ನಾನು ನಾನ್‌ವೆಜ್ ತಿಂದಿದ್ದು ಮರೆತಿದ್ದೆ ಎಂದ ಸಿ.ಟಿ ರವಿ – ಟ್ವೀಟ್ ಮೂಲಕ ಕಾಲೆಳೆದ ಸಿದ್ದರಾಮಯ್ಯ

ನಾನು ನಾನ್‌ವೆಜ್ ತಿಂದಿದ್ದು ಮರೆತಿದ್ದೆ ಎಂದ ಸಿ.ಟಿ ರವಿ – ಟ್ವೀಟ್ ಮೂಲಕ ಕಾಲೆಳೆದ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನೂಟ ತಿಂದು ಧರ್ಮಸ್ಥಳಕ್ಕೆ ಹೋಗಿದ್ದಾರೆ ಅನ್ನೋದನ್ನು ಬಿಜೆಪಿಯವರು ದೊಡ್ಡ ವಿವಾದ ಮಾಡಿದ್ರು. ಇದೀಗ ಇಂಥದ್ದೇ ವಿವಾದದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಸಿಲುಕಿದ್ದಾರೆ. ಸಿ.ಟಿ ರವಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದ ವೇಳೆ ಭಟ್ಕಳದ ಶಿರಾಲಿಯಲ್ಲಿ ಶಾಸಕ ಸುನೀಲ್ ನಾಯ್ಕ ಮನೆಯಲ್ಲಿ ಮೀನೂಟ ಸವಿದು ದೇವರ ದರ್ಶನ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ವಿರುದ್ಧ ಮುಗಿಬಿದ್ದಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಸುಳ್ಳು ಸುದ್ದಿಯನ್ನೇ ಪ್ರಚಾರ ಮಾಡಿ ನನ್ನನ್ನು ಹಿಂದೂ ವಿರೋಧಿ ಎಂದು @BJP4Karnataka ನಾಯಕರು ಪ್ರಚಾರ ಮಾಡಿದ್ದರು. ಆ ರೀತಿ ಅಪಪ್ರಚಾರ ಮಾಡಿದವರೆಲ್ಲರೂ ಈಗ @CTRavi_BJP ಅವರ ಕೃತ್ಯದಿಂದಾಗಿ ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:  ಮೀನೂಟ ತಿಂದು ದೇವಸ್ಥಾನಕ್ಕೆ ಹೋಗಿದ್ರಾ ಸಿ.ಟಿ ರವಿ ?- ಅದು ‘ಮೀನಲ್ಲ ಗೋಬಿ ಮಂಚೂರಿ’ ಎಂದ ಬಿಜೆಪಿ

ಸಿ.ಟಿ ರವಿ ಬಗ್ಗೆ ಮತ್ತೊಂದು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮಾಂಸ ತಿನ್ನುವುದು ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ವೈಯಕ್ತಿಕ ಆಯ್ಕೆಗಳು. ಇದು ರಾಜಕೀಯ ಚರ್ಚೆಯ ವಸ್ತು ಆಗಬಾರದು. ರಾಜಕೀಯ ನಾಯಕರು ಜನತೆಯ ಕಲ್ಯಾಣ, ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚಿಸಬೇಕು. ಪರದೂಷಣೆಯಲ್ಲಿ ನಿರತರಾಗಿರುವ @CTRavi_BJP ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ’ ಎಂದಿದ್ದಾರೆ.

ಫೆಬ್ರವರಿ 19 ರ ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಸಿ.ಟಿ ರವಿ ಕಾರವಾರದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಭಟ್ಕಳಕ್ಕೆ ಆಗಮಿಸಿದ್ದರು. ಈ ವೇಳೆ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಮೀನೂಟ ಸೇವಿಸಿದ್ದರು. ನಂತರ ಸಿ.ಟಿ ರವಿ ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

‘ನಾನು ನಾನ್​ವೆಜ್​ ತಿಂದಿದ್ದು ನಿಜ’-ಸಿ.ಟಿ ರವಿ

ನಾನು ನಾನ್​ವೆಜ್​ ತಿಂದಿದ್ದು ನಿಜ. ಆದರೆ ದೇವಸ್ಥಾನದ ಗರ್ಭ ಗುಡಿಗೆ ಹೋಗಲಿಲ್ಲ. ದೇವಸ್ಥಾನದ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ. ಎಲ್ಲವನ್ನೂ ಎದೆ ಬಗೆದು ತೊರಿಸಲು ನಾನು ಹನುಮಂತ ಅಲ್ಲ. ಕಾಂಗ್ರೆಸ್​ವರಂತೆ ನಾನು ತಿಂದು ಹೋಗಿದ್ದೆ ಏನ್ ಈಗ ಅಂತ ಹೇಳಲ್ಲ. ಕೆಲವು ವೆಜ್ ಮತ್ತು ನಾನ್​ವೆಜ್ ದೇವಸ್ಥಾನಗಳಿಗೆ ಅಲ್ಲಿಗೆ ಮಾಂಸಹಾರಿ ನೈವೇದ್ಯ ಮಾಡಲಾಗುತ್ತೆ. ಅಂಥ ದೇವಸ್ಥಾನಗಳಿಗೆ ಹೋಗಬಹುದು. ಆದ್ರೆ ನಾನು ನಾನ್​ವೆಜ್ ತಿಂದಿದ್ದೆ ಅನ್ನೋದನ್ನ ಮರೆತಿದ್ದೆ. ಅದು ನನ್ನ ಭೇಟಿಯ ಉದ್ದೇಶವಾಗಿರಲಿಲ್ಲ. ಅಲ್ಲಿನ ಸ್ಥಳೀಯರ ಅಪೇಕ್ಷೆ‌ ಮೇರಿಗೆ ಹೋಗಿದ್ದೆ. ಹೀಗಾಗಿ ನಾನು ದೇವಸ್ಥಾನ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ ಎಂದು ಸಿಟಿ ರವಿ ಸ್ಪಷ್ಟನೆ ನೀಡಿದ್ದಾರೆ.

suddiyaana