ಜಗತ್ತಿನ ಅತ್ಯಂತ ಶ್ರೀಮಂತ ದೇಶ ದಿವಾಳಿ ಎದ್ದ ಕಥೆ – ಶೇಕಡಾ 95 ರಷ್ಟು ಅಲ್ಲಿನ ಜನರಿಗೆ ಕಾಡುತ್ತಿದೆ ಬೊಜ್ಜಿನ ಸಮಸ್ಯೆ..!

ಜಗತ್ತಿನ ಅತ್ಯಂತ ಶ್ರೀಮಂತ ದೇಶ ದಿವಾಳಿ ಎದ್ದ ಕಥೆ – ಶೇಕಡಾ 95 ರಷ್ಟು ಅಲ್ಲಿನ ಜನರಿಗೆ ಕಾಡುತ್ತಿದೆ ಬೊಜ್ಜಿನ ಸಮಸ್ಯೆ..!

ಜಗತ್ತಿನಲ್ಲಿ ಅಧಿಕ ತೂಕದ ಜನರು ಇರೋ ದೇಶ ಯಾವುದಿರಬಹುದು.. ಅಮೇರಿಕ ಅಲ್ಲಾ.. ಬ್ರಿಟನ್ ಕೂಡ ಅಲ್ಲ.. ಭಾರತ ಅಂತೂ ಅಲ್ವೇ ಅಲ್ಲ.. ಆದರೆ ಅತೀ ಹೆಚ್ಚು ತೂಕದ ಮನುಷ್ಯರಿರುವ ಈ ರಾಷ್ಟ್ರ ಜಗತ್ತಿನಲ್ಲೇ ಅತ್ಯಂತ ಕಡಿಮೆ ಜನಸಂಖ್ಯೆಯನ್ನ ಹೊಂದಿರುವ ಸಣ್ಣ ದೇಶ..ಅಬ್ಬಬ್ಬಾ ಅಂದ್ರೂ 10000 ಕ್ಕಿಂತ ಜಾಸ್ತಿ ಜನರು ಈ ದೇಶದಲ್ಲಿ ಇಲ್ಲ. ದಕ್ಷಿಣ ಪೆಸಿಫಿಕ್‌ನಲ್ಲಿರುವ ಚಿಕ್ಕ ದ್ವೀಪ ರಾಷ್ಟ್ರವಾಗಿರುವ ನೌರು ಜಗತ್ತಿನ highest obesity rate ಇರುವ ದೇಶವಾಗಿ ಗುರುತಿಸಿಕೊಂಡಿದೆ. ನಿಮಗೆ ಗೊತ್ತಾ..ನೌರು ದೇಶದ ಶೇಕಡಾ 94.5 ರಷ್ಟು ಜನ ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಅಂದರೆ 10000 ದಲ್ಲಿ ಸುಮಾರು 9400 ಜನರು obesity ಸಮಸ್ಯೆಯಲ್ಲಿ ಇದ್ದಾರೆ. ಅತೀ ಹೆಚ್ಚು ಟೈಪ್ 2 ಮಧುಮೇಹ ಕಾಯಿಲೆಗಳಿಂದ ಬಳಲುತ್ತಿರುವ ದೇಶ ಅನ್ನೋ ಕುಖ್ಯಾತಿ ಕೂಡಾ ಈ ದೇಶಕ್ಕೆ ಇದೆ. 10000 ಕ್ಕಿಂತ ಜಾಸ್ತಿ ಜನರು ಇಲ್ಲದ ನೌರು ಇವತ್ತು ಜಗತ್ತಿನ obesity rate ನಲ್ಲಿ ಮುಂದಿದೆ. ಹಾಗಿದ್ರೆ ಅದಿಕ್ಕೆ  ಕಾರಣವಾದ್ರೂ ಏನು ಗೊತ್ತಾ.. ಈ ಬಗ್ಗೆ ವಿಸ್ತ್ರತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ನೀವು ಬಳಸುವ ಅಡುಗೆ ಎಣ್ಣೆ ಬಗ್ಗೆ ಎಚ್ಚರ! – ಜಾಹೀರಾತಿಗೆ ಮಾರು ಹೋದರೆ ಕಾದಿದೆ ಅಪಾಯ – ನಿಮಗಾಗಿ ಇಲ್ಲಿದೆ ವಿಸ್ತ್ರತ ಮಾಹಿತಿ..!

ಆ ದೇಶದಲ್ಲಿ ಜನ ಅಧಿಕ ತೂಕದಿಂದ ಬಳಲುತ್ತಿರುವುದಕ್ಕೆ ಶತಮಾನದಿಂದ  ನಡೆಯುತ್ತಿದ್ದ ಮೈನಿಂಗ್.!  ನೌರು ದೇಶದಲ್ಲಿ ನಡೆಯುತ್ತಿದ್ದ ಫಾಸ್ಫೇಟ್ ಮೈನಿಂಗ್  ನಿಂದಾಗಿ ಅಲ್ಲಿಯ ಜನ ಅಧಿಕ ತೂಕ ಹಾಗೇ ಬೊಜ್ಜಿನ ಸಮಸ್ಯೆಯನ್ನ ಎದುರಿಸುತ್ತಾ ಇದ್ದಾರೆ. ಹಾಗಿದ್ರೆ ಮೈನಿಂಗ್ ಗೂ ಒಬೆಸಿಟಿ ಗೂ ಇರೋ ಸಂಬಂಧವಾದ್ರೂ ಏನೂ..ಅಂದ ಹಾಗೇ ಈ ಸ್ಟೋರಿ ಇದೂ ಕೇವಲ ನೌರು ದೇಶದ ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿರುವ ಕಥೆಯಲ್ಲಾ..ಯಾಕಂದ್ರೆ ನೌರು ದೇಶದ ಬಗ್ಗೆ ಇನ್ನೊಂದು ಇಂಟರೆಸ್ಟ್ ಸಂಗತಿಯಿದೆ. ಒಂದು ಕಾಲದಲ್ಲಿ  ಜಿಡಿಪಿ ಪ್ರಕಾರ ಜಗತ್ತಿನ ಎರಡನೇ ಶ್ರೀಮಂತ ದೇಶವಾಗಿದ್ದ ನೌರು ಇವತ್ತು ದೇಶಕ್ಕೆ ದೇಶವೇ ದಿವಾಳಿ ಎದ್ದಿದೆ.. ಆದ್ರೆ ಇದಿಕ್ಕೂ ಕಾರಣ ಏನೂ ಗೊತ್ತಾ.. ಅದೇ ಫಾಸ್ಫೇಟ್ ಮೈನಿಂಗ್! ಇವತ್ತಿನ ಈ ಎಪಿಸೋಡ್ ನಲ್ಲಿ ಒಂದು ಕಾಲದಲ್ಲಿ ಶ್ರೀಮಂತವಾಗಿದ್ದ, ಸಂಪದ್ಭರಿತವಾಗಿದ್ದ ನೌರು ದೇಶ ಮುಂದೆ ಯಾವ ರೀತಿಯಲ್ಲಿ ದಿವಾಳಿ ಏಳುತ್ತೆ… ಅನಾರೋಗ್ಯಕ್ಕೆ ಒಳಗಾಗುತ್ತೆ ಅನ್ನುವ ಕುರಿತಾದ ವೆರಿ ಇಂಟೆರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ನೌರು ದೇಶ, ದಕ್ಷಿಣ ಪೆಸಿಫಿಕ್‌ನಲ್ಲಿರುವ ಚಿಕ್ಕ ದ್ವೀಪ ರಾಷ್ಟ್ರ. 1798 ರಲ್ಲಿ ಮೊದಲ ಬಾರಿಗೆ ಯುರೋಪಿಯನ್ನರು ಈ ದೇಶವನ್ನ ಕಂಡುಹಿಡೀತಾರೆ. ಬ್ರಿಟಿಷ್ ಹಡಗು ನೌರು ದ್ವೀಪ ರಾಷ್ಟ್ರದಲ್ಲಿ ಒಮ್ಮೆ ಅಪಘಾತಕ್ಕೆ ಒಳಗಾಗುತ್ತೆ. ಆ ಸಂದರ್ಭದಲ್ಲಿ ಯುರೋಪಿಯನ್ನರಿಗೆ  ಸುಂದರವಾಗಿದ್ದ ನೌರು ದೇಶ ಕಣ್ಣಿಗೆ ಬೀಳುತ್ತೆ. ಅತ್ಯಂತ ಪುಟ್ಟ ದೇಶ ಅದಾಗಿತ್ತು.. ಹಾಗಿದ್ರು ದೇಶದ ಸಂಪತ್ತಿಗೆ  ಏನೂ ಕೊರತೆ ಇರಲಿಲ್ಲ. ಮೀನು, ತೆಂಗಿನಕಾಯಿ ಅಲ್ಲಿಯ ಮುಖ್ಯ ಆಹಾರ ಪದಾರ್ಥವಾಗಿತ್ತು. ಹಾಗಾಗಿ ಯುರೋಪಿಯನ್ನರ ಕಣ್ಣು ನೌರು ದೇಶದ ಮೇಲೆ ಬಿತ್ತು. 1798, ವಸಾಹತುಶಾಹಿ ಆಕ್ರಮಣದ ಸಮಯ ಅದಾಗಿತ್ತು..ಮುಂದೆ ಹಲವು ದಶಕಗಳ ವರೆಗೆ ನೌರು ದೇಶ ಪಾಶ್ಚಿಮಾತ್ಯ ರಾಷ್ಟ್ರಗಳ ವಸಾಹತುಶಾಹಿಗಳ ಆಕ್ರಮಣಕ್ಕೆ ಒಳಗಾಗುತ್ತೆ. 1830 ರ ಸುಮಾರಿಗೆ, ಯುರೋಪಿಯನ್ ಜನರು ಹಡಗುಗಳು ಮೂಲಕ ಬಂದು ನೌರು ಜೊತೆ ವ್ಯಾಪಾರ ಪ್ರಾರಂಭಿಸುತ್ತವೆ. ಅಲ್ಲಿಯ ಅತ್ಯಮೂಲ್ಯ ಆಹಾರ ಸಂಪತ್ತಿನ ಬದಲಾಗಿ ದ್ವೀಪದ ನಿವಾಸಿಗಳಿಗೆ ಬಂದೂಕುಗಳು ಮತ್ತು ಮದ್ಯವನ್ನು ನೀಡುತ್ತವೆ. ಬಂದೂಕುಗಳು ಮತ್ತು ಮದ್ಯವೂ ದ್ವೀಪವನ್ನು ಬಹುತೇಕ ನಾಶಮಾಡಿತು, ಇವುಗಳ ಪ್ರಭಾವದಿಂದ 1878 ರ ಅವಧಿಯಲ್ಲಿ ಅಲ್ಲಿ ಹತ್ತು ವರ್ಷಗಳ ಕಾಲ  ಅಲ್ಲಿಯ ಸಮುದಾಯದ ಒಳಗೇ ನೌರು ನಾಗರಿಕ ಯುದ್ಧವೇ ನಡೆದು ಹೋಗುತ್ತೆ. ಇದರಿಂದಾಗಿ ನೌರು ಜನಸಂಖ್ಯೆಯ ಅರ್ಧದಷ್ಟು ಜನ ಕಡಿಮೆಯಾಗುತ್ತೆ. ಅಂತಿಮವಾಗಿ ಶಾಂತಿಯನ್ನು ಬಯಸಿ ಮದ್ಯವನ್ನು ನಿಷೇಧಿಸಲಾಯಿತು, ಹಾಗೇ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಯಿತು. 1888 ರಲ್ಲಿ ಗ್ರೇಟ್ ಬ್ರಿಟನ್ ಒಪ್ಪಂದದ ಪ್ರಕಾರ ನೌರು ಜರ್ಮನಿ ಆಡಳಿತಕ್ಕೆ ಹೋಗುತ್ತೆ. ಜರ್ಮನಿ ಯ ಆಳ್ವಿಕೆ ಪ್ರಾರಂಭವಾಗುತ್ತದೆ. ಆ ಹಂತದಲ್ಲಿ ಜರ್ಮನಿ ಸರ್ಕಾರ ಅಲ್ಲಿಯ ಎಲ್ಲಾ ಬುಡಕಟ್ಟು ಜನಾಂಗದ ಮುಖ್ಯಸ್ಥರನ್ನ ಗೃಹ ಬಂಧನದಲ್ಲಿ ಇರಿಸಿ ದ್ವೀಪದ ಎಲ್ಲಾ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು. ಜರ್ಮನ್ ಧ್ವಜವನ್ನು ಏರಿಸಲಾಯಿತು ಮತ್ತು ದ್ವೀಪವನ್ನು ಮರುನಾಮಕರಣ ಮಾಡಲಾಯಿತು.ಹೀಗೆ ಅಲ್ಲಿ ಜರ್ಮನಿ ಸರ್ಕಾರದ ಆಳ್ವಿಕೆ ಶುರುವಾಗುತ್ತೆ. 1900 ಸುಮಾರಿಗೆ ನೌರು ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬದಲಾಯಿಸುವಂತ ಮಹಾ ಸಂಪತ್ತನ್ನ ಜರ್ಮನಿ ಸರ್ಕಾರ ಕಂಡು ಕೊಳ್ಳುತ್ತೆ..ಅದುವೇ ಅಲ್ಲಿರುವಂತಹ ಫಾಸ್ಫೇಟ್ ಖನಿಜ!

ಹಾಗಾಗಿ ನೌರು ಆ ಕಾಲದ ದೊಡ್ಡ ವಸಾಹತುಶಾಹಿ ಶಕ್ತಿಗಳಿಗೆ ಹೆಚ್ಚಿನ ಆಸಕ್ತಿಯ ದೇಶವಾಗಿ ಕಂಡುಬಂತು. 1906 ರ ಹೊತ್ತಿಗೆ, ಪೆಸಿಫಿಕ್ ಫಾಸ್ಫೇಟ್ ಕಂಪನಿಯು ಜರ್ಮನಿಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತೆ, ಅದು ದ್ವೀಪದ ಫಾಸ್ಫೇಟ್ ನಿಕ್ಷೇಪವನ್ನ ಸಂಪೂರ್ಣ ಬಳಕೆಗೆ ಅವಕಾಶ ಮಾಡಿಕೊಟ್ಟಿತು, ಹಾಗಾಗಿ ಫಾಸ್ಫೇಟ್ ಮೈನಿಂಗ್ ಯಾವ ರೀತಿ ನಡೆಯುತ್ತೆ ಅಂದ್ರೆ ಸಂಪನ್ಮೂಲಗಳು ಖಾಲಿಯಾಗುವವರೆಗೂ ಮುಂದುವರಿಯುತ್ತದೆ. ಆದರೆ ನಂತರ ಮೊದಲ ಮಹಾಯುದ್ಧ ಶುರುವಾಗುತ್ತೆ. ಮಹಾಯುದ್ಧದ ಸಮಯದಲ್ಲಿ, ಆಸ್ಟ್ರೇಲಿಯಾವು ದ್ವೀಪವನ್ನು ಸ್ವಾಧೀನಪಡಿಸಿಕೊಂಡಿತು. ಬ್ರಿಟಿಷ್ ಫಾಸ್ಫೇಟ್ ಕಮಿಷನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜೊತೆಗೆ ನೌರು ದ್ವೀಪ ಒಪ್ಪಂದವನ್ನು ಮಾಡಿಕೊಂಡಿತು. ಇದು ನೌರುನ ಫಾಸ್ಫೇಟ್ ನಿಕ್ಷೇಪಗಳಿಗೆ ಗಣಿ ಗಾರಿಕೆ ಮಾಡಲು ಪ್ರವೇಶವನ್ನು ನೀಡಿತು.

ಎರಡನೆಯ ಮಹಾಯುದ್ಧದ ಸಮಯದಲ್ಲಿ ನೌರು ಕೆಟ್ಟದಾಗಿ ಹಾನಿಗೊಳಗಾಯಿತು. ಹಡಗುಗಳು ಮುಳುಗಿದವು ಮತ್ತು ಫಾಸ್ಫೇಟ್ ಗಣಿಗಾರಿಕೆ ಪ್ರದೇಶಗಳಿಗೆ ಶೆಲ್ ಹಾಕಲಾಯಿತು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಫಾಸ್ಫೇಟ್ ಸಾಗಣೆಯನ್ನು ನಿಲ್ಲಿಸಲಾಯಿತು. 1942 ರಲ್ಲಿ, ನೌರು ನಿಯಂತ್ರಣವನ್ನು ಜಪಾನ್ ವಶಪಡಿಸಿಕೊಳ್ಳುತ್ತೆ. ಜಪಾನಿನ ಪಡೆಗಳು ದ್ವೀಪವಾಸಿಗಳನ್ನು ಕೆಟ್ಟದಾಗಿ ನಡೆಸಿಕೊಂಡವು, ಸುಮಾರು 1,200 ನೌರು ನಿವಾಸಿಗಳನ್ನ ಚುಕ್ ದ್ವೀಪಗಳಿಗೆ ಕಾರ್ಮಿಕರಾಗಿ ಕಳುಹಿಸಿದವು. ಜಪಾನಿನ ಆಕ್ರಮಣವು 1945 ರವರೆಗೆ ನಡೆಯಿತು, ಮುಂದೆ ನೌರು ಆಸ್ಟ್ರೇಲಿಯಾಕ್ಕೆ ಶರಣಾಯಿತು. ಹೀಗೆ ನೌರು ದೇಶ ವಸಾಹತುಶಾಹಿ ಆಕ್ರಮಣಕ್ಕೆ ಒಳಗಾಗಿ ಒಳಗಾಗಿ ಕೊನೆಗೇ ನೌರುವನ್ನು 1968 ರಲ್ಲಿ ಸ್ವತಂತ್ರಗೊಳಿಸಲಾಯಿತು.

ಹೀಗೆ ನೌರು ವಿಶ್ವದ ಅತ್ಯಂತ ಚಿಕ್ಕ ಸ್ವತಂತ್ರ ದೇಶವಾಗಿ ರೂಪಿತವಾಗುತ್ತೆ. ವಸಾಹತುಶಾಹಿಗಳು ಬಿಟ್ಟು ಹೋದ ಸ್ವಲ್ಪವೇ ಉಳಿದಂತ ಫಾಸ್ಪೇಟ್ ಗಣಿ ಮಾತ್ರ ಸ್ವತಂತ್ರ ನೌರು ದೇಶಕ್ಕೆ ಪಾಲಿಗೆ ಸಿಕ್ಕಿತ್ತು . ಹಾಗಾಗಿ ನೌರು ದೇಶ ಮುಂದೆ ಫಾಸ್ಪೇಟ್ ಗಣಿಗಾರಿಕೆಯನ್ನೇ ತಮ್ಮ ಉದ್ಯಮವಾಗಿ ಮಾಡಿಕೊಂಡಿತ್ತು. 10000 ಕ್ಕಿಂತ ಜಾಸ್ತಿ ಏರದ ಜನ. ಹಾಗಾಗಿ ಪ್ರತಿಯೊಬ್ಬರೂ ಇದೊಂದೇ ಉದ್ಯಮದ ಮೇಲೆ ಅವಲಂಬಿತರಾಗುತ್ತಾರೆ. ಫಾಸ್ಫೇಟ್ ಅನ್ನು ಮಾರಾಟ ಮಾಡುವ ಮೂಲಕ ನೌರು ಎರಡನೇ ಶ್ರೀಮಂತ ರಾಷ್ಟ್ರವಾಯಿತು. ಈ ಅವಧಿಯಲ್ಲಿ ನೌರು ಅಭಿವೃದ್ಧಿ ಹೊಂದಿತು. ಸುಮಾರು 10,000 ಜನಸಂಖ್ಯೆಯನ್ನು ಹೊಂದಿರುವ ದೇಶಕ್ಕಾಗಿ ಸರ್ಕಾರವು ಏರ್ಪೋರ್ಟ್ ಸಹ ಸ್ಥಾಪಿಸಿತು. ಒಂದು ಹಂತದಲ್ಲಿ ನೌರು ದೇಶ ತನ್ನ 10000 ಜನರಿಗೋಸ್ಕರ ಏಳು ವಿಮಾನಗಳನ್ನು ಕೂಡಾ ಹೊಂದಿತ್ತು. ಆದರೆ ತನ್ನ ಭವಿಷ್ಯದ ಆರ್ಥಿಕ ವ್ಯವಸ್ಥೆಯ ಕುರಿತಾಗಿ ದೇಶ ಯಾವುದೇ ಯೋಜನೆಯನ್ನು ಕೂಡಾ ಕೈಗೊಂಡಿರಲಿಲ್ಲ. ಜನರು ತಮ್ಮ ಕೆಲಸವನ್ನು ತೊರೆದು ಕಾರುಗಳನ್ನು ಖರೀದಿಸಿದರು, ಕ್ಷಣದ ಖುಷಿಯೇ ಮುಖ್ಯ ಅನ್ನುವ ಮಟ್ಟಿಗೆ ಜನರ ಜೀವನ ಶೈಲಿ ಬದಲಾಯಿತು. ಒಂದು ಹಂತದಲ್ಲಿ ಡಾಲರ್ ನೋಟುಗಳನ್ನೇ ಟಾಯ್ಲೆಟ್ ಪೇಪರ್ ಆಗಿ ಉಪಯೋಗಿಸ್ತಾ ಇದ್ದರಂತೆ.. ಪ್ರತಿ ದಿನವೂ ಪಾರ್ಟಿ ದಿನದಂತೆ ಇತ್ತು. ಫಾಸ್ಫೇಟ್ ಗಣಿಗಾರಿಕೆಯಿಂದ ಬರುವ ಆದಾಯದಿಂದ ಪಾಶ್ಚಿಮಾತ್ಯ ಆಹಾರಗಳನ್ನು ಆಮದು ಮಾಡಿಕೊಳ್ಳುವ ಪರಿಣಾಮವಾಗಿ ಒಬೆಸಿಟಿ ರೇಟ್ ಹೆಚ್ಚಾಗಿದೆ. ಅಲ್ಲಿಯ ಅತ್ಯಂತ ಜನಪ್ರಿಯ ಆಹಾರವೆಂದರೇ ಫ್ರೈಡ್ ಚಿಕನ್ ಮತ್ತು ಕೋಲಾ.  ಕೇವಲ ಸಂಸ್ಕರಿಸಿದ ಆಹಾರವನ್ನೇ ತಿನ್ನುತ್ತಿರುವ ನೌರು ದೇಶದ ನಿವಾಸಿಗಳ ಜೀವನ ಶೈಲಿ ಅಲ್ಲಿ ಬದಲಾಗಿತ್ತು. ನೌರುನ ಫಾಸ್ಫೇಟ್ ಉದ್ಯಮವು ಹೆಚ್ಚುತ್ತಿತ್ತು. ಆದರೆ ಭವಿಷ್ಯದ ಆರ್ಥಿಕ ವ್ಯವಸ್ಥೆಯ ಬಗ್ಗೆ ಯಾವುದೇ ಪ್ಲಾನ್ ಇಲ್ಲದ ನೌರು ದೇಶ ಎಲ್ಲಿ ವರೆಗೆ ಈ ಶ್ರೀಮಂತಿಕೆಯನ್ನ ಅನುಭವಿಸಬಹುದಿತ್ತು..! ಯಾಕಂದ್ರೆ ನೌರು ದೇಶದ ಅವನತಿ ಅಲ್ಲಿಂದಲೇ ಪ್ರಾರಂಭವಾಗಿತ್ತು ನೋಡಿ.. 20 ನೇ ಶತಮಾನದ ಅಂತ್ಯದ ವೇಳೆಗೆ ಫಾಸ್ಫೇಟ್ ನಿಕ್ಷೇಪಗಳು ಖಾಲಿಯಾಗುತ್ತಾ ಬಂದವು. 2006 ರ ಹೊತ್ತಿಗೆ ನೌರು ಯಾವುದೇ  ಆದಾಯದ ಮೂಲವಿಲ್ಲದೆ  ಪಾಳುಭೂಮಿಯಾಗಿ ಕಂಡುಬರುತ್ತೆ. ನೌರು ಈ ಹೊತ್ತಿಗೆ  ದೇಶವೇ ದಿವಾಳಿ ಹೋಗುವಂತಹ ಆರ್ಥಿಕ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ.

ಹೀಗಾಗಿ ವಿದೇಶಿ ಕಂಪನಿಗಳಿಂದ ಸುಮಾರು ಒಂದು ಶತಮಾನದ ಫಾಸ್ಫೇಟ್ ಗಣಿಗಾರಿಕೆಯಿಂದ ಆದ ಹಾನಿಯನ್ನು ಸರಿದೂಗಿಸಲು ನೌರು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳುತ್ತೆ.. ಹಾಗೇ ಅಲ್ಲಿ ನ್ಯಾಯಾಲಯದಲ್ಲಿ ನೌರು ದೇಶ ಜಯಗೊಳ್ಳುತ್ತೆ ಕೂಡಾ..ಆಸ್ಟ್ರೇಲಿಯಾವು 20 ವರ್ಷಗಳವರೆಗೆ ವಾರ್ಷಿಕವಾಗಿ $2.6 ಮಿಲಿಯನ್ ಪಾವತಿಸಲು ಮುಂದಾಯಿತು ಮತ್ತು ನ್ಯೂಜಿಲೆಂಡ್ ಮತ್ತು ಯುಕೆ ತಲಾ $12 ಮಿಲಿಯನ್‌ಗಳ  ಪಾವತಿಗಳನ್ನು ಮಾಡಿದವು. ಆದರೆ ಆ ಹಣವು  ನೌರು ದೇಶಕ್ಕೆ ಸಾಕಾಗೋದಿಲ್ಲ..21 ನೆ ಶತಮಾನದ ಹೊತ್ತಿಗೆ, ನೌರು ಪೂರ್ತಿಯಾಗಿ ದಿವಾಳಿಯಾಯಿತು. ಅದೇ ಸಮಯಕ್ಕೆ ಕೇವಲ ಸಂಸ್ಕರಿಸಿದ ಆಹಾರ ವನ್ನೇ ತಿನ್ನುತ್ತಿದ್ದರಿಂದ ತಮ್ಮ ಆಹಾರ ಶೈಲಿಯ ಪ್ರಭಾವ ಅಲ್ಲಿ ಶುರುವಾಗುತ್ತೆ. ಜನರು ಅಧಿಕ ತೂಕ, ಬೊಜ್ಜಿನಂತಹ ಸಮಸ್ಯೆ ಎದುರಿಸೋದಿಕ್ಕೇ ಪ್ರಾರಂಭವಾಗುತ್ತೆ. ಅಲ್ಲಿಯ ನಿವಾಸಿಗಳ BMI ಅಂದರೆ body mass index 34-35 ರಲ್ಲಿ ಇರುತ್ತೆ. ಸಾಮಾನ್ಯವಾಗಿ ಒಬ್ಬ ಆರೋಗ್ಯಕರ ವ್ಯಕ್ತಿಯ BMI 18.5 to 24.9 ರೇಂಜ್ ನಲ್ಲಿ ಇರಬೇಕು. ಆದರೆ ನೌರು ದೇಶದ ನಿವಾಸಿಗಳ BMI ಒಬೆಸಿಟಿ ಹಂತಕ್ಕೆ ತಲುಪಿದ್ದು ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಒಬೆಸಿಟಿ ರೇಟ್ ವುಳ್ಳ ದೇಶ ಎಂಬ ಹಣೆಪಟ್ಟಿಯನ್ನ ಕಟ್ಟಿಕೊಳ್ಳುತ್ತೆ. ಒಂದು ಕಾಲದಲ್ಲಿ ಮೀನು, ತೆಂಗಿನಕಾಯಿ, ಹಣ್ಣುಗಳನ್ನ ತಿನ್ನುತ್ತಾ ತಮ್ಮದೇ ಪಾಡಿನಲ್ಲಿದ್ದ ನೌರು ದೇಶ  colonialism ಗೆ ಒಳಗಾಗಿ ಮುಂದೆ phosphate ಉದ್ಯಮದ ಮೂಲಕ ಜಗತ್ತಿನ ಶ್ರೀಮಂತ ದೇಶವಾಗಿ ರೂಪುಗೊಂಡರೂ ದೇಶದ ಭವಿಷ್ಯದ ಬಗ್ಗೆ ಯಾವುದೇ ದೂರದೃಷ್ಟಿ ಇಟ್ಟುಕೊಳ್ಳದೇ ದಿವಾಳಿ ಎದ್ದ ಜಗತ್ತಿನ ಅತ್ಯಂತ ಪುಟ್ಟ ದ್ವೀಪ ರಾಷ್ಟ್ರ ನೌರು ಇವತ್ತು ದುರಂತ ಕಥೆಗಳಲ್ಲಿ ಒಂದಾಗಿದೆ.

 

Sulekha