ಇಂದಿನಿಂದ ಪಿತೃಪಕ್ಷ ಆರಂಭ – ‘ಮಹಾಲಯ’ ಅಂದ್ರೆ ಏನು? ಹೇಗೆ ಮಾಡಬೇಕು?

ಇಂದಿನಿಂದ ಪಿತೃಪಕ್ಷ ಆರಂಭ –  ‘ಮಹಾಲಯ’ ಅಂದ್ರೆ ಏನು? ಹೇಗೆ ಮಾಡಬೇಕು?

ಪಿತೃದೇವತೆಗಳಿಗೆ ಮಾಡುವಂಥ ಕಾರ್ಯ ಮತ್ತು ಸಮಯದ ದೃಷ್ಟಿಯಿಂದ ಬಹಳ ಮುಖ್ಯವಾದದ್ದು ಪಿತೃಪಕ್ಷ. ಇದೇ ಸೆಪ್ಟೆಂಬರ್ 8ನೇ ತಾರೀಕಿನಿಂದ ಪಿತೃಪಕ್ಷ ಆರಂಭವಾಗಲಿದೆ. ಇದು ಸೆಪ್ಟೆಂಬರ್ 21ನೇ ತಾರೀಕಿಗೆ ಮಹಾಲಯ ಅಮಾವಾಸ್ಯೆಯೊಂದಿಗೆ ಕೊನೆಯಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಒಬ್ಬ ವ್ಯಕ್ತಿ ಮುಖ್ಯವಾಗಿ ಮೂರು ಋಣಗಳನ್ನು ತೀರಿಸಬೇಕು: ಪಿತೃ ಋಣ, ದೇವ ಋಣ ಹಾಗೂ ಋಷಿ ಋಣ. ಮಾತಾ- ಪಿತೃಗಳ ಸೇವೆ ಮಾಡುವ ಮೂಲಕ ಹಾಗೂ ಪಿತೃ ಯಜ್ಞವನ್ನು ಮಾಡುವುದರೊಂದಿಗೆ ಅತಿ ಮುಖ್ಯವಾಗಿ ಪಿತೃ ಋಣವನ್ನು ತೀರಿಸುವುದಕ್ಕೆ ಅವಕಾಶ ಆಗುತ್ತದೆ. ಅಂದ ಹಾಗೆ ಈ ಅವಧಿಯಲ್ಲಿಯೇ ಯಾಕೆ ಪಕ್ಷವನ್ನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮನುಷ್ಯರ ಲೆಕ್ಕದಲ್ಲಿನ ಒಂದು ತಿಂಗಳು ಅಂದರೆ, ಅದು ಪಿತೃ ದೇವತೆಗಳಿಗೆ ಒಂದು ದಿನ. ಇನ್ನು ಅವರ ಪಾಲಿಗೆ ಶುಕ್ಲ ಪಕ್ಷ ಎಂಬುದು ಹಗಲಾದರೆ, ಕೃಷ್ಣ ಪಕ್ಷವು ರಾತ್ರಿ. ಹೀಗೆ ಪಿತೃ ದೇವತೆಗಳಿಗೆ ಅಂತ ನೀಡುವ ತಿಲ ತರ್ಪಣ ಮತ್ತು ಪಿಂಡ ಪ್ರದಾನವು ಅವರಿಗೆ ಇಡೀ ವರ್ಷಕ್ಕೆ ಸಾಕಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಪಕ್ಷವನ್ನು ಮಾಡಲಾಗುತ್ತದೆ.

ಈ ಅವಧಿಯನ್ನು ಮಹಾಲಯ ಪಕ್ಷ ಅಂತಲೂ ಕರೆಯಲಾಗುತ್ತದೆ. ಮಹಾ ಅಂದರೆ ಭಾರೀ ಅಥವಾ ದೊಡ್ಡದು ಎಂಬ ಅರ್ಥ ಅಂದುಕೊಳ್ಳೋಣ. ಇನ್ನು ಲಯ ಎಂದಾದರೆ ನಾಶ. ದೇವತೆಗಳು ಮತ್ತು ರಾಕ್ಷಸರ ನಡುವೆ ನಡೆದಂಥ ಒಂದು ಯುದ್ಧದಲ್ಲಿ, ಅದು ಕೂಡ ಭಾದ್ರಪದ  ಕೃಷ್ಣಪಕ್ಷ ಮಾಸದಲ್ಲಿ ಹಲವು ದೇವತೆಗಳು ಹಾಗೂ ಋಷಿಗಳು ರಾಕ್ಷಸರಿಂದ ಸಾವನ್ನಪ್ಪುತ್ತಾರೆ. ಈ ದೇವತೆಗಳು ಹಾಗೂ ಋಷಿಗಳು ನಮ್ಮ ಹಿರಿಯರಿದ್ದಂತೆ ಹಾಗೂ ಇದು ಮಹಾಲಯದ ಅವಧಿಯಲ್ಲಿ, ಆದ್ದರಿಂದ ಇದನ್ನು ಮಹಾಲಯ ಎನ್ನಲಾಗುತ್ತದೆ.

ಪಿತೃಪಕ್ಷದ   ಸಂದರ್ಭದಲ್ಲಿ ಯಾರಿಗೆಲ್ಲ ಪಿಂಡ ಪ್ರಧಾನ ಮಾಡಬಹುದು  ಅಂದ್ರೆ.. ಹಂಡತಿ ಮಗ, ಅಣ್ಣ- ತಮ್ಮಂದಿರು, ಅಣ್ಣ- ತಮ್ಮಂದಿರ ಪತ್ನಿಯರು, ತಂದೆಯ ಅಣ್ಣತಮ್ಮಂದಿರು, ತಂದೆಯ ಅಣ್ಣ- ತಮ್ಮಂದಿರ ಪತ್ನಿಯರು, ಸೋದರ ಮಾವಂದಿರು, ಸೋದರ ಮಾವಂದಿರ ಪತ್ನಿಯರು, ಸ್ವಂತ ಮಗಳು, ಅಳಿಯ, ಸ್ವಂತ ಅಕ್ಕ- ತಂಗಿಯರು, ಅಕ್ಕತಂಗಿಯರ ಪತಿ, ಅಕ್ಕತಂಗಿಯರ ಮಕ್ಕಳು, ತಂದೆಯ ಅಕ್ಕತಂಗಿಯರು, ಅವರ ಪತಿ, ತಾಯಿಯ ಅಕ್ಕತಂಗಿಯರು, ಅವರ ಪತಿ, ಮಾವ, ಅತ್ತೆ, ಹೆಂಡತಿಯ ಅಣ್ಣ-ತಮ್ಮಂದಿರು, ಅವರ ಹೆಂಡತಿ, ವಿದ್ಯೆ ಕಲಿಸಿದ ಗುರು, ಅವರ ಹೆಂಡತಿ, ಆಚಾರ್ಯರು (ಕುಟುಂಬ ಪುರೋಹಿತರು), ಅವರ ಹೆಂಡತಿ, ಶಿಷ್ಯ, ಸ್ನೇಹಿತರು.

ಈ ಮೇಲ್ಕಂಡವರಲ್ಲಿ ಯಾರದು ಹೆಸರು ಗೊತ್ತಿರುವುದಿಲ್ಲವೋ ಮಹಿಳೆಯರಿಗೆ ಯಜ್ಞಮ್ಮ ಹಾಗೂ ಪುರುಷರಿಗೆ ಯಜ್ಞಪ್ಪ ಎಂಬ ಹೆಸರು ಬಳಕೆ ಮಾಡಲಾಗುತ್ತದೆ. ಇನ್ನು ಗೋತ್ರ ಗೊತ್ತಿಲ್ಲದಿದ್ದರೆ ಕಾಶ್ಯಪ ಗೋತ್ರ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಸಾಕಿದ್ದಂಥ ನಾಯಿಗೂ ಈ ಸಮಯದಲ್ಲಿ ಸ್ಮರಣೆ ಮಾಡಿ ಪಕ್ಷ ಮಾಡಲಾಗುತ್ತದೆ. ನೆನಪಿಟ್ಟುಕೊಳ್ಳಬೇಕಾದ ಮತ್ತೊಂದು ಮುಖ್ಯ ಅಂಶ ಏನೆಂದರೆ, ಒಬ್ಬ ವ್ಯಕ್ತಿ ಮೃತಪಟ್ಟು, ಒಂದು ವರ್ಷ ಸಂಪೂರ್ಣವಾಗಿ ಕಳೆಯುವ ತನಕ, ಆ ವ್ಯಕ್ತಿಯ ಸಾಂವತ್ಸರಿಕ ಶ್ರಾದ್ಧ ಆರಂಭವಾಗುವ ತನಕ ಅಂಥವರಿಗೆ ಪಕ್ಷದಲ್ಲಿ ತರ್ಪಣ ಬಿಡುವುದಿಲ್ಲ. ಸಾಧ್ಯವಿದ್ದಲ್ಲಿ ಪಿತೃಪಕ್ಷದಲ್ಲಿ ಎಲ್ಲ ದಿನವೂ ತರ್ಪಣವನ್ನು ನೀಡಬೇಕು.

Kishor KV