ಇನ್ಮುಂದೆ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುವಂತಿಲ್ಲ! – ರೂಲ್ಸ್ ಬ್ರೇಕ್ ಮಾಡಿದ್ರೆ ಫೈನ್ ಫಿಕ್ಸ್!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೆ ಹೆಚ್ಚಾಗ್ತಿದೆ. ಸಿಕ್ಕ ಸಿಕ್ಕವರ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿವೆ. ಆದ್ರೂ ಕೂಡ ಜನರು ಬೀದಿ ನಾಯಿಗಳಿಗೆ ಸಿಕ್ಕ ಸಿಕ್ಕಲ್ಲಿ ಆಹಾರ ಹಾಕುತ್ತಿದ್ದಾರೆ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೀದಿನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕುವುದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಇದೀಗ ಅಧಿಕೃತ ಆಹಾರ ಕೇಂದ್ರಗಳನ್ನು ಗುರುತಿಸಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಗೆ ಕೇಂದ್ರದಿಂದ ಗುಡ್‌ನ್ಯೂಸ್ – ಮೆಟ್ರೋ ನಗರಗಳ ಪಟ್ಟಿಗೆ ಸೇರಿದ ಬೆಂಗಳೂರು
ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕಲಾಗುತ್ತಿದೆ. ಇದ್ರಿಂದಾಗಿ ಬೀದಿ ನಾಯಿಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಇದೀಗ ಶ್ವಾನಪ್ರಿಯರು ಮತ್ತು ಸಾರ್ವಜನಿಕರ ನಡುವಿನ ಸಂಘರ್ಷವನ್ನು ತಪ್ಪಿಸಲು ಹಾಗೂ ಸ್ವಚ್ಛತೆಯನ್ನು ಕಾಪಾಡಲು ಜಿವಿಎ ಹೊಸ ಪ್ಲ್ಯಾನ್ ಮಾಡಿದೆ.ಇದೀಗ ಬೀದಿ ನಾಯಿಗಳಿಗೆ ಆಹಾರ ಹಾಕಲು ಅಧಿಕೃತ ಆಹಾರ ಕೇಂದ್ರಗಳನ್ನು ಗುರುತಿಸಿದೆ. GBA ಅಡಿಯಲ್ಲಿ ಬರುವ ಐದೂ ನಗರ ಪಾಲಿಕೆಗಳಲ್ಲಿ ಪಶುಪಾಲನಾ ಇಲಾಖೆಯು ಒಟ್ಟು 450 ಅಧಿಕೃತ ಆಹಾರ ಕೇಂದ್ರಗಳನ್ನು ಗುರುತಿಸಿದೆ.
ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಈ ಗುರುತಿಸಲಾದ ಸ್ಥಳಗಳಲ್ಲಿ ಶ್ವಾನಗಳಿಗೆ ಆಹಾರ ನೀಡುವ ಸ್ಥಳ ಎಂಬ ಫಲಕಗಳನ್ನು ಅಳವಡಿಸಲಾಗುವುದು. ಅಧಿಕೃತ ಸ್ಥಳಗಳನ್ನು ಬಿಟ್ಟು ರಸ್ತೆಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವ ಕಡೆಗಳಲ್ಲಿ ಆಹಾರ ನೀಡಿದರೆ ದಂಡ ವಿಧಿಸಲು GBA ನಿರ್ಧರಿಸಿದೆ. ಆಹಾರ ನೀಡುವವರು ಆ ಜಾಗವನ್ನು ಸ್ವಚ್ಛವಾಗಿಡಬೇಕು ಮತ್ತು ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಆಹಾರ ನೀಡಬೇಕು ಎಂದು ತಿಳಿಸಿದ್ದಾರೆ.
ಈ ನಿರ್ಧಾರಕ್ಕೆ ಶ್ವಾನಪ್ರಿಯರು ಮತ್ತು ಪ್ರಾಣಿ ಹಕ್ಕು ಹೋರಾಟಗಾರರಿಂದ ಅಸಮಾಧಾನ ವ್ಯಕ್ತವಾಗಿದೆ. ನಾಯಿಗಳು ‘ಟೆರಿಟೋರಿಯಲ್’ ಪ್ರವೃತ್ತಿ ಹೊಂದಿದ್ದು, ಒಂದು ಏರಿಯಾದ ನಾಯಿಗಳು ಮತ್ತೊಂದು ಏರಿಯಾಕ್ಕೆ ಹೋಗಿ ಆಹಾರ ಸೇವಿಸುವುದಿಲ್ಲ. ಹೀಗಾಗಿ, ಎಲ್ಲೋ ಒಂದು ಕಡೆ ಪಾಯಿಂಟ್ ಗುರುತಿಸುವುದು ನಾಯಿಗಳ ನಡುವೆ ಕಾದಾಟಕ್ಕೆ ಮತ್ತು ಹಸಿವಿನಿಂದ ಅವುಗಳ ಆಕ್ರೋಶಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಪಾಲಿಕೆ ವ್ಯಾಪ್ತಿ ಆಹಾರ ಕೇಂದ್ರಗಳ ಸಂಖ್ಯೆ
ಬೆಂಗಳೂರು ಪೂರ್ವ – 150
ಬೆಂಗಳೂರು ಕೇಂದ್ರ – 90
ಬೆಂಗಳೂರು ಪಶ್ಚಿಮ – 85
ಬೆಂಗಳೂರು ಉತ್ತರ – 70
ಬೆಂಗಳೂರು ದಕ್ಷಿಣ – 68

ನೋಡಿರಿ

