ಉರಿಗೌಡ, ನಂಜೇಗೌಡರೇ ಟಿಪ್ಪುವನ್ನ ಕೊಂದರಾ – ಮಂಡ್ಯ ಪುಸ್ತಕದಲ್ಲಿ ಸಿಕ್ಕಿತಾ ಸಾಕ್ಷಿ..?
ಮಂಡ್ಯ ರಣಕಣದಲ್ಲಿ ಹುಟ್ಟಿಕೊಂಡ ‘ಉರಿಗೌಡ ನಂಜೇಗೌಡ’ ಹೆಸರು ಈಗ ರಾಜ್ಯ ರಾಜಕೀಯದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಇವ್ರೇ ಟಿಪ್ಪುವನ್ನ ಕೊಂದಿದ್ದು ಅಂತಾ ಬಿಜೆಪಿ ನಾಯಕರು ಡಂಗೂರ ಬಾರಿಸುತ್ತಿದ್ದಾರೆ. ಆದರೆ ಇತಿಹಾಸದಲ್ಲಿ ಈ ಹೆಸರುಗಳೇ ಇಲ್ಲ. ಇವರಿಬ್ಬರು ಯಾರೆಂದೇ ಯಾರಿಗೂ ಗೊತ್ತಿಲ್ಲ ಎಂದು ವಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವರಿಬ್ಬರು ಇದ್ದಿದ್ದು ಸತ್ಯ ಎಂದು ನಿನ್ನೆಯಷ್ಟೇ ಲಾವಣಿಯೊಂದರ ಆಡಿಯೋ ರಿಲೀಸ್ ಮಾಡಿದ್ರು. ಇದೀಗ ಪುಸ್ತಕದಲ್ಲಿ ಇಬ್ಬರ ಹೆಸರು ಉಲ್ಲೇಖಿಸಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ :ಉರಿಗೌಡ-ನಂಜೇಗೌಡ ಹೆಸರಿನಲ್ಲಿ ಸಿನಿಮಾ ಮಾಡಲು ನೋಂದಣಿ – ಸಿಡಿದೆದ್ದ ಒಕ್ಕಲಿಗ ಯುವಬ್ರಿಗೇಡ್!
ಪ್ರಧಾನಿ ನರೇಂದ್ರ ಮೋದಿ(Narendra Modi) ಮಂಡ್ಯಕ್ಕೆ ಆಗಮಿಸಿದ್ದ ವೇಳೆ ಉರಿಗೌಡ-ನಂಜೇಗೌಡ(Uri Gowda Nanje Gowda) ಹೆಸರಿನಲ್ಲಿ ಮಹಾದ್ವಾರ ನಿರ್ಮಾಣ ಮಾಡಲಾಗಿತ್ತು. ಟಿಪ್ಪು ಕೊಂದಿದ್ದ ಒಕ್ಕಲಿಗರ ಸೇನಾನಿಗಳು ಇವರು ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ಇದಾದ ಬಳಿಕ ಕಾಂಗ್ರೆಸ್, ಜೆಡಿಎಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಉರಿಗೌಡ-ನಂಜೇಗೌಡ ಕಪೋಲ ಕಲ್ಪಿತ ಪಾತ್ರಗಳು ಎಂದಿದ್ದರು. ಈಗ ಮತ್ತೆ ಮಂಡ್ಯದಲ್ಲಿ ಉರಿಗೌಡ, ದೊಡ್ಡನಂಜೇ ಗೌಡ ವಿಚಾರ ಮುನ್ನಲೆಗೆ ಬಂದಿದೆ. 2006ರಲ್ಲಿ ಪರಿಷ್ಕೃತ ಆವೃತ್ತಿಯ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ-ನಂಜೇಗೌಡರ ಹೆಸರು ದಾಖಲಾಗಿದೆ.
ಪ್ರೊ.ಜಯಪ್ರಕಾಶ್ ಗೌಡರ ಪರಿಶ್ಕೃತ ಆವೃತ್ತಿಯ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ-ನಂಜೇಗೌಡರ ಹೆಸರು ಪ್ರಸ್ತಾಪ ಮಾಡಲಾಗಿದೆ. ಡಾ.ದೇ ಜವರೇಗೌಡರ ಸಂಪಾದಕತ್ವದಲ್ಲಿ 2006ರಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ. 500 ಪುಟಗಳ ಗ್ರಂಥವಾಗಿರುವ ಇದು ಮಂಡ್ಯದ ಇತಿಹಾಸವನ್ನ ಸಾರುವ ಪುಸ್ತಕವಾಗಿದೆ. ಮಂಡ್ಯ ಜಿಲ್ಲೆ ರಚನೆಯಾಗಿ 1989 ಕ್ಕೆ 50 ವರ್ಷಗಳು ಕಳೆದ ಹಿನ್ನೆಲೆ ಈ ಪುಸ್ತಕ ರಚನೆಯಾಗಿತ್ತು. ಬಳಿಕ 1994 ರಲ್ಲಿ ನಡೆದ 63 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುವರ್ಣ ಮಂಡ್ಯ ಪುಸ್ತಕವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಪುಸ್ತಕದಲ್ಲಿ ಟಿಪ್ಪುವನ್ನ ಕೊಂದಿದ್ದು ಉರಿಗೌಡ ನಂಜೇಗೌಡ ಎಂಬ ವಿಚಾರ ಪ್ರಸ್ತಾಪವಾಗಿಲ್ಲ. ಟಿಪ್ಪು ವಿರುದ್ಧ ಉರಿಗೌಡ ಮತ್ತು ನಂಜೇಗೌಡ ಸೆಟೆದು ನಿಂತರು ಎಂದು ಹೇಳಲಾಗಿದೆ.