ ಅಪ್ ಮ್ಯಾಚ್ ಇದ್ದಂತೆ. ಆದ್ರೆ ಸರಣಿಯ ಮೂರನೇ ಪಂದ್ಯ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದಿದ್ದು ಪಾಕ್ ಆಟಗಾರರು ಮಿತಿ ಮೀರಿ ನಡೆದುಕೊಂಡಿದ್ದಾರೆ. ಸೌತ್ ಆಫ್ರಿಕಾ ನಾಯಕನ ತಾಳ್ಮೆಯನ್ನ ಕೆಣಕುವಂತೆ ಆಡಿದ್ದಾರೆ.
ಇದನ್ನೂ ಓದಿ : RCB ಕ್ಯಾಪ್ಟನ್ ಕೊಹ್ಲಿ ಟ್ರೆಂಡ್ – ವಿರಾಟ್ ಗೆ ನಾಯಕತ್ವ ನೀಡ್ಬೇಕಿತ್ತಾ?
ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ ಮತ್ತು ಸೌತ್ ಆಫ್ರಿಕಾ ನಡುವೆ ಪಂದ್ಯ ನಡೆದಿದೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಪರ ನಾಯಕ ಟೆಂಬಾ ಬವುಮಾ ಅದ್ಭುತ ಅರ್ಧಶತಕ ಗಳಿಸಿದ್ರು. ಬಟ್ 29ನೇ ಓವರ್ ವೇಳೆ ಸಿಂಗಲ್ ತೆಗೆದುಕೊಳ್ಳುವಾಗ ರನ್ಔಟ್ ಆದ್ರು. ಈ ವೇಳೆ ಪಾಕಿಸ್ತಾನಿ ಆಟಗಾರರು ಓವರ್ ಆಗಿ ರಿಯಾಕ್ಟ್ ಮಾಡಿದ್ದಾರೆ. ಆಕ್ರಮಣಕಾರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಟೆಂಬಾನ ಸುತ್ತುವರೆದು ಕೆಣಕುವಂತೆ ವರ್ತಿಸಿದ್ದಾರೆ. ಈ ವೇಳೆ ಮೈದಾನದ ಅಂಪೈರ್ ಪಾಕ್ ನಾಯಕ ಮೊಹಮ್ಮದ್ ರಿಜ್ವಾನ್ ಗೆ ಎಚ್ಚರಿಕೆಯನ್ನೂ ನೀಡಿದ್ದರು. ಬಹುಶಃ ಈ ಜಾಗದಲ್ಲಿ ನಮ್ಮ ವಿರಾಟ್ ಕೊಹ್ಲಿಯೋ ಅಥವಾ ಆಸ್ಟ್ರೇಲಿಯಾದ ಆಟಗಾರರೋ ಇದ್ರೆ ಸೀನ್ ಫುಲ್ ಚೇಂಜ್ ಆಗ್ತಿತ್ತು. ಏಟಿಗೆ ಏಟು ಎನ್ನುವಂತೆ ವಾಪಸ್ ಕೊಟ್ಟೇ ಬರ್ತಿದ್ರು. ಬಟ್ ಇಷ್ಟೆಲ್ಲಾ ಆದ್ರೂ ಟೆಂಬಾ ಬವುಮಾ ಮಾತ್ರ ರಿಯಾಕ್ಟೇ ಮಾಡಿಲ್ಲ. ಜೆಂಟಲ್ಮೆನ್ ಗೇಮ್ನಲ್ಲಿ ಜೆಂಟಲ್ಮೆನ್ ನಂತೆಯೇ ನಡೆದುಕೊಂಡಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡದೆ ಕ್ರೀಸ್ನಿಂದ ಹೊರ ಬಂದಿದ್ದಾರೆ. ಪಾಕಿಸ್ತಾನಿ ಆಟಗಾರರ ಈ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗ್ತಿದೆ. ಅಷ್ಟೇ ಕೆಲ ಪಾಕ್ ಅಭಿಮಾನಿಗಳೂ ಈ ರೀತಿಯ ದುರ್ವತನೆಗೆ ಕಿಡಿ ಕಾರಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಅಗ್ರೆಸ್ಸಿವ್ ಆಟಿಟ್ಯೂಟ್ ತೋರಿಸಿದ ಪ್ಲೇಯರ್ಸ್ಗೆ ಐಸಿಸಿ ದಂಡದ ಬರೆ ಎಳೆದಿದೆ. ಹೀಗೆ ಪಾಕ್ ಆಟಗಾರರು ಮೈದಾನದ ಒಳಗೆ ಮಿತಿ ಮೀರಿ ಆಡ್ತಿದ್ರೆ ಅತ್ತ ಫ್ಯಾನ್ಸ್ ಕೂಡ ತಾವೇನು ಕಮ್ಮಿ ಅನ್ನುವಂತೆ ನಡೆದುಕೊಳ್ತಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾದಾಗ್ಲೇ ಪಾಕಿಸ್ತಾನದ ಮೈದಾನದ ಬಗ್ಗೆ ಪ್ರಶ್ನೆಗಳನ್ನ ಎತ್ತಲಾಗಿತ್ತು. ಇದೇ ಕಾರಣದಿಂದಲೇ ಭಾರತ ಕೂಡ ನಾವು ಪಾಕಿಸ್ತಾನಕ್ಕೆ ಕಾಲಿಡಲ್ಲ ಎಂದು ಹೈಬ್ರಿಡ್ ಮಾದರಿಗೆ ಹಠ ಹಿಡಿದು ತನ್ನೆಲ್ಲಾ ಪಂದ್ಯಗಳನ್ನ ದುಬೈಗೆ ಶಿಫ್ಟ್ ಮಾಡಿಸಿಕೊಂಡಿದೆ. ಅಲ್ದೇ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಭಾರತ ಮಾತ್ರವಲ್ಲದೆ ಹಲವು ದೇಶಗಳು ಭದ್ರತೆಯ ಬಗ್ಗೆ ಪ್ರಶ್ನೆ ಮಾಡುತ್ತಲೇ ಇವೆ. ಈ ನಡುವೆ ಭದ್ರತೆಯನ್ನೇ ಪ್ರಶ್ನಿಸುವಂಥ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿವೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮತ್ತೆ ಅದೇ ಸೆಕ್ಯೂರಿಟಿ ಬಗ್ಗೆ ಹಲವರು ಧ್ವನಿ ಎತ್ತಿದ್ದಾರೆ. ಕರಾಚಿಯಲ್ಲಿ ಹೊಸದಾಗಿ ನವೀಕರಿಸಿದ ರಾಷ್ಟ್ರೀಯ ಕ್ರೀಡಾಂಗಣವನ್ನು ಪ್ರದರ್ಶಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ದೊಡ್ಡ ಪ್ರೋಗ್ರಾಂ ಅರೇಂಜ್ ಮಾಡಿತ್ತು. ಈ ಕ್ರೀಡಾಂಗಣದಲ್ಲೇ ಫೆಬ್ರವರಿ 19 ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ICC ಚಾಂಪಿಯನ್ಸ್ ಟ್ರೋಫಿದ ಉದ್ಘಾಟನಾ ಪಂದ್ಯ ನಡೆಯಲಿದೆ. ಅಲ್ದೇ ಇದು ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧದ ದಕ್ಷಿಣ ಆಫ್ರಿಕಾದ ಪಂದ್ಯಗಳೂ ಇದೇ ಮೈದಾನದಲ್ಲಿ ನಡೆಯಲಿವೆ. ಆದ್ರೆ ಕಾರ್ಯಕ್ರಮದ ವೇಳೆ ಕ್ರಿಕೆಟ್ ಅಭಿಮಾನಿಗಳು ಮೈದಾನಕ್ಕೆ ಮುತ್ತಿಗೆ ಹಾಕಿದಂತೆ ನುಗ್ಗಿದ್ದಾರೆ. ಪ್ರೇಕ್ಷಕರು ಗೋಡೆಗಳನ್ನು ಹತ್ತುವುದು ಮತ್ತು ಕ್ರೀಡಾಂಗಣಗಳಿಗೆ ಜಿಗಿಯುವ ವಿಡಿಯೋಗಳು ಹೊರಬಿದ್ದಿವೆ. ಇದೇ ಈಗ ಭದ್ರತೆ ಬಗ್ಗೆ ಪ್ರಶ್ನೆಗಳನ್ನ ಎತ್ತುವಂತೆ ಮಾಡಿದೆ.
ಭದ್ರತಾ ತಪಾಸಣೆ ಇಲ್ಲದೆ ಜನರು ಗೋಡೆಗಳು ಹಾರುತ್ತಿರುವ ವಿಡಿಯೋಗಳು ಹರಿದಾಡುತ್ತಿದ್ದು, ಚಾಂಪಿಯನ್ಸ್ ಟ್ರೋಫಿಗೂ ಮೊದಲು ನಡೆದ ಈ ಘಟನೆ ಕ್ರೀಡಾ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಹಾಗೇ ಆಟಗಾರರು ಕೂಡ ಟೆನ್ಷನ್ ಆಗಿದ್ದಾರೆ. ಜನರು ಬೇಕಾಬಿಟ್ಟಿ ಮೈದಾನಕ್ಕೆ ನುಗ್ಗುತ್ತಿದ್ದು ಆಟಗಾರರ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮುಂಬರುವ ಪಂದ್ಯಗಳ ವೇಳೆಯಲ್ಲಿ ಸರಿಯಾದ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.