ಹಾಂಕಾಂಗ್‌ ಓಪನ್‌ ಬಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ಗೆ ಭಾರತ – ಸಾತ್ವಿಕ್‌, ಚಿರಾಗ್‌ ರೋಚಕ ಹೋರಾಟ

ಹಾಂಕಾಂಗ್‌ ಓಪನ್‌ ಬಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ಗೆ ಭಾರತ – ಸಾತ್ವಿಕ್‌, ಚಿರಾಗ್‌ ರೋಚಕ ಹೋರಾಟ

ಪ್ರಸ್ತುತ ನಡೆಯುತ್ತಿರುವ 2025ರ ಹಾಂಕಾಂಗ್‌ ಓಪನ್‌  ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ ಫೈನಲ್‌ಗೆ ಪ್ರವೇಶ ಮಾಡಿದೆ. ಶನಿವಾರ ನಡೆದಿದ್ದ ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಏಷ್ಯನ್‌ ಗೇಮ್ಸ್‌  ಚಿನ್ನದ ಪದಕ ವಿಜೇತ ಜೋಡಿ, ತೈವಾನ್‌ನ ಚೆನ್‌ ಚೆಂಗ್‌ ಕ್ಯೂನ್‌ ಮತ್ತು ಲಿನ್‌ ಬಿಂಗ್‌ ವೀ ಜೋಡಿಯನ್ನು 21-17, 21-15ರ ನೇರ ಗೇಮ್‌ಗಳಲ್ಲಿ ಮಣಿಸಿತು. ಆ ಮೂಲಕ 38 ನಿಮಿಷಗಳ ಕಾಲ ನಡೆದಿದ್ದ ಈ ಪಂದ್ಯದಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ ಪ್ರಾಬಲ್ಯ ಸಾಧಿಸಿತು. ಪ್ರಸಕ್ತ ವರ್ಷದಲ್ಲಿ ಈ ಜೋಡಿ ಮೊದಲ ಬಾರಿ ಫೈನಲ್‌ಗೆ ಪ್ರವೇಶ ಮಾಡಿದಂತಾಗಿದೆ.

ಇದನ್ನೂ ಓದಿ: ಕರ್ಫ್ಯೂ, ನಿಷೇಧಾಜ್ಞೆ ವಾಪಸ್ – ಸಹಜ ಸ್ಥಿತಿಯತ್ತ ಮರುಳುತ್ತಿರೋ ನೇಪಾಳ

2024ರ ಥಾಯ್ಲೆಂಡ್‌ ಓಪನ್‌ ಬಳಿಕ ಇದೇ ಮೊದಲ ಬಾರಿ ಸಾತ್ವಿಕ್‌-ಚಿರಾಗ್‌ ಫೈನಲ್‌ಗೆ ಪ್ರವೇಶ ಮಾಡಿದಂತಾಗಿದೆ. ಈ ವರ್ಷದ ಆರಂಭದಲ್ಲಿ ಐದು ಸೆಮಿಫೈನಲ್ಸ್‌ ಹಣಾಹಣಿಗಳಲ್ಲಿ ಭಾರತದ ಜೋಡಿ ಸೋಲು ಅನುಭವಿಸಿತ್ತು. ಇದೀಗ ತಮ್ಮ ಆರನೇ ಪ್ರಯತ್ನದಲ್ಲಿ ಸಾತ್ವಿಕ್‌-ಚಿರಾಗ್‌ ಪ್ರಶಸ್ತಿ ಸುತ್ತಿಗೆ ಪ್ರವೇಶ ಮಾಡಿದಂತಾಗಿದೆ. ಕಳೆದ ಕೆಲ ತಿಂಗಳುಗಳಲ್ಲಿ ಪ್ರಶಸ್ತಿ ಗೆಲುವಿನ ಹಾದಿಯನ್ನು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡಿದ್ದ ಭಾರತದ ಜೋಡಿ, ಇದೀಗ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಮೂಡಿಸಿದೆ.

ಸೆಮಿಫೈನಲ್‌ ಪಂದ್ಯದ ಮೊದಲನೇ ಗೇಮ್‌ನಲ್ಲಿ ಭಾರತ ಹಾಗೂ ತೈವಾನ್‌ ಜೋಡಿಗಳ ನಡುವೆ ಭಾರಿ ಪೈಪೋಟಿ ನಡೆದಿತ್ತು. ಆದರೆ, ಸಾತ್ವಿಕ್‌ ಮತ್ತು ಚಿರಾಗ್‌ ಜೋಡಿ ಕೊನೆಯವರೆಗೂ ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಈದರ ಫಲವಾಗಿ ಭಾರತದ ಜೋಡಿ 21-17ರ ಅಂತರದಲ್ಲಿ ಚೆನ್‌ ಚೆಂಗ್‌ ಮತ್ತು ಲಿನ್‌ ಬಿಂಗ್‌ ಜೋಡಿಯ ಅಧಿಕಾರಯುತ ಗೆಲುವನ್ನು ತನ್ನದಾಗಿಸಿಕೊಂಡಿತು. ನಂತರ ಎರಡನೇ ಗೇಮ್‌ನಲ್ಲಿಯೂ ಅದೇ ಲಯವನ್ನು ಮುಂದುವರಿಸಿದ ಭಾರತದ ಜೋಡಿ 21-15 ಅಂತರದಲ್ಲಿ ಗೆಲುವು ಪಡೆಯಿತು. ಆ ಮೂಲಕ ಫೈನಲ್‌ಗೆ ಪ್ರವೇಶ ಮಾಡಿದೆ.

Kishor KV