ನ್ಯೂಜಿಲೆಂಡ್ ವಿರುದ್ಧ ಸರ್ವಶ್ರೇಷ್ಠ ಗೆಲುವು – ಅದೆಷ್ಟು ದಾಖಲೆಗಳಿಗೆ ಸಾಕ್ಷಿಯಾಯ್ತು ‘ಮೋದಿ’ ಸ್ಟೇಡಿಯಂ?
ಶುಭ್ಮನ್ ಗಿಲ್ರ ಸಿಡಿಲಬ್ಬರದ ಬ್ಯಾಟಿಂಗ್.. ಬೌಲರ್ ಗಳ ಮ್ಯಾಜಿಕ್. ಟೀಂ ಇಂಡಿಯಾ ಆಟಗಾರರ ಆರ್ಭಟ ನಿನ್ನೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 168 ರನ್ಗಳ ಭರ್ಜರಿ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡ ಹೊಸ ಇತಿಹಾಸ ಬರೆದಿದೆ.
ಇದನ್ನೂ ಓದಿ : ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ – ಮುಷ್ಕರ ಅಂತ್ಯಗೊಳಿಸಿದ ಅಂಗನವಾಡಿ ಕಾರ್ಯಕರ್ತೆಯರು
ನ್ಯೂಜಿಲೆಂಡ್ ವಿರುದ್ಧ ನಿನ್ನೆ ನಡೆದ ಪಂದ್ಯ ಭಾರತದ ಪಾಲಿಗೆ ಸರ್ವಶ್ರೇಷ್ಠ ಗೆಲುವಾಗಿದೆ. ಈ ಹಿಂದೆ ಐರ್ಲೆಂಡ್ ವಿರುದ್ಧ 143 ರನ್ಗಳಿಂದ ಜಯ ಸಾಧಿಸಿದ್ದು ಇದುವೆರೆಗಿನ ಭಾರತದ ಭಾರೀ ಅಂತರದ ಗೆಲುವಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದು ಟೀಮ್ ಇಂಡಿಯಾ 168 ರನ್ಗಳ ಗೆಲುವಿನ ಹೊಸ ಮೈಲುಗಲ್ಲು ನೆಟ್ಟಿದೆ. ಜೊತೆಗೆ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ತಂಡವೊಂದರ ವಿರುದ್ಧ ಅತ್ಯಧಿಕ ರನ್ಗಳ ಅಂತರದಿಂದ ಗೆದ್ದ ತಂಡ ಎಂಬ ಹೆಗ್ಗಳಿಕೆಯೂ ಭಾರತದ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಪಾಕ್ ತಂಡದ ಹೆಸರಿನಲ್ಲಿತ್ತು.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ತಂಡವನ್ನು ಕೇವಲ 66 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಟೀಮ್ ಇಂಡಿಯಾ ಐತಿಹಾಸಿಕ ಜಯ ಸಾಧಿಸಿದೆ. ಈ ಮೂಲಕ 168 ರನ್ಗಳ ಭರ್ಜರಿ ಜಯ ಸಾಧಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಅದ್ರಲ್ಲೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ ಸಿಡಿಲಿನಂತೆ ಅಬ್ಬರಿಸಿ ರನ್ ಮಳೆಯನ್ನೇ ಹರಿಸಿದ್ದರು. ಜಸ್ಟ್ 63 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 12 ಫೋರ್ ಗಳೊಂದಿಗೆ ಅಜೇಯ 126 ರನ್ ಬಾರಿಸಿದ್ರು. ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡಿದ ಹಾರ್ದಿಕ್ ಪಾಂಡ್ಯ 4 ಓವರ್ಗಳಲ್ಲಿ ಕೇವಲ 16 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.
ಟೀಮ್ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿತು. 235 ರನ್ಗಳ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್ ಆಟಗಾರರನ್ನ ಕೇವಲ 66 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಆಟಗಾರರು ಆಲ್ ಔಟ್ ಮಾಡಿ ಗೆಲುವಿನ ನಗೆ ಬೀರಿದರು. ಈ ಮೂಲನ ನಿನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಯ್ತು.