ದೆಹಲಿ ಚಲೋ ವೇಳೆ ಪೊಲೀಸರೊಂದಿಗೆ ಘರ್ಷಣೆ – ರೈತ ಸಾವು, 2 ದಿನಗಳ ಕಾಲ ಪ್ರತಿಭಟನೆ ತಾತ್ಕಾಲಿಕ ಸ್ಥಗಿತ
ಅನ್ನದಾತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದೆಹಲಿ ಚಲೋ ನಡೆಸುತ್ತಿದ್ದಾರೆ. ಚಳವಳಿ ನಡೆಯುತ್ತಿರುವಾಗ ರೈತರೊಬ್ಬರು ಸಾವನ್ನಪ್ಪಿದ್ದು, ರೈತರ ಪ್ರತಿಭಟನೆಯನ್ನು ಎರಡು ದಿನಗಳ ಕಾಲ ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಪಂಜಾಬ್-ಹರ್ಯಾಣದ ಎರಡು ಪ್ರತಿಭಟನಾ ಸ್ಥಳಗಳಲ್ಲಿ ಒಂದಾದ ಖಾನೌರಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಘರ್ಷಣೆ ಉಂಟಾಗಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಶುಭ್ ಕರಣ್ ಸಿಂಗ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಪಟಿಯಾಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಅವರಿಗೆ ಬುಲೆಟ್ಗಳು ತಗುಲಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಇನ್ನುಮುಂದೆ ಆ್ಯಂಬುಲೆನ್ಸ್ಗೆ ದಾರಿ ಬಿಡದಿದ್ರೆ ಬೀಳುತ್ತೆ 10 ಸಾವಿರ ರೂ. ದಂಡ!
ಖಾನೌರಿಯಿಂದ ನಮ್ಮ ಬಳಿಗೆ ಮೂವರು ರೋಗಿಗಳು ಬಂದಿದ್ದರು. ಅವರಲ್ಲಿ ಒಬ್ಬರು ಬರುವಾಗಲೇ ಮೃತಪಟ್ಟಿದ್ದರು. ಇನ್ನಿಬ್ಬರ ಆರೋಗ್ಯ ಸ್ಥಿರವಾಗಿದೆ ಬುಲೆಟ್ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ರೈತ ಮುಖಂಡ ಬಲದೇವ್ ಸಿಂಗ್ ಸಿರ್ಸಾ ಮಾತನಾಡಿ, ಮೃತರನ್ನು ಪಂಜಾಬ್ನ ಬಟಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ನಿವಾಸಿ ಶುಭಕರಣ್ ಸಿಂಗ್ (21) ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಕೃಷಿ ಸಚಿವ ಅರ್ಜುನ್ ಮುಂಡಾ ಮಾತನಾಡಿ, ಪ್ರತಿಭಟನಾ ನಿರತ ರೈತರನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಐದನೇ ಸುತ್ತಿನ ಮಾತುಕತೆಗೆ ಆಹ್ವಾನಿಸಿದ್ದಾರೆ. ಎಂಎಸ್ಪಿಯಾಗಲಿ, ಬೆಳೆ ವೈವಿಧ್ಯತೆಯಾಗಲಿ ಎಲ್ಲ ವಿಷಯಗಳ ಕುರಿತು ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದರು. ಸಂವಾದದ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು. ಅವರನ್ನು ಚರ್ಚೆಗೆ ಆಹ್ವಾನಿಸಿದ್ದೇನೆ ಎಂದರು.