ಗಿಲ್ ಚೊಚ್ಚಲ ಸೆಂಚುರಿ, ಶತಕ ಸಿಡಿಸಿದ ಪೂಜಾರ – ಬಾಂಗ್ಲಾಕ್ಕೆ 512 ರನ್‌ಗಳ ಟಾರ್ಗೆಟ್
ಮೂರು ವರ್ಷಗಳ ಬಳಿಕ ಶತಕದ ಬರ ನೀಗಿಸಿಕೊಂಡ ಚೇತೇಶ್ವರ ಪೂಜಾರ
ಚಟ್ಟೋಗ್ರಾಮ್ : ಚಟ್ಟೋಗ್ರಾಮ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ಲ್ಲಿ ಭಾರತದ ಇಬ್ಬರು ಆಟಗಾರರು ಶತಕ ಸಿಡಿಸಿದ್ದಾರೆ. ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಶತಕ ಸಿಡಿಸಿದ್ದಾರೆ. ಗಿಲ್ ಈ ಹಿಂದೆ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಶತಕ ವಂಚಿತರಾಗಿದ್ದರು. 147 ಎಸೆತಗಳಲ್ಲಿ ಶತಕ ಪೂರೈಸಿದ ಗಿಲ್, 10 ಬೌಂಡರಿ ಹಾಗೂ 2 ಸಿಕ್ಸರ್ ಕೂಡ ಬಾರಿಸಿದರು. ಅದರಲ್ಲೂ 90 ರ ಗಡಿ ದಾಟಿದ ನಂತರವೂ ನಿರ್ಭೀತಿಯ ಬ್ಯಾಟಿಂಗ್ ಮಾಡಿದ ಗಿಲ್, ತಮ್ಮ ವೈಯಕ್ತಿಕ ಸ್ಕೋರ್ 95 ರಲ್ಲಿ ರಿವರ್ಸ್ ಸ್ವೀಪ್ ಆಡಿ ಬೌಂಡರಿ ಬಾರಿಸಿದರು. ಅಲ್ಲದೆ ಶತಕಕ್ಕೆ ಇನ್ನೊಂದು ರನ್ ಬೇಕಿರುವಾಗಲು ಧೃತಿಗೆಡದ ಗಿಲ್, ಮುಂದೆ ಹೋಗಿ ಲಾಂಗ್ ಆನ್ನಲ್ಲಿ ಫೋರ್ ಹೊಡೆದು, ಶತಕದ ಸಂಭ್ರಮಾಚರಣೆ ಮಾಡಿದರು. ಎರಡನೇ ಇನಿಂಗ್ಸ್‌ನ 32ನೇ ಓವರ್‌ನಲ್ಲಿ ಗಿಲ್ ವಿರುದ್ಧ ಎಲ್ಬಿಡಬ್ಲ್ಯೂಗೆ ಮನವಿ ಮಾಡಲಾಗಿತ್ತು. ಆದರೆ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ನಂತರ ಬಾಂಗ್ಲಾದೇಶ ಡಿಆರ್‌ಎಸ್ ತೆಗೆದುಕೊಂಡಿತು. ಆದರೆ ತಾಂತ್ರಿಕ ದೋಷದಿಂದ ಆ ಸಮಯದಲ್ಲಿ ಡಿಆರ್‌ಎಸ್ ಲಭ್ಯವಿರಲಿಲ್ಲ. ಹೀಗಾಗಿ ಗಿಲ್‌ಗೆ ಒಂದು ಜೀವದಾನ ಸಿಕ್ಕಿತು. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡ ಗಿಲ್ ಶತಕ ಸಿಡಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ : ‘ಗೋಲ್ಡನ್ ಬೂಟ್’ ಯಾರಿಗೆ ?- ಮೆಸ್ಸಿ, ಎಂಬಪ್ಪೆ ನಡುವೆ ‘ಅದೃಷ್ಟ’ದ ಸೆಣಸಾಟ
ಬರೋಬ್ಬರಿ ಮೂರು ವರ್ಷಗಳ ಬಳಿಕ ಚೇತೇಶ್ವರ ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದಾರೆ. ಅದು ಕೂಡಾ ತಮ್ಮ ಟೆಸ್ಟ್ ವೃತ್ತಿಜೀವನದ ಅತಿವೇಗದ ಶತಕ ದಾಖಲಿಸುವಲ್ಲಿ ಪೂಜಾರ ಯಶಸ್ವೀಯಾಗಿದ್ದಾರೆ. 130 ಎಸೆತಗಳಲ್ಲಿ 13 ಬೌಂಡರಿ ಸಹಿತ ಅಜೇಯ 102 ರನ್ ಗಳಿಸಿದ್ದಾರೆ.
ಈ ಶತಕದ ಮೂಲಕ ಪೂಜಾರ 52 ಇನ್ನಿಂಗ್ಸ್‌ಗಳ ನಂತರ ತಮ್ಮ ಶತಕದ ಬರ ನೀಗಿಸಿಕೊಂಡಿದ್ದಾರೆ. ಅಲ್ಲದೆ ಇದು ಅವರ ಟೆಸ್ಟ್ ವೃತ್ತಿ ಬದುಕಿನ 19ನೇ ಶತಕವೂ ಆಗಿದೆ. ಕೊನೆಯದಾಗಿ 2019 ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೂಜಾರ ಶತಕ ಬಾರಿಸಿದ್ದರು. ಅಂದಿನಿಂದ ಅವರು ಶತಕಕ್ಕಾಗಿ ಹಾತೊರೆಯುತ್ತಿದ್ದರು. . ಈ ಟೆಸ್ಟ್ ನ ಮೊದಲ ಇನ್ನಿಂಗ್ಸ್ ಲ್ಲೂ ಶತಕದಂಚಿನಲ್ಲಿ ಎಡವಿದ್ದ ಪೂಜಾರ 90 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ, ಎರಡನೇ ಇನ್ನಿಂಗ್ಸ್ ಲ್ಲಿ ಸೆಂಚುರಿ ಬಾರಿಸಿ ಮಿಂಚಿದ್ದಾರೆ. ಪೂಜಾರ ಶತಕ ಪೂರೈಸಿದ ಕೂಡಲೇ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಬಾಂಗ್ಲಾದೇಶಕ್ಕೆ 512 ರನ್‌ಗಳ ಟಾರ್ಗೆಟ್ ನೀಡಿದೆ.