ಜಿಎಸ್‌ಟಿಗೆ ಹೆದರಿದ ವ್ಯಾಪಾರಸ್ಥರು – ಎರಡೇ ದಿನದಲ್ಲಿ ಅಂಗಡಿ ಗೋಡೆಗಳಲ್ಲಿದ್ದ ಕ್ಯೂಆರ್‌ಕೋಡ್‌ ಮಾಯ!

ಜಿಎಸ್‌ಟಿಗೆ ಹೆದರಿದ ವ್ಯಾಪಾರಸ್ಥರು – ಎರಡೇ ದಿನದಲ್ಲಿ ಅಂಗಡಿ ಗೋಡೆಗಳಲ್ಲಿದ್ದ ಕ್ಯೂಆರ್‌ಕೋಡ್‌ ಮಾಯ!

ರಾಜ್ಯದಲ್ಲಿ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ತೆರಿಗೆ ಕಟ್ಟುವಂತೆ ನೋಟಿಸ್‌ ನೀಡಿದೆ. ಇದೀಗ ಬೆಂಗಳೂರಿನ ವ್ಯಾಪಾರಿಗಳು ಡಿಜಿಟಲ್‌ ಪೇಮೆಂಟ್‌ ಸ್ವೀಕರಿಸೋದಿಕ್ಕೆ ಹಿಂದೇಟು ಹಾಕಿದ್ದಾರೆ. ಗ್ರಾಹಕರ ಬಳಿ ನಗದು ನೀಡುವಂತೆ ಬೇಡಿಕೆಯಿಡುತ್ತಿದ್ದಾರೆ.

ಇದನ್ನೂ ಓದಿ:  23 ವರ್ಷದ ಯಾನಿಕ್ ಸಿನ್ನರ್ ವಿಂಬಲ್ಡನ್ ದೊರೆ – ಸ್ಪೇನ್ ಟೆನ್ನಿಸ್ ಕಿಂಗ್ ಅಲ್ಕರಾಝ್ ಗರ್ವಭಂಗ

ಯುಪಿಐ ಪೇಮೆಂಟ್‌ ಬಂದಾಗಿನಿಂದ ವ್ಯಾಪಾರಸ್ಥರು ಗೋಡೆಗಳಲ್ಲಿ ಕ್ಯೂಆರ್‌ ಕೋಡ್‌ಗಳನ್ನ ಅಂಟಿಸುತ್ತಿದ್ದರು. ಇದೀಗ ವಾಣಿಜ್ಯ ತೆರಿಗೆ ಇಲಾಖೆ  ಜಿಎಸ್‌ಟಿ ತೆರಿಗೆ ನೋಟಿಸ್‌ಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ ಅನೇಕ ವ್ಯಾಪಾರಿಗಳು ಯುಪಿಐ ಮೂಲಕ ಹಣ ಸ್ವೀಕರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಂಗಡಿಗಳಲ್ಲಿನ ಟೇಬಲ್ ಮೇಲೆ ರಾಜಾರೋಷವಾಗಿ ಕಾಣಿಸುತ್ತಿದ್ದ ಎರಡ್ಮೂರು ಕ್ಯೂಆರ್ ಕೋಡ್‌ಗಳು ಕಳೆದ ಒಂದೆರೆಡು ದಿನಗಳಿಂದ ಮರೆಯಾಗುತ್ತಿವೆ. ಗೋಡೆಗೆ ಅಂಟಿಸಿದ್ದ ಕ್ಯೂಆರ್ ಕೋಡ್‌ಗಳನ್ನು ವ್ಯಾಪಾರಿಗಳು ಮರೆ ಮಾಡುತ್ತಿದ್ದಾರೆ. ಗ್ರಾಹಕರಿಂದ ನಗದನ್ನು ನಿರೀಕ್ಷೆ ಮಾಡುತ್ತಿದ್ದು, ಯುಪಿಐ ಪೇಮೆಂಟ್ ಮಾಡುತ್ತೇವೆ ಎಂದು ಕೇಳುವ ಗ್ರಾಹಕರಿಗೆ ಮಾತ್ರ ಕ್ಯೂಆರ್ ಕೋಡ್ ನೀಡುತ್ತಿದ್ದಾರೆ.

ಬೇಕರಿ, ಕಾಂಡಿಮೆಂಟ್ಸ್‌ಗಳಲ್ಲಿ ಭಿನ್ನ ರೀತಿಯ ಜಿಎಸ್‌ಟಿ ಇರುವ ಸರಕುಗಳು ಇರುತ್ತವೆ. ಸಿಗರೇಟು, ಗುಟ್ಕಾ ಶೇ.28ರಷ್ಟು ಜಿಎಸ್‌ಟಿ ವ್ಯಾಪ್ತಿಗೆ ಬಂದರೆ, ಚಹಾ ಶೇ.5ರಷ್ಟು ಜಿಎಸ್‌ಟಿ ವ್ಯಾಪ್ತಿಗೆ ಬರುತ್ತದೆ. ಸಣ್ಣ ವ್ಯಾಪಾರಿಗಳು ಜಿಎಸ್‌ಟಿ ಕಾಂಪೋಸಿಷನ್ ಶುಲ್ಕವನ್ನು ಕಟ್ಟಬಹುದು. ಇದರಿಂದ ಬೃಹತ್ ತೆರಿಗೆ ನೋಟಿಸುಗಳಿಂದ ಪಾರಾಗಬಹುದು. ಹೊಟೇಲ್ ಉದ್ಯಮದಲ್ಲಿ ವ್ಯಾಪಾರಿಗಳಿಗೆ ಈ ಬಗ್ಗೆ ಸೂಕ್ತ ತರಬೇತಿ ನೀಡಲಾಗಿದೆ. ಆದರೆ, ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ತೆರಿಗೆ ಕುರಿತು ಜ್ಞಾನವಿಲ್ಲ. ಅದಕ್ಕೆ ತೆರಿಗೆ ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ಮಾಡಬೇಕು. ನೋಟಿಸ್ ಬಂದಾಗ ವ್ಯಾಪಾರಿಗಳು ಯುಪಿಐನಿಂದ ಹಿಂದೆ ಸರಿಯಲು ಯತ್ನಿಸುವುದು ಸಹಜ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.

ತರಕಾರಿ ವ್ಯಾಪಾರಿಗಳಿಗೆ ಹೇಳಿಕೊಳ್ಳುವಂತಹ ಸಮಸ್ಯೆ ಆಗಿಲ್ಲ. ಆದರೆ, ಹಣ್ಣು, ಒಣಹಣ್ಣು, ಬಟ್ಟೆ ವ್ಯಾಪಾರಿಗಳಿಗೆ ಯುಪಿಐ ಮೂಲಕ ವ್ಯವಹರಿಸುವ ಸಂದರ್ಭದಲ್ಲಿ ಸಮಸ್ಯೆ ಎದುರಾಗುತ್ತಿದೆ. ಆದರೆ, ಅವರಿಗೆ ಯಾವುದು ತೆರಿಗೆ ವ್ಯಾಪ್ತಿಗೆ ಬರುತ್ತೇವೆ ಎಂಬ ಮಾಹಿತಿ ಸಿಗುತ್ತಿಲ್ಲ. ಈ ಕುರಿತು ವ್ಯಾಪಾರಸ್ಥರು ಸಭೆ ನಡೆಸುತ್ತೇವೆ. ಬಳಿಕ ಈ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಯಾವುದಾದರೂ ವ್ಯಾಪಾರಿಗಳಿಗೆ ತೊಂದರೆ ಉಂಟಾದರೆ ಸಂಘಟನೆಯ ಗಮನಕ್ಕೆ ತರಬಹುದು ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಡಾ.ಸಿ.ಇ. ರಂಗಸ್ವಾಮಿ ತಿಳಿಸಿದ್ದಾರೆ.

ಜಿಎಸ್‌ಟಿ ನೋಂದಣಿ ಇಲ್ಲದೇ, ತೆರಿಗೆ ವ್ಯಾಪ್ತಿಗೆ ಬರುವಷ್ಟು ವಹಿವಾಟು ನಡೆಯುತ್ತಿದೆ ಎಂದು ಗೊತ್ತಿದ್ದರೂ ಅನೇಕ ಸಣ್ಣ ವ್ಯಾಪಾರಿಗಳು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹ ವ್ಯಾಪಾರಿಗಳಿಗೆ ಐಟಿ ಇಲಾಖೆ ನೋಟಿಸ್‌ಗಳನ್ನು ಜಾರಿ ಮಾಡುತ್ತಿದೆ ಎಂದು ಈ ಬೆಳವಣಿಗೆಗಳ ಕುರಿತು ಮಾಹಿತಿ ಹೊಂದಿರುವ ಅಧಿಕಾರಿ ಮಾಹಿತಿ ನೀಡಿದ್ದಾರೆ.

Shwetha M