ಡಾ.ಸಿಂಗ್.. ಕಿಂಗ್ ಆಗಿದ್ದೇಗೆ?- ಮೌನದಲ್ಲೇ ‘ಆರ್ಥಿಕ ಕ್ರಾಂತಿ’!
ಎಲೆಕ್ಷನ್ನೇ ಗೆಲ್ಲದ ಸರ್ದಾರ್ ಜಿ!!
ಮನಮೋಹನ್ ಸಿಂಗ್ ಹೇಳಲು ಆಗದಷ್ಟು ಕೊಡುಗೆಯನ್ನ ಭಾರತಕ್ಕೆ ನೀಡಿದ್ದಾರೆ. ಆರ್‌ಬಿಐ ಗವರ್ನರ್ ಆಗಿ, ಅರ್ಥಶಾಸ್ತ್ರಜ್ಞ, ಹಣಕಾಸು ಸಚಿವ ಹಾಗೂ ಪ್ರಧಾನಿಯಾಗಿ ಅವರು ದೇಶಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಪ್ರಧಾನಿಯಾಗಿ 10 ವರ್ಷಗಳ ಕಾಲ ಅವರ ಆಡಳಿತದಲ್ಲಿ ಭಾರತ ಹಲವು ಪ್ರಮುಖ ಸಾಧನೆಗಳನ್ನು ಮಾಡಿತ್ತು.
ದೇಶದ ಆರ್ಥಿಕತೆಗೆ ಹೊಸ ತಿರುವು ನೀಡಿದ ಸಿಂಗ್
1991ರಲ್ಲಿ ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಹಳ್ಳಹಿಡಿದಿತ್ತು. ಪಿವಿ ನರಸಿಂಹರಾವ್ ಅವರಿಗೂ ಹಿಂದೆ ಪ್ರಧಾನಿಯಾಗಿದ್ದ ಚಂದ್ರಶೇಖರ್ ಅವರು ಚಿನ್ನವನ್ನು ವಿದೇಶದಲ್ಲಿ ಅಡವಿಟ್ಟು ಬಂದಿದ್ದರು. ಭಾರತದ ಕೈಯಲ್ಲಿ ಆಗ ಇದ್ದದ್ದು 1 ಶತಕೋಟಿ ಡಾಲರ್ ವಿದೇಶಿ ವಿನಿಮಯದ ಮೀಸಲು ನಿಧಿ ಮಾತ್ರ. 15 ದಿನಗಳಲ್ಲಿ ದೇಶ ದಿವಾಳಿಯಾಗುವ ಸ್ಥಿತಿ ತಲುಪಿತ್ತು. ಇಂತಹ ಹೊತ್ತಿನಲ್ಲಿ ಕೇಂದ್ರ ಕೇಂದ್ರ ಹಣಕಾಸು ಸಚಿವನಾಗುವಂತೆ ಆಗಿನ ಪ್ರಧಾನಿ ಪಿವಿ ನರಸಿಂಹರಾವ್ ಅವರು ಡಾ. ಮನಮೋಹನ್ ಸಿಂಗ್‌ರನ್ನು ಆಹ್ವಾನಿಸಿದ್ದರು. ಒಂದು ಕಡೆ ಆತಂಕ. ಆದರೆ ಸಿಂಗ್ ಹಿಂದೆ ಮುಂದೆ ನೋಡಲಿಲ್ಲ. ವಿತ್ತ ಸಚಿವನಾಗಿ ಅಧಿಕಾರ ಸ್ವೀಕರಿಸಿಬಿಟ್ಟರು. ನೆಹರೂ ಯುಗಕ್ಕೆ ಸಂಬಂಧಿಸಿದ ಸಮಾಜವಾದಿ ಆರ್ಥಿಕತೆಯ ನಿರ್ಬಂಧಗಳಿಂದ ಭಾರತೀಯ ಆರ್ಥಿಕತೆಯನ್ನು ಹೊರ ತರಲು ದಿಟ್ಟ ಹೆಜ್ಜೆ ಇಟ್ಟರು. 1991ರಲ್ಲಿ ಭಾರತವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಯಿತು. ವಿದೇಶಿ ವಿನಿಮಯದ ಕೊರತೆ, ಚಲಾವಣೆಯ ಕುಸಿತ, ಮತ್ತು ಉನ್ನತ ದರದ ದೇಣಿಗೆಯ ಜವಾಬ್ದಾರಿ ಸರ್ಕಾರದ ಮೇಲೆ ಹೊರೆಯಾಗಿತ್ತು. ಇಂತಹ ಸಮಯದಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯವಾಗಿತ್ತು. ಆರ್ಥಿಕ ಸಂಕಷ್ಟದಲ್ಲಿದ್ದ ಭಾರತವನ್ನು 1991ರ ಬಜೆಟ್ ಮೂಲಕ ಅಂದಿನ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಪಾರು ಮಾಡಿದರು. 1991ರ ಬಜೆಟ್ ಅನ್ನು ಭಾರತೀಯ ಇತಿಹಾಸದಲ್ಲಿ ದೇಶದ ಆರ್ಥಿಕತೆಗೆ ಹೊಸ ತಿರುವು ನೀಡಿದ ಬಜೆಟ್ ಎಂದು ಕರೆಯಲಾಗುತ್ತದೆ.
ಅತ್ಯಧಿಕ ಜಿಡಿಪಿ ದರ ಸಾಧಿಸಿದ ಪ್ರಧಾನಿ
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಜಿಡಿಪಿ ಅತಿ ವೇಗದಲ್ಲಿ ಪ್ರಗತಿ ಹೊಂದಿತ್ತು. 2006- 2007ರಲ್ಲಿ ಜಿಡಿಪಿ ಶೇ.10.08ರ ದರದಲ್ಲಿ ಪ್ರಗತಿ ಹೊಂದಿತ್ತು. ಅದೇ ರೀತಿ 2009ರಲ್ಲಿ ಜಿಡಿಪಿ ದರ ಶೇ.9ಕ್ಕೆ ತಲುಪಿತ್ತು. ಆ ಮೂಲಕ ಭಾರತ ಅತಿ ವೇಗದಲ್ಲಿ ಬೆಳೆಯುತ್ತಿರುವ ವಿಶ್ವದ 2ನೇ ದೊಡ್ಡ ಆರ್ಥಿಕತೆ ಎನಿಸಿಕೊಂಡಿತ್ತು.
ರಾ.ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿ
ಮನಮೋಹನ್ ಸಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆಗಳ ಉದ್ಯೋಗ ಖಾತ್ರಿ ಯೋಜನೆ ಕೂಡಾ ಒಂದಾಗಿದೆ. ಬಡವರಿಗೆ ಜೀವನಾಧಾರ ಕಲ್ಪಿಸಲು ಮತ್ತು ಗ್ರಾಮೀಣ ಜನತೆಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೆ ತಂದಿತು. ಇಂದು ಲಕ್ಷಾಂತರ ಮಂದಿ ಈ ಯೋಜನೆ ಫಲಾನುಭವಿಗಳಾಗಿದ್ದಾರೆ.
ನೋಟುಗಳ ಮೇಲೆ ಮನಮೋಹನ್ ಸಿಂಗ್ ಸಹಿ
ರಿಸರ್ವ್ ಬ್ಯಾಂಕ್ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷ, ಆರ್ಥಿಕ ವ್ಯವಹಾರಗಳ ಸಮಿತಿಯ ಅಧ್ಯಕ್ಷ, ಪ್ರಧಾನಿಗೆ ಆರ್ಥಿಕ ಸಲಹೆಗಾರ ಇತ್ಯಾದಿ ಆಗಿ ಸೇವೆ ಮಾಡಿದ್ದರು. ಆರ್ಥಿಕ ವಿಷಯದಲ್ಲಿ ಅತ್ಯಂತ ಸ್ಪಷ್ಟತೆ ಹೊಂದಿದ್ದ ಅವರು ಈ ವಿಷಯದಲ್ಲಿ ಎಂಥ ದೊಡ್ಡವರ ಮೂಗುತೂರಿಸುವಿಕೆಯನ್ನು ಇಷ್ಟಪಡುತ್ತಿರಲಿಲ್ಲ. 1982 ರಿಂದ 1985ರವರೆಗೆ ಮನಹೋನ್ ಸಿಂಗ್ ಆರ್‌ಬಿಐ ಗವರ್ನರ್ ಆಗಿದ್ದರು. ಈ ಕಾಲಾವಧಿಯಲ್ಲಿ ಮುದ್ರಿತವಾದ ನೋಟುಗಳ ಮೇಲೆ ಮನಮಹೋನ್ ಸಿಂಗ್ ಸಹಿ ಇದೆ.
ಭಾರತ ಅಮೆರಿಕ ಪರಮಾಣು ಒಪ್ಪಂದ
ಭಾರತ ಮತ್ತು ಅಮೆರಿಕ ಮಧ್ಯೆ ಹಲವಾರು ವರ್ಷಗಳಿಂದ ಕಗ್ಗಂಟಾಗಿ ಉಳಿದ್ದ ಪರ ಮಾಣು ಒಪ್ಪಂದಕ್ಕೆ ಸಹಿ ಬಿದ್ದಿದ್ದು ಮನಮೋಹನ್ ಸಿಂಗ್ ಅವರ ಕಾಲದಲ್ಲಿ. ಅಣ್ವಸ್ತ್ರವನ್ನು ನಾಗರಿಕ ಉದ್ದೇಶಕ್ಕೆ ಬಳಸುವ ಬಗ್ಗೆ ಮನಮೋಹನ್ ಸಿಂಗ್ ಹಾಗೂ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲೂ ಬುಷ್ 2005 ಜುಲೈ 18ರಂದು ಸಹಿ ಹಾಕಿದರು. ಅಲ್ಲದೇ ಭಾರತ ಮತ್ತು ಅಮೆರಿಕ ಶಾಂತಿಯುತ ಅಣು ಇಂಧನ ಸಹಕಾರ ಒಪ್ಪಂದಕ್ಕೂ ಸಹಿ ಹಾಕಲಾಯಿತು.
ಪೋಲಿಯೋ ಮುಕ್ತ ರಾಷ್ಟ್ರ
ವಿಶ್ವವನ್ನು ದಶಕಗಳ ಕಾಲ ಕಾಡಿದ್ದ ಪೊಲೀಯೋ ರೋಗದಿಂದ ಭಾರತ ಮುಕ್ತವಾಗಿದ್ದು ಡಾ. ಸಿಂಗ್ ಅವಧಿಯಲ್ಲೇ. 2012ರಲ್ಲಿ ಭಾರತ ಪೋಲಿಯೋ ಮುಕ್ತ ರಾಷ್ಟ್ರ ಎಂದು ವಿಶ್ವ ಸಂಸ್ಥೆ ಘೋಷಣೆ ಮಾಡಿತು. 2009ರಲ್ಲಿ 741 ಮಂದಿ ಪೋಲಿಯೋಗೆ ತುತ್ತಾಗಿದ್ದರೆ, 2010ರಲ್ಲಿ ಅದರ ಸಂಖ್ಯೆ 42ಕ್ಕೆ ಇಳಿದಿತ್ತು. ಮುಂದಿನ ವರ್ಷ ಶೂನ್ಯಕ್ಕಿಳಿದಿತ್ತು. 2011ರ ಜನವರಿಯಿಂದ ಈ ವರೆಗೆ ದೇಶದಲ್ಲಿ ಪೋಲಿಯೋ ಕಂಡು ಬಂದಿಲ್ಲ.
ಏರಿಳಿತದ ಬಾಲ್ಯ ಕಂಡ ಮನಮೋಹನ್ ಸಿಂಗ್
ಮನಮೋಹನರ ಬಾಲ್ಯ ಅನೇಕ ಏರಿಳಿತಗಳಿಂದ ಕೂಡಿತ್ತು. ತಾಯಿ ಟೈಫಾಯಿಡ್‌ಗೆ ಬಲಿಯಾದರು. ಮನಮೋಹನ್ ಸಿಂಗ್ ತಂದೆ ಒಂದು ಸಣ್ಣ ವ್ಯಾಪಾರದ ವಹಿವಾಟು ಇಟ್ಟುಕೊಂಡಿದ್ದರು. ತಾಯಿ ತೀರಿದ ಬಳಿಕ ಮನಮೋಹನ್ ತಂದೆಯ ಕಡೆಯ ಅಜ್ಜ-ಅಜ್ಜಿ ಮನೆಯಲ್ಲಿ, ಓದಬೇಕಾಗಿ ಬಂತು. ಅಪ್ಪನಿಗೆ ಮಗನ ಮೇಲೆ ಪ್ರೀತಿ ಇತ್ತು. ಆದರೂ ಆತ ಮಗುವನ್ನು ಅಜ್ಜಿಯ ಮನೆಯಲ್ಲಿ ಬಿಟ್ಟ ಮೇಲೆ ನೋಡಲು ಬಂದದ್ದು, ಅದೂ ಹತ್ತು ವರ್ಷಗಳ ಅವಧಿಯಲ್ಲಿ ಕೇವಲ ಎರಡೇ ಸಲ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇರಲಿಲ್ಲ. ಗ್ರಾಮದಲ್ಲಿ ಶಾಲೆಯೂ ಇರಲಿಲ್ಲ. ದೂರದ ಶಾಲೆಗೆ ಹೋಗಲು ಮನಮೋಹನ್ ಸಿಂಗ್ ಬರಿಗಾಲಲ್ಲಿ ಮೈಲುಗಟ್ಟಲೆ ನಡೆದುಕೊಂಡು ಹೋಗುತ್ತಿದ್ದರು. ಅವರ ಮನೆಗೆ ವಿದ್ಯುತ್ ಸಂಪರ್ಕ ಸಹ ಇರಲಿಲ್ಲ. ಹೀಗಾಗಿ ಬೀದಿ ದೀಪದ ಕೆಳಗೆ ಕೂತು ಸಿಂಗ್ ಓದುತ್ತಿದ್ದರು.
ಬರಾಕ್ ಒಬಾಮಾಗೆ ಸಿಂಗ್ ಅಂದ್ರೆ ಅಚ್ಚುಮೆಚ್ಚು
ಮನಮೋಹನ್ ಸಿಂಗ್ ಅವರ ಆಡಳಿತ ಹಾಗೂ ಅವರ ಆರ್ಥಿಕ ನೀತಿಗಳನ್ನು ದೇಶದ ರಾಜಕಾರಣಿಗಳು ಮಾತ್ರವಲ್ಲದೇ ವಿವಿಧ ದೇಶದ ಪ್ರಧಾನಿಗಳು, ರಾಜಕಾರಣಿಗಳು ಒಪ್ಪಿಕೊಂಡಿದ್ದರು. ವಿಶ್ವದ ದೊಡ್ಡಣ್ಣ ಎಂದೇ ಕರೆಯುವ ಅಮೆರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರು, ಮನಮೋಹನ್ ಸಿಂಗ್ ಅವರೊಂದಿಗೆ ಕೆಲಸ ಮಾಡುವುದು ನನಗೆ ಇಷ್ಟ. ನಾನು ನನ್ನ ಜೀವನದಲ್ಲಿ ಕೆಲವೇ ಕೆಲವರನ್ನು ಮೆಚ್ಚಿರುವುದು ಎಂದು ಹೇಳಿದ್ದರು.
ಹಲವು ವಿಶ್ವವಿದ್ಯಾಲಯಗಳಲ್ಲಿ ಪುಸ್ತಕ, ಪಠ್ಯ
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸೇರಿದಂತೆ ಜಗತ್ತಿನ ಹಲವು ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಮನಮೋಹನ್ ಸಿಂಗ್ ಅವರ ನೀತಿಗಳು, ಜೀವನ ಕುರಿತು ಪಠ್ಯ, ಪುಸ್ತಕಳನ್ನು ಅರ್ಥಶಾಸ್ತ್ರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಗೆದ್ದಿಲ್ಲ ಡಾ. ಸಿಂಗ್
ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಡಾ. ಮನಮೋಹನ್ ಸಿಂಗ್ 33 ವರ್ಷಗಳ ರಾಜಕೀಯ ಪಯಣದಲ್ಲಿ ಕೇವಲ ಒಂದೇ ಒಂದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎನ್ನುವ ವಿಚಾರ ಅಚ್ಚರಿ ಹುಟ್ಟಿಸುವಂಥದ್ದು. ಎರಡು ಬಾರಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ್ದ ಮನಮೋಹನ್ ಸಿಂಗ್ ಒಂದು ಬಾರಿಯೂ ಲೋಕಸಭೆ ಚುನಾವಣೆ ಗೆದ್ದಿಲ್ಲ ಎಂಬುದು ಗಮನಾರ್ಹ. ಒಮ್ಮೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ನಂತರ ಅವರು ಮತ್ತೆ ಚುನಾವಣೆ ಕಡೆ ಮುಖ ಮಾಡಲಿಲ್ಲ. ಎಲ್ಲಾ ಅವಧಿಯಲ್ಲೂ ರಾಜ್ಯಸಭೆಯಿಂದಲೇ ಆಯ್ಕೆಯಾಗಿ ಹೋದದ್ದು ಅವರ ರಾಜಕೀಯ ಜೀವನದ ಇತಿಹಾಸ. ಮನಮೋಹನ್ ಸಿಂಗ್ ಹಿಂದಿ ಮಾತನಾಡಬಲ್ಲರು. ಆದರೆ, ಹಿಂದಿ ಭಾಷೆಯ ಲಿಪಿಯನ್ನು ಓದಲು ಅವರಿಂದ ಆಗುತ್ತಿರಲಿಲ್ಲ. ಅದಕ್ಕಾಗಿಯೇ ಪ್ರಧಾನಿಯಾಗಿದ್ದಾಗ ಅವರ ಭಾಷಣಗಳನ್ನು ಉರ್ದುವಿನಲ್ಲಿ ಬರೆಯಲಾಗುತ್ತಿತ್ತು. ಏಕೆಂದರೆ ಉರ್ದುವಿನಲ್ಲಿ ಅವರು ಪ್ರವೀಣರಾಗಿದ್ದರು.