ರೊನಾಲ್ಡೋ ಬೆಂಚಲ್ಲಿ ಕೂರಿಸಿದ ಪೋರ್ಚುಗಲ್ ಔಟ್‌- ಕೋಚ್‌ಗೆ ಫುಟ್ಬಾಲ್ ಪಾಠ ಹೇಳಿದ ವಿಶ್ವಶ್ರೇಷ್ಠ ಆಟಗಾರನ ಗರ್ಲ್‌ಫ್ರೆಂಡ್‌!

ಕತಾರ್‌ : ಫಿಫಾ ವರ್ಲ್ಡ್‌ಕಪ್‌ ಒಮ್ಮೆಯಾದರೂ ಎತ್ತಿ ಹಿಡಿಯಬೇಕು ಎಂಬ ಫುಟ್‌ಬಾಲ್‌ನ ದಂತಕತೆ ಕ್ರಿಶ್ಚಿಯಾನೋ ರೊನಾಲ್ಡೋ ಕನಸು ಭಗ್ನವಾಗಿದೆ. ಇನ್ನೆಂದೂ ಓರ್ವ ಆಟಗಾರನಾಗಿ ಫಿಫಾ ವಿಶ್ವಕಪ್‌ ಎತ್ತಿಹಿಡಿಯುವ ಅವಕಾಶವನ್ನೇ ರೊನಾಲ್ಡೋ ಕಳೆದುಕೊಂಡಿದ್ದಾರೆ. ಮೊದಲಾರ್ಧದಲ್ಲಿ ವಿಶ್ವಶ್ರೇಷ್ಠ ಆಟಗಾರನನ್ನು ಫೀಲ್ಡ್‌ಗಿಳಿಸದೆ ಬೆಂಚ್‌ ಕಾಯಿಸಿದ್ದ ಕೋಚ್‌ ನಿರ್ಧಾರಕ್ಕೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಫಿಪಾ ವಿಶ್ವಕಪ್‌ ಕ್ವಾರ್ಟರ್ ಫೈನಲ್‌ನಲ್ಲಿ ಶನಿವಾರ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಏಕೈಕ ಗೋಲ್‌ನಿಂದ ಮೊರಾಕ್ಕೋ ಬಲಿಷ್ಠ ಪೋರ್ಚುಗಲ್ ತಂಡವನ್ನು ಮಣಿಸಿ ಚಾರಿತ್ರಿಕ ಸಾಧನೆ ಮಾಡಿದೆ. ಇದರೊಂದಿಗೆ ಮೊರಾಕ್ಕೋ ತಂಡ ಸೆಮಿಫೈನಲ್‌ ಪ್ರವೇಶಿಸಿದೆ. ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌ ತಂಡಕ್ಕೆ ಶಾಕ್‌ ನೀಡಿದ್ದ ಮೊರಕ್ಕೋ, ಕ್ವಾರ್ಟರ್‌ ಫೈನಲ್‌ನಲ್ಲಿ ಪೋರ್ಚುಗಲ್‌ ತಂಡವನ್ನು ಮನೆಗಟ್ಟಿದೆ.

ಇದನ್ನೂ ಓದಿ :  ಭಾರತ-ಬಾಂಗ್ಲಾ 3ನೇ ಏಕದಿನ ಪಂದ್ಯ: ಟೀಂ ಇಂಡಿಯಾಗೆ ಭರ್ಜರಿ ಗೆಲುವು-ಸರಣಿ ಬಾಂಗ್ಲಾ ವಶ

ದೋಹಾದ ಅಲ್ ತುಮಾಮಾ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದ ಮೊದಲಾರ್ಧದಲ್ಲಿ ಪೋರ್ಚುಗಲ್‌ ಕೋಚ್‌ ಫೆರ್ನಾಂಡೋ ಸ್ಯಾನ್ಟೊಸ್‌, ಸ್ಟಾರ್‌ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋರನ್ನು ಆಡುವ ತಂಡದಿಂದ ಹೊರಗಿಟ್ಟಿದ್ದರು. ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ದುರ್ಬಲ ಸ್ವಿಜರ್‌ಲ್ಯಾಂಡ್‌ ವಿರುದ್ಧ ಇದೇ ಪ್ರಯೋಗ ಮಾಡಿದ್ದ ಸ್ಯಾನ್ಟೊಸ್‌ಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಆ ಪಂದ್ಯದಲ್ಲಿ 6-1 ಗೋಲುಗಳಿಂದ ಗೆದ್ದು ಪೋರ್ಚುಗಲ್‌, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ಆದ್ರೆ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌ ತಂಡವನ್ನು ಮನೆಗಟ್ಟಿ ಹುಮ್ಮಸ್ಸಿನಲ್ಲಿದ್ದ ಮೊರಕ್ಕೋ ತಂಡದ ಭದ್ರ ರಕ್ಷಣಾ ಕೋಟೆಯನ್ನು ಭೇದಿಸಲು ಕ್ರಿಶ್ಚಿಯಾನೋ ರೊನಾಲ್ಡೋ ಅನುಭವ ಪೋರ್ಚುಗಲ್‌ ತಂಡಕ್ಕೆ ಬೇಕಿತ್ತು. ಆದರೆ ಕೋಚ್‌ ಸ್ಯಾನ್ಟೋಸ್‌ ನಿರ್ಧಾರದಿಂದಾಗಿ ರೊನಾಲ್ಡೋ ಫೀಲ್ಡಿಗಿಳಿಯುವ ಮೊದಲೇ ಮೊರಕ್ಕೋ ಒಂದು ಗೋಲು ಭಾರಿಸಿ, ಮುನ್ನಡೆ ಸಾಧಿಸಿತ್ತು. ಸೆಕೆಂಡ್‌ ಹಾಫ್‌ನಲ್ಲಿ ರೊನಾಲ್ಡೋ ಫೀಲ್ಡಿಗಿಳಿದು, ಮಿಂಚಿನಂತೆ ಸಂಚರಿಸಿದರೂ ಯಾವುದೇ ಗೋಲು ಭಾರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಶ್ವದ ಶ್ರೇಷ್ಠ ಫುಟ್ಬಾಲ್‌ ಆಟಗಾರ ತಮ್ಮ ಫುಟ್‌ಬಾಲ್‌ ಜೀವನವನ್ನು ಫಿಫಾ ವರ್ಲ್ಡ್‌ ಕಪ್‌ ಗರಿಯನ್ನು ಗೆಲ್ಲದೆಯೇ ಮುಗಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೋಚ್‌ ಸ್ಯಾನ್ಟೋಸ್‌ ನಿರ್ಧಾರಕ್ಕೆ ಈಗ ಕಟು ಟೀಕೆ ವ್ಯಕ್ತವಾಗಿದ್ದು, ರೊನಾಲ್ಡೋ ಗರ್ಲ್‌ಫ್ರೆಂಡ್‌ ಜಾರ್ಜಿನಾ ರಾಡ್ರಿಗಸ್‌ ಕೂಡ ಕೋಚ್‌ ವಿರುದ್ಧ ಹರಿಹಾಯ್ದಿದ್ದು, ತನ್ನ ಗೆಳೆಯನನ್ನು ಅಂಡರ್‌ ಎಸ್ಟಿಮೇಟ್‌ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

suddiyaana