ಬದರೀನಾಥ-ಕೇದಾರನಾಥ ಭಕ್ತರಿಗೆ ಗುಡ್‌ನ್ಯೂಸ್ – ಏ. 22ರಿಂದ ಕೇದಾರನಾಥ ದೇಗುಲ ಓಪನ್

ಉತ್ತರಾಖಂಡದಲ್ಲಿರುವ ಕೇದಾರನಾಥ ದೇವಾಲಯವು ಏಪ್ರಿಲ್ 22ರಂದು ಭಕ್ತರಿಗೆ ಮತ್ತೆ ತೆರೆಯಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. ಚಳಿಗಾಲದ ಹಿನ್ನೆಲೆಯಲ್ಲಿ ಸುಮಾರು ಆರು ತಿಂಗಳ ಕಾಲ ಈ ದೇವಾಲಯವನ್ನು ಮುಚ್ಚಲಾಗಿತ್ತು. ಬದರೀನಾಥ-ಕೇದಾರನಾಥ ದೇವಸ್ಥಾನ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಹರೀಶ್ ಗೌರ್ ಅವರು, ದೇವಸ್ಥಾನವನ್ನು ಪುನಃ ತೆರೆಯುವ ದಿನಾಂಕ ಮತ್ತು ಸಮಯವನ್ನು ಮಹಾಶಿವರಾತ್ರಿ ದಿನವೇ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಗವಾನ್ ಕೇದಾರನಾಥರ ಶೀತಕಾಲೀನ ಗದ್ದುಗೆ ಆಗಿರುವ ಓಂಕಾರೇಶ್ವರ ದೇವಸ್ಥಾನದಲ್ಲಿ ಭಾನುವಾರ (ಫೆಬ್ರವರಿ 15) ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಧಾರ್ಮಿಕ ವಿದ್ವಾಂಸರು ಮತ್ತು ಪುರೋಹಿತರು ಪಂಚಾಂಗ ಅಥವಾ ಹಿಂದೂ ಕ್ಯಾಲೆಂಡರ್ ವಾಚನದ ಮೂಲಕ ಆಚರಣೆಗಳು ಮತ್ತು ಪ್ರಾರ್ಥನೆಗಳ ನಂತರ ಭಾನುವಾರ ಮುಹೂರ್ತ (ಶುಭ ಸಮಯ)ವನ್ನು ಲೆಕ್ಕ ಹಾಕಿದರು. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದರನಾಥ ದೇವಾಲಯವನ್ನು ಏಪ್ರಿಲ್ 22ರಂದು ಬೆಳಗ್ಗೆ 8 ಗಂಟೆಗೆ ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ. ಕೇದಾರನಾಥ ದೇವಸ್ಥಾನದ ಪುನಃ ಪ್ರಾರಂಭದ ಘೋಷಣೆಯೊಂದಿಗೆ ಗಢ್ವಾಲ್ ಹಿಮಾಲಯ ಪ್ರದೇಶದಲ್ಲಿನ ಚಾರ್ ಧಾಮ್ ಯಾತ್ರೆಯ ವೇಳಾಪಟ್ಟಿಯನ್ನೂ ಅಂತಿಮಗೊಳಿಸಲಾಗಿದೆ.
ಇದನ್ನೂ ಓದಿ: ಮನೆಯಲ್ಲಿ ಶಿವ ಪೂಜೆ ಮಾಡುವುದು ಹೇಗೆ? – ಶಿವರಾತ್ರಿಯ ದಿನ ಅನುಸರಿಸಬೇಕಾದ ಕ್ರಮಗಳೇನು?
ಬದರಿನಾಥ ಧಾಮ ಏಪ್ರಿಲ್ 23ರಂದು ಬಾಗಿಲು ತೆರೆಯಲಿದ್ದು, ಗಂಗೋತ್ರಿ ಧಾಮ ಮತ್ತು ಯಮುನೋತ್ರಿ ಧಾಮ ಏಪ್ರಿಲ್ 19ರಂದು ತೆರೆಯಲಿವೆ. ದಿನಾಂಕಗಳನ್ನು ನಿರ್ಧರಿಸುವ ಮೊದಲು ಓಂಕಾರೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಕೇದಾರನಾಥ ದೇವಸ್ಥಾನದ ಪ್ರಧಾನ ಅರ್ಚಕ ರಾವಲ್ ಭೀಮಾಶಂಕರ್ ಲಿಂಗ್, ಕೇದಾರನಾಥ ಶಾಸಕಿ ಆಶಾ ನೌಟಿಯಾಲ್, ದೇವಸ್ಥಾನ ಸಮಿತಿ ಅಧ್ಯಕ್ಷ ಹೇಮಂತ್ ದ್ವಿವೇದಿ ಮತ್ತಿತರರು ಭಾಗವಹಿಸಿದ್ದರು.
ಚಕರ್‌ಪುರದ ವಂಖಂಡಿ ಮಹಾದೇವ ದೇವಸ್ಥಾನದಲ್ಲಿ ಜಲಾಭಿಷೇಕ ನೆರವೇರಿಸಿದ ನಂತರ ಮಾತನಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಏಪ್ರಿಲ್ 22ರಂದು ಕೇದಾರನಾಥ ದೇವಾಲಯದ ದ್ವಾರಗಳನ್ನು ತೆರೆಯಲಾಗುವುದು ಎಂದು ಘೋಷಿಸಿದರು. ಹಾಗೆಯೇ ಅದಕ್ಕಾಗಿ ಸಿದ್ಧತೆಗಳು ಪ್ರಾರಂಭವಾಗಿವೆ ಎಂದು ಹೇಳಿದರು. ಉತ್ತರಾಖಂಡ ಸರ್ಕಾರವು ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

ನೋಡಿರಿ

