ಟ್ವಿಟ್ಟರ್ ಸ್ಥಾನದಿಂದ ಮಸ್ಕ್ ಕೆಳಗಿಳಿಯಬೇಕೇ? – ಬಳಕೆದಾರರಲ್ಲಿ ಬೇಕು ಎಂದವರೆಷ್ಟು, ಬೇಡ ಎಂದವರೆಷ್ಟು?
ವಾಷಿಂಗ್ಟನ್: ಟ್ವಿಟ್ಟಾರಾಧಿಪತಿ ಎಲಾನ್ ಮಸ್ಕ್ ನಾನಾ ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇದರ ಬೆನ್ನಲ್ಲೇ ಟ್ವಿಟ್ಟರ್ ಬಳಕೆದಾರರಿಗೆ ಮಸ್ಕ್ ನಿರ್ಣಾಯಕ ಪ್ರಶ್ನೆಯೊಂದನ್ನು ಕೇಳಿದ್ದು, ಇದಕ್ಕೆ ಲಕ್ಷಾಂತರ ಮಂದಿ ಪ್ರತಿಕ್ರಿಯಿಸಿದ್ದಾರೆ.
ಎಲಾನ್ ಮಸ್ಕ್ ತಮ್ಮ ಸ್ಥಾನಕ್ಕೆ ಸಂಬಂಧಿಸಿದ್ದ ಪ್ರಶ್ನೆ ಕೇಳಿದ್ದು, ನಾನು ಟ್ವಿಟರ್ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ನಾನು ಈ ಸಮೀಕ್ಷೆಯ ಫಲಿತಾಂಶಗಳಿಗೆ ಬದ್ಧನಾಗಿರುತ್ತೇನೆಂದು ಹೇಳಿದ್ದರು. ಅಲ್ಲದೇ ಈ ಪ್ರಶ್ನೆಗೆ ‘ಹೌದು’ ‘ಬೇಡ’ ಎಂಬ ಆಯ್ಕೆಗಳನ್ನು ನೀಡಿದ್ದರು.
ಇದನ್ನೂ ಓದಿ: ಸೇತುವೆ ಮೇಲೆಯೇ ಭಾಷಣ ಬಿಗಿದ ಎಂಇಎಸ್- ನಿಷೇಧಾಜ್ಞೆ ನಡುವೆಯೂ ನಿಲ್ಲದ ಪುಂಡಾಟಿಕೆ
ಟ್ವಿಟರ್ ಸಿಇಓ ಸ್ಥಾನದಿಂದ ಕೆಳಗಿಳಿಯಬೇಕೇ? ಎಂದು ಮಸ್ಕ್ ಕೇಳಿದ ಪ್ರಶ್ನೆಗೆ ಈವರೆಗೆ 17,502,391 ಮತ ಚಲಾವಣೆಯಾಗಿದ್ದು, ಈ ಪೈಕಿ ಕೆಲವರು ಸಿಇಓ ಸ್ಥಾನದಿಂದ ಕೆಳಗಿಳಿಯುವುದು ಬೇಡ ಎಂದರೆ, ಇನ್ನೂ ಕೆಲವರು ಸ್ಥಾನದಿಂದ ಕೆಳಗಿಳಿಯುವಂತೆ ಹೇಳಿದ್ದಾರೆ. ಅಲ್ಲದೆ, 29 ಲಕ್ಷಕ್ಕೂ ಅಧಿಕ ರೀಟ್ವೀಟ್ಗಳು ಆಗಿದ್ದು, 1.81 ಲಕ್ಷಕ್ಕೂ ಅಧಿಕ ಕಾಮೆಂಟ್ಗಳು ಬಂದಿವೆ. 2.72 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿವೆ.
ಮಸ್ಕ್ ಇಟ್ಟಿದ್ದ ನಿರ್ಣಾಯಕ ಪ್ರಶ್ನೆಗೆ ಶೇ.57.5 ರಷ್ಟು ಮಂದಿ ಹೌದು ಎಂದು ಪ್ರತಿಕ್ರಿಯೆ ನೀಡಿದ್ದು, ಶೇ.42.5ರಷ್ಟು ಮಂದಿ ಬೇಡ ಎಂದು ಹೇಳಿರುವುದು ಕಂಡು ಬಂದಿದೆ. ಫಲಿತಾಂಶ ಆಧರಿಸಿ ಮಸ್ಕ್ ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.
Should I step down as head of Twitter? I will abide by the results of this poll.
— Elon Musk (@elonmusk) December 18, 2022